ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗ ಹೊರವಲಯದಲ್ಲಿ ಬಸವಕೇಂದ್ರ ಮುರುಘಾಮಠದಿಂದ ನಿರ್ಮಿಸಲಾಗುತ್ತಿರುವ ಬಸವ ಪುತ್ಥಳಿಗೆ ಸರ್ಕಾರಿ ಅನುದಾನ ಬಳಕೆಯಾಗಿರುವ ಪ್ರಮಾಣ ಕುರಿತಂತೆ ತನಿಖೆಗಾಗಿ ತಂಡ ರಚನೆ ಮಾಡಿದ್ದ ಜಿಲ್ಲಾಡಳಿತ ವರದಿ ಪಡೆಯುವಲ್ಲಿ ಉದಾಸೀನ ತೋರಿತೇ? ಅಥವಾ ಒತ್ತಡದ ಕಾರಣಕ್ಕೆ ತನಿಖೆಯ ಪ್ರಕ್ರಿಯೆಯನ್ನೇ ಕೈ ಬಿಟ್ಟಿತಾ?
ಚಿತ್ರದುರ್ಗದ ಜನತೆಯಲ್ಲಿ ಇಂತಹದ್ದೊಂದು ಅನುಮಾನ ಕಾಡುತ್ತಿದೆ. ಸರ್ಕಾರಿ ಅನುದಾನ ಬಿಡುಗಡೆ ಹಾಗೂ ಬಳಕೆ ಕುರಿತಂತೆ ವರದಿ ನೀಡಲು ಇಷ್ಟೊಂದು ದಿನ ಬೇಕಾ ? ಎಲ್ಲ ಕಡತಗಳು ಜಿಲ್ಲಾಧಿಕಾರಿ ಬಳಿಯೇ ಇರುತ್ತವೆ, ಪರಿಶೀಲಿಸಲು ತಿಂಗಳುಗಟ್ಟಲೆ ಸಮಯ ಅಗತ್ಯವಿತ್ತಾ ಎಂಬ ಪ್ರಶ್ನೆಗಳು ಉದ್ಭವಿಸಿರುವುದೇ ಜನರಲ್ಲಿನ ಅನುಮಾನಕ್ಕೆ ಮೂಲ ಕಾರಣ.ಮಾಜಿ ಸಚಿವ ಹೆಚ್.ಏಕಾಂತಯ್ಯ ಜಿಲ್ಲಾಡಳಿತಕ್ಕೆ ದೂರು ನೀಡಿ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಆವರಣದಲ್ಲಿ ಜಗಜ್ಯೋತಿ ಬಸವೇಶ್ವರ ಪುತ್ಥಳಿ ನಿರ್ಮಿಸಲು 2802 ಕೋಟಿ ರು. ವೆಚ್ಚದ ಅಂದಾಜು ಪಟ್ಟಿಯ ತಯಾರಿಸಲಾಗಿದ್ದು, ರಾಜ್ಯ ಸರ್ಕಾರದಿಂದ ರು 35.00 ಕೋಟಿ ಅನುದಾನ ಷರತ್ತುಗೊಳಪಟ್ಟು ಮಂಜೂ ರಾಗಿದೆ. ಈ ಷರತ್ತುಗಳನ್ನು ಉಲ್ಲಂಘಿಸಿ ಮಂಜೂರಾತಿ ಹಣವನ್ನು ಶ್ರೀ ಮಠದ ಪೀಠಾಧಿಪತಿಗಳು ಸಂಬಂಧ ಪಟ್ಟವರ ಜೋತೆ ಶಾಮೀಲಾಗಿ ನಿಯಾಮಬಾಹಿರವಾಗಿ ವೆಚ್ಚ ಮಾಡಿದ್ದಾರೆ. ಪ್ರತಿಮೆ ನಿರ್ಮಿಸಲು C.J.INFRA ENGG. PVT. LTD & JCPL ಗುತ್ತಿಗೆ ನೀಡಿದ್ದು, ಇದು ಕೂಡ ಕಾನೂನು ಬಾಹಿರವಾಗಿದೆ. ಶ್ರೀ ಮಠದ ಪೀಠಾಧಿಪತಿ ಗಳು ಸರ್ಕಾರದ ಅನುದಾನವನ್ನು ದುರುಪಯೋಗ, ದುರ್ಬಳಕೆ ಮಾಡುವ ಮೂಲಕ ಕರ್ತವ್ಯಲೋಪ, ನಂಬಿಕೆ ದ್ರೋಹ, ವಂಚನೆಯಂತಹ ಅಪರಾಧಗಳನ್ನು ಮಾಡಿದ್ದಾರೆ. ಈ ಬಗ್ಗೆ ತನಿಖೆ ಮಾಡಿ ಸಂಬಂಧ ಪಟ್ಟವರ ಮೇಲೆ ಕಾನೂನು ಕ್ರಮಜರುಗಿಸ ಬೇಕೆಂದು ಏಕಾಂತಯ್ಯ ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ವಿನಂತಿಸಿದ್ದರು. ಬಸವ ಪ್ರತಿಮೆ ಬಗ್ಗೆ ಅವ್ಯವಹಾರ, ಅನುದಾನ ದುರ್ಬಳಕೆ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ತಕ್ಷಣವೇ ದೂರುದಾರರಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನೇತೃತ್ವದಲ್ಲಿ ಐವರ ಸಮಿತಿ ರಚಿಸಿ ಹದಿನೈದು ದಿನದ ಒಳಗಾಗಿ ವರದಿ ನೀಡುವಂತೆ ಸೂಚಿಸಿದ್ದಾರೆ. ಕಳೆದ ಡಿಸೆಂಬರ್ ಒಂದರಂದೇ ಸಮಿತಿ ರಚಿಸಿ ಆಜ್ಞಾಪನಾ ಪತ್ರ ಹೊರಡಿಸಲಾಗಿದ್ದು, ಇದರ ಪ್ರಕಾರ ಡಿಸೆಂಬರ್ 15 ಕ್ಕೆ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಆದರೆ ಜಿಲ್ಲಾಧಿಕಾರಿ ಸಮಿತಿ ರಚಿಸಿ ಒಂದುವರೆ ತಿಂಗಳಾಗುತ್ತಾ ಬಂದರೂ ವರದಿ ಸಲ್ಲಿಕೆಯಾಗಿಲ್ಲ.
ಏತನ್ಮಧ್ಯೆ ಸಾಮಾಜಿಕ ಕಾರ್ಯಕರ್ತ ಡಾ.ಮಧುಕುಮಾರ್ ಎಂಬುವರು ಪ್ರತಿಮೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೆಲ ಆಕ್ಷೇಪಣೆ ಹಾಗೂ ಅನುಮಾನಗಳ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರಿಗೆ ಎರಡು ಪುಟಗಳಷ್ಟು ಸುದೀರ್ಘ ಪತ್ರ ಬರೆದಿದ್ದರು. ಪ್ರತಿಮೆ ಆರಂಭದಲ್ಲಿ ನೂರು ಅಡಿ ಎತ್ತರವಿದ್ದು ನಂತರ 323 ಅಡಿಗೆ ಎತ್ತರಿಸಲು ಯಾವ ತಜ್ಞರು ಸಲಹೆ ನೀಡಿದ್ದರು ? ಇದಕ್ಕಾಗಿ ತಜ್ಞರು ನೀಡಿದು ಅನುಮೋದಿತ ವೆಚ್ಚವೆಷ್ಟು ? ಸರ್ಕಾರ ಹಣ ಬಿಡುಗಡೆ ಮಾಡುವಾಗ ವಿಧಿಸಿದ ನಿಬಂಧನೆಗಳ ಖರ್ಚು ಮಾಡುವಾಗ ಅನುಸರಿಸಲಾಗಿದೆಯೇ ? ಎಂದು ಪ್ರಶ್ನಿಸಿದ್ದರು.