ದೇಶದ ಜನ ಆಯ್ಕೆ ಮಾಡಿದ್ದು ಮಂದಿರ ಕಟ್ಟಲು ಮಾತ್ರವೇ?

KannadaprabhaNewsNetwork | Published : May 1, 2024 1:18 AM

ಸಾರಾಂಶ

ದೇಶಕ್ಕೆ ಅನ್ನ ಹಾಕುವ ರೈತರು ತೀವ್ರ ಬೆಲೆ ಕುಸಿತದಿಂದ ತತ್ತರಿಸಿದ್ದು, ಅವರಿಗೆ ಕನಿಷ್ಠ ಬೆಂಬಲ ಬೆಲೆ, ವೈಜ್ಞಾನಿಕ ಎಂಎಸ್ಪಿ ನಿಗದಿ ಯಾಕೆ ಮಾಡಲಿಲ್ಲ ಸ್ವಾಮಿ

ಗದಗ: ದೇಶದಲ್ಲಿ ಕಳೆದ 10 ವರ್ಷದಲ್ಲಿ ಬಡವರ ಬದುಕು ದುಸ್ತರವಾಗಿದೆ. ಇದನ್ನು ಪ್ರಶ್ನೆ ಮಾಡಿದರೆ ನಾವು ದೇಶ ದ್ರೋಹಿಗಳು. ದೇಶದ ಜನ ಇವರನ್ನು ಆಯ್ಕೆ ಮಾಡಿ ಕಳುಹಿಸಿದ್ದು ಮಂದಿರ ಕಟ್ಟಲಿಕ್ಕೆ ಮಾತ್ರಾನಾ ಅಥವಾ ದೇಶದ ಸರ್ವ ಜನರ ಅಭಿವೃದ್ಧಿಗಾಗಿಯೇ? ಎಂದು ಬಹುಭಾಷಾ ನಟ, ಚಿಂತಕ ಪ್ರಕಾಶ ರಾಜ್ ಪ್ರಧಾನಿ ನರೇಂದ್ರ ಮೋದಿ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಮಂಗಳವಾರ ನಗರದಲ್ಲಿ ಆಯೋಜಿಸಲಾಗಿದ್ದ ಸಂವಾದಲ್ಲಿ ಮಾತನಾಡಿದ ಅವರು, ತಮ್ಮ ಭಾಷಣದುದ್ದಕ್ಕೂ ಪ್ರಧಾನಿ ಮೋದಿ ಹೆಸರೆತ್ತದೆ ಮಹಾಪ್ರಭುಗಳು ಎಂದು ಉಲ್ಲೇಖಿಸುತ್ತಾ, ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವೆಯೇ ಎನ್ನುವ ಸಂಶಯ ಕಾಡುತ್ತಿದೆ. ಪ್ರಸ್ತುತ ಚುನಾವಣೆ ದೇಶದ ಆಂತರಿಕ ಹಿತದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಅದಕ್ಕಾಗಿ ದೇಶದ ಯುವಕರು ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರಶ್ನಿಸಿದವರು ದೇಶದ್ರೋಹಿಗಳು:

ಕಳೆದ ಹತ್ತು ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಿ? ಇದನ್ನು ನಾನು ಪ್ರಶ್ನೆ ಮಾಡುವವನೇ. ಅಧಿಕಾರದಲ್ಲಿರುವರು ಅಭಿವೃದ್ಧಿ ಮಾಡಬೇಕು, ಮಾಡಲಿಲ್ಲ ಅಂದ್ರೆ ಯಾಕೆ ಮಾಡಲಿಲ್ಲ ಎಂದು ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಯಾಕೆ ಮಾಡಲಿಲ್ಲ ಎಂದು ಕೇಳಿದರೆ ನಾವು ದೇಶದ್ರೋಹಿಗಳಾಗುತ್ತೇವೆ ಎಂದರು.

ದೇಶಕ್ಕೆ ಅನ್ನ ಹಾಕುವ ರೈತರು ತೀವ್ರ ಬೆಲೆ ಕುಸಿತದಿಂದ ತತ್ತರಿಸಿದ್ದು, ಅವರಿಗೆ ಕನಿಷ್ಠ ಬೆಂಬಲ ಬೆಲೆ, ವೈಜ್ಞಾನಿಕ ಎಂಎಸ್ಪಿ ನಿಗದಿ ಯಾಕೆ ಮಾಡಲಿಲ್ಲ ಸ್ವಾಮಿ? ಈ ದೇಶದಲ್ಲಿ ರೈತನ ಘನತೆ ಹಾಳಾಗಿ ಹೋಗಿದೆ. ಬರಗಾಲದಿಂದ ತತ್ತರಿಸಿರುವ ದೇಶದ ರೈತರ ಸಾಲ ಮನ್ನಾ ಮಾಡಲು ಬೀದಿಗಳಿದು ಹೋರಾಟ ಮಾಡಿದರೆ. ತುಕ್ಡೆ ತುಕ್ಡೆ ಗ್ಯಾಂಗ್ ಎನ್ನುತ್ತೀರಿ. ಮಣಿಪುರದಲ್ಲಿ ಹೀನಾಯ ಕೃತ್ಯಗಳು ನಡೆದಾಗ ಅಲ್ಲಿನ ಜನರ ನೆರವಿಗೆ ಧಾ‍ವಿಸುವುದನ್ನು ಬಿಟ್ಟು, ವಂದೇ ಭಾರತ ರೈಲು ಉದ್ಘಾಟನೆ ಮಾಡಲು ಎಲ್ಲ ಸ್ಟೇಶನ್ ಗಳಿಗೆ ಓಡಾಡಿದರಲ್ಲ ನೀವೇನು ರೈಲ್ವೆ ನಿಲ್ದಾಣ ಮಾಸ್ತರಾ? ಅಬ್ ಕಿ ಬಾರ್ ಚಾರ್ ಸೋ ಪಾರ್ ಎನ್ನುತ್ತೀರಲ್ಲ, ನಿಮಗೆ ಅಷ್ಟೊಂದು ಧೈರ್ಯವಿದ್ದರೆ, ಕಾಮುಕರು, ದೇಶ ಲೂಟಿ ಮಾಡಿದವರನ್ನೆಲ್ಲ ನಿಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೀರಲ್ಲ ಯಾಕೆ? ನಿಮ್ಮ ಪಕ್ಷವೇನು ಜೈಲೇ ಎಂದು ಪ್ರಕಾಶ ರಾಜ್‌ ಲೇವಡಿ ಮಾಡಿದರು.

