ಚಿಕ್ಕಪ್ಪನಹಳ್ಳಿ ಷಣ್ಮುಖ
ಚಿತ್ರದುರ್ಗದ ಹೃದಯ ಭಾಗದಲ್ಲಿರುವ ಗೊಲ್ಲರ ಹಾಸ್ಟೆಲ್ ನೆಲಸಮಗೊಳಿಸಿ ಅಲ್ಲೊಂದು ಸಮುದಾಯ ಭವನ ನಿರ್ಮಾಣಕ್ಕೆ ಮಂದಾಗಿರುವ ಗೊಲ್ಲರ ಸಂಘದ ಪದಾಧಿಕಾರಿಗಳು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನವನ್ನು ಅಪವ್ಯಯ ಮಾಡಿರುವುದು ಮೇಲು ನೋಟಕ್ಕೆ ಸ್ಪಷ್ಟವಾದಂತೆ ಕಾಣಿಸುತ್ತಿದೆ. ಈ ಸಂಬಂಧ ತಹಸೀಲ್ದಾರರು ಸ್ಥಳ ತನಿಖೆ ನಡೆಸಿ ನೀಡಿರುವ ಪರಿಶೀಲನಾ ವರದಿ ಬೆಚ್ಚಿ ಬೀಳಿಸುವಂತಿದ್ದು ಎಂಪಿ ಫಂಡ್ ಬಳಕೆಗೆ ಹೀಗೂ ಅಡ್ಡದಾರಿಗಳಿವೆಯಾ ಎಂಬ ಸಂದೇಹ ಮೂಡಿಸಿದೆ.
ಯಾದವ ಸಂಘದ ಮುಖಂಡ ಚಂದ್ರಶೇಖರ್ ಎಂಬುವರು ಕಳೆದ ಡಿಸೆಂಬರ್ 24 (17-12-2024) ರಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಯಾದವ ಸಂಘದಿಂದ ನಿರ್ಮಿಸಲಾಗುತ್ತಿರುವ ಸಮುದಾಯ ಭವನಕ್ಕೆ ಹಿಂದಿನ ಸಂಸದರಾದ ಎ.ನಾರಾಯಣಸ್ವಾಮಿ ಅವರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 50 ಲಕ್ಷ ರು. ಮಂಜೂರು ಮಾಡಿದ್ದಾರೆ. ಕಾಮಗಾರಿಯನ್ನು ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಕಾಮಗಾರಿಯ ಈ ಹಂತದ ಪರಿಶೀಲನಾ ವರದಿ ನೀಡುವಂತೆ ಮನವಿ ಮಾಡಿದ್ದರು.ಮನವಿ ಅನುಸಾರ ಜಿಲ್ಲಾಧಿಕಾರಿಗಳು ಚಿತ್ರದುರ್ಗ ತಹಸೀಲ್ದಾರರಿಗೆ ಸೂಚನೆ ನೀಡಿ ಸಮುದಾಯ ಭವನ ನಿರ್ಮಾಣದ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಗುಣಮಟ್ಟದ ಪರಿಶೀಲನಾ ವರದಿ ಸಲ್ಲಿಸುವಂತೆ ತಾಕೀತು ಮಾಡಿದ್ದರು. ಪರಿಶೀಲನಾ ವರದಿ ಪಡೆಯಲು ಚಿತ್ರದುರ್ಗ ಕಸಬಾ ಹೋಬಳಿಯ ರಾಜಸ್ವ ನಿರೀಕ್ಷಕರ ನಿಯೋಜನೆ ಮಾಡಿದ ತಹಸೀಲ್ದಾರರು ಜರೂರು ಎಂಬುದ ನೆನಪು ಮಾಡಿದ್ದರು.
ರಾಜಸ್ವ ನಿರೀಕ್ಷಕರ ತಂಡ ನೀಡಿದ ಪರಿಶೀಲನಾ ವರದಿಯನ್ನು ತಹಸೀಲ್ದಾರರು ಡಿಸೆಂಬರ್ 30, 2024 ರಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಸಿ ಮೂರು ತಿಂಗಳಾದರೂ ಕಾಮಗಾರಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಪರಿಶೀಲನಾ ತಂಡ ಬಂದು ಹೋದ ನಂತರವಾದರೂ ಎಚ್ಚೆತ್ತುಕೊಂಡು ಕಾಮಗಾರಿಗೆ ಚುರುಕಿನ ವೇಗ ನೀಡಬಹುದಿತ್ತು. ಆದರೆ ಅದು ಸಾಧ್ಯವಾಗದೇ ಹೋಗಿದೆ. ಅದೇ ಮೋಟು ಗೋಡೆ, ಒಂದಿಷ್ಟು ಕಬ್ಬಿಣದ ರಾಡುಗಳು ಬಿಟ್ಟರೆ ಅಲ್ಲಿ ಬೇರೆ ಏನೂ ಇಲ್ಲ. ಎಂಪಿ ಫಂಡ್ ಸ್ವಾಹ ಮಾಡಲು ಸಂಘಟಿತ ಯತ್ನಗಳು ನಡೆದಿರುವ ಸಾಧ್ಯತೆಗಳು ಪ್ರಧಾನವಾಗಿ ಬಿಂಬಿತವಾಗಿವೆ.