ಸರ್ಕಾರದ ಅನುದಾನ ಹೊರತು ಪಡಿಸಿ ಇತರೆ ಮೂಲಗಳಿಂದ ಪುತ್ಥಳಿ ನಿರ್ಮಾ್ಣಕ್ಕೆ ಬಂದಿರುವ ಅನುದಾನವೆಷ್ಟು? ಭಕ್ತರಿಂದ ಬಂದ ಹಣದ ಬಗ್ಗೆ ವಾರ್ಷಿಕ ಲೆಕ್ಕದಲ್ಲಿ ನಮೂದಾಗಿದೆಯೇ ? ಹಾಲಿ ನಡೆದಿರುವ ಕಾಮಗಾರಿಯ ಗುಣಮಟ್ಟ ಹಾಗೂ ತಾಂತ್ರಿಕ ಪರಿಶೀಲನೆ ನಡೆದಿದೆಯೇ ? ಈ ಬಗ್ಗೆ ತಜ್ಞರು ನೀಡಿರುವ ವರದಿ ಎಲ್ಲಿದೆ ? ಎಂಬಿತ್ಯಾದಿ ಹನ್ನೊಂದು ಅಂಶಗಳ ನಮೂದಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಉತ್ತರ ಯಾಚಿಸಿದ್ದರು. ತನಿಖೆ ಪ್ರಕ್ರಿಯೆಯೇ ಆರಂಭವಾಗದ ಕಾರಣ ಯಾರೊಬ್ಬರಿಗೂ ಉತ್ತರ ದೊರೆತಿಲ್ಲ, ವಾಸ್ತವಾಂಶದ ವರದಿಯೂ ಸಿದ್ದವಾಗಿಲ್ಲ.
ಸರ್ಕಾರದಿಂದ ನೇರವಾಗಿ ಮುರುಘಾಮಠಕ್ಕೆ ಅನುದಾನ ಬಿಡುಗಡೆಯಾಗಿದ್ದು ಹಣ ಬಳಕೆ ಪ್ರಮಾಣ ಪತ್ರವ ಸರ್ಕಾರಕ್ಕೆ ಸಲ್ಲಿಸಿ ಮತ್ತೆ ಮತ್ತೆ ಅನುದಾನ ಬಿಡುಗಡೆ ಮಾಡಿಸಿಕೊಳ್ಳಲಾಗಿದೆ. ಮುಜರಾಯಿ ಇಲಾಖೆಯಿಂದ ಹತ್ತು ಕೋಟಿ ಅನುದಾನ ಬಂದಿದ್ದು ಅದರಲ್ಲಿ ಐದು ಕೋಟಿ ಅನುದಾನವ ಮುರುಘಾಮಠಕ್ಕೆ ನೀಡಲಾಗಿದ್ದು ಉಳಿದ ಐದು ಕೋಟಿ ಮೊತ್ತ ಜಿಲ್ಲಾಧಿಕಾರಿ ಬಳಿ ಹಾಗೆಯೇ ಇದೆ ಎನ್ನಲಾಗಿದೆ.ಬಸವ ಪುತ್ಥಳಿ ನಿರ್ಮಾಣಕ್ಕೆ ಹೆಚ್ಚು ಕಡಿಮೆ ಇದುವರೆಗೂ 35 ಕೋಟಿಯಷ್ಟುಹಣ ವ್ಯಯವಾಗಿದೆ ಎಂದು ಮಾಜಿ ಸಚಿವ ಏಕಾಂತಯ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು. ಇಷ್ಟು ಬೃಹತ್ ಮೊತ್ತದ ಕಾಮಗಾರಿ ಹೆಕ್ಕಿ ತೆಗೆಯುವುದು ಅಧಿಕಾರಿಗಳಿಗೆ ಸಂಕಷ್ಟ ತಂದಿದೆ ಎಂದು ಮೂಲಗಳು ತಿಳಿಸಿವೆ.
.