ಫಾಸ್ಟ್ ಟ್ಯಾಗ್ ವಂಚನೆ:ಹುಬ್ಬಳ್ಳಿ ನೇಹಾ ಹತ್ಯೆಯನ್ನು ಎಲ್ಲರೂ ಖಂಡಿಸಿದ್ದಾರೆ. ಆದರೆ ಮಹಾಪ್ರಭುಗಳು ಕಲ್ಯಾಣ ಕರ್ನಾಟಕಕ್ಕೆ ಪ್ರಚಾರಕ್ಕಾಗಿ ಆಗಮಿಸಿ, ಅಲ್ಲಿ ಕಾಯಕ ಕಲ್ಯಾಣ ಮಾಡಿ ಎಂದರೆ, ಕಾವಿ ಕಲ್ಯಾಣ ಮಾಡುತ್ತಿದ್ದಾರೆ. ಹಣದ ಮೇಲೆ ರಾಜಕೀಯ ನಡೆಸುತ್ತಿದ್ದಾರೆ. ಇತ್ತೀಚಿಗೆ ಟೋಲ್ ಗೆ ಅಳವಡಿಸಿರುವ ಫಾಸ್ಟ್ ಟ್ಯಾಗ್ ನಲ್ಲಿ ಕನಿಷ್ಠ ₹ 200 ಇರಬೇಕು ಎಂದು ಹೇಳುತ್ತಿದ್ದಾರೆ. ಅಂದರೆ ದೇಶಾದ್ಯಂತ ಎಷ್ಟು ವಾಹನಗಳಿವೆ ಅಷ್ಟೊಂದು ಜನರ ಹಣ ಉಳ್ಳವರ ಪಾಲಾಗುತ್ತಿದೆ. ಇದೆಲ್ಲ ಕೇಂದ್ರ ಸರ್ಕಾರದ ಹಿಡನ್ ಅಜೆಂಡಾ. ನಾವು ಮಹಾಪ್ರಭುವನ್ನು ನಂಬಿ ಮಂಗ್ಯಾ ಆಗುತ್ತಿದ್ದೇವೆ ಎಂದರು.

ಸಂವಾದದಲ್ಲಿ ಬಸವರಾಜ ಸೂಳಿಬಾವಿ, ಅಶೋಕ ಬರಗುಂಡಿ, ಮುತ್ತು ಬಿಳಿಯಲಿ, ಷರೀಫ ಬಿಳೆಯಲಿ, ಶೇಖಣ್ಣ ಕವಳಿಕಾಯಿ, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರಗತಿಪರ ಚಿಂತಕರು ಪಾಲ್ಗೊಂಡಿದ್ದರು.

ಇತ್ತೀಚಿಗೆ ಉತ್ತರ ಪ್ರದೇಶದಲ್ಲಿನ ಪರೀಕ್ಷೆಯಲ್ಲಿ ವಿದ್ಯಾರ್ಥಿಗೆ ಉತ್ತರವೇ ಗೊತ್ತಿಲ್ಲ, ಅದಕ್ಕಾಗಿ ಅವನು ಉತ್ತರ ಪತ್ರಿಕೆಯಲ್ಲಿ ಜೈ ಶ್ರೀರಾಮ ಎಂದು ಬರೆದು ಕೊಟ್ಟಿದ್ದು, ಅದಕ್ಕಾಗಿ ಅಲ್ಲಿನ ಸರ್ಕಾರ ಅವನಿಗೆ 60 ಅಂಕ ನೀಡಿ ತೇರ್ಗಡೆಗೊಳಿಸಿದೆ. ಇದನ್ನೆಲ್ಲ ನಾನು ದೇಶದ ಪ್ರಜೆಯಾಗಿ ಮಹಾಪ್ರಭುಗಳನ್ನು ಕೇಳುತ್ತೇನೆ, ಇವರು ತಾನೇ ಅಧಿಕಾರದಲ್ಲಿರುವವರು, ಇವರನ್ನು ಪ್ರಶ್ನಿಸದೇ ನಾನು ಪಾಕಿಸ್ತಾನ, ಬಾಂಗ್ಲಾಕ್ಕೆ ಹೋಗಿ ಪ್ರಶ್ನೆ ಮಾಡಲಾ? ದೇಶದಲ್ಲಿ ಮಹಾಪ್ರಭುವಿನ ಅಂಧ ಭಕ್ತರು ಸಾಕಷ್ಟಿದ್ದಾರೆ. ನಾವು ಅವರೊಂದಿಗೆ ಸೌಹಾರ್ದವಾಗಿಯೇ ಇರೋಣ, ಅವರನ್ನು ಮನವೊಲಿಸೋಣ, ಪ್ರೀತಿಯಿಂದ ಮಹಾಪ್ರಭು ಮಾಡುತ್ತಿರುವ ತಪ್ಪಿನ ಬಗ್ಗೆ ತಿಳಿಸೋಣ ಎಂದು ಬಹುