ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಹಾಲು ಉತ್ಪಾದಕರ ಒಕ್ಕೂಟದ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿಗಳ ಸಭೆಯಲ್ಲಿ ಸೂಚನೆ ನೀಡಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಗ್ರಾಪಂಗಳು ಸರ್ಕಾರದ ಒಂದು ಭಾಗ. ಸ್ಥಳೀಯ ಸರ್ಕಾರವಾಗಿ ತಾಪಂ ಇಒಗಳಿಂದ ಹಿಡಿದು ಸ್ಥಳೀಯ ನ್ಯಾಯಬೆಲೆ ಅಂಗಡಿ ಮಾಲೀಕವರೆಗೆ ಎಲ್ಲರೂ ಗ್ರಾಪಂಗಳ ಕೆಡಿಪಿ ಸಭೆಗಳಲ್ಲಿ ಭಾಗವಹಿಸುವುದು ಕಡ್ಡಾಯ. ಇದಕ್ಕಾಗಿ ರಾಜ್ಯ ಸರ್ಕಾರ ಸುತ್ತೊಲೆ ಹೊರಡಿಸಿದ್ದು ಅದರಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳೂ ಕೆಡಿಪಿ ಸಭೆಯಲ್ಲಿ ಭಾಗವಹಿಸಲೇಬೇಕು ಎಂದರು.ಡೈರಿಗಳು ಯಾವುದೇ ವ್ಯಕ್ತಿ ನಿರ್ಮಿತವಲ್ಲ. ಬದಲಾಗಿ ಅವು ಸಹಕಾರಿ ನಿಯಮದಡಿ ರಚನೆಯಾಗಿವೆ. ಸರ್ಕಾರದ ಸಹಕಾರ ಇಲಾಖೆ ಕಾರ್ಯವ್ಯಾಪ್ತಿಗೆ ಸೇರಿವೆ. ಕ್ಷೇತ್ರದ ಶಾಸಕರಾದವರು ಸರ್ಕಾರದ ಒಂದು ಭಾಗ ಎನ್ನುವ ಅರಿವು ಡಾಲು ರವಿಗಿಲ್ಲ. ಸಹಕಾರಿ ನಿಯಮಗಳ ಅರಿವಿಲ್ಲದ ವ್ಯಕ್ತಿ ತಾಲೂಕು ವ್ಯಾಪ್ತಿಯಲ್ಲಿ ಪಾಳೇಗಾರಿಕೆಯ ನಡವಳಿಕೆ ಪ್ರದರ್ಶಿಸುತ್ತಿದದಾರೆ. ಡಾಲು ರವಿಯ ಗೊಡ್ಡು ಬೆದರಿಕೆಗಳಿಗೆ ನಾನು ಬೆದರುವವನಲ್ಲ ಎಂದು ಕಿಡಿಕಾರಿದರು.
ಶಾಸಕರನ್ನು ಆಹ್ವಾನಿಸದೆ ಹಕ್ಕು ಚ್ಯುತಿ ಮಾಡಿದ ತಾಲೂಕಿನ ಹರಿರಾಯನಹಳ್ಳಿ ಡೈರಿ ನಡೆಗೆ ಜಿಲ್ಲಾಧಿಕಾರಿಗಳು ಈಗಾಗಲೇ ಸಹಕಾರ ಇಲಾಖೆಗೆ ನೋಟಿಸ್ ನೀಡಿದ್ದಾರೆ. ಡಾಲು ರವಿಯಂತೆಯೇ ಪಾಳೇಗಾರಿಕೆ ಭಾಷೆಯಲ್ಲಿ ಮಾತನಾಡುವುದು ನನಗೂ ಬರುತ್ತದೆ. ಆದರೆ, ಕ್ಷೇತ್ರದ ಶಾಸಕನಾಗಿ ನಾನು ಜನರ ಗೌರವಕ್ಕೆ ಧಕ್ಕೆಯಾಗದಂತೆ ನಡೆಯಬೇಕಾಗಿದೆ ಎಂದರು.
ಕ್ಷೇತ್ರದ ಶಾಸಕನಾದ ನನ್ನನ್ನು ಡಾಲು ರವಿ ಕೇವಲವಾಗಿ ನಿಂದಿಸಿ ಮಾತನಾಡಿದ್ದಾರೆ. ಅವರು ತನ್ನ ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಡೈರಿಗಳ ಪ್ರಗತಿಗೆ ಚಿಂತಿಸಲಿ. ಶಾಸಕರನ್ನು ಬಹಿರಂಗವಾಗಿ ನಿಂದಿಸಿದರೆ ನಾನು ದೊಡ್ಡವನಾಗುತ್ತೇನೆ ಎನ್ನುವ ಭ್ರಮೆಯಿಂದ ಹೊರಗೆ ಬರಲಿ. ಇಲ್ಲದಿದ್ದರೆ ಅವರಂತೆಯೇ ನನ್ನ ಭಾಷೆಯನ್ನು ಬದಲಿಸಿಕೊಂಡು ಉತ್ತರಿಸಬೇಕಾಗುತ್ತದೆಂದು ಶಾಸಕ ಎಚ್.ಟಿ.ಮಂಜು ಎಚ್ಚರಿಸಿದರು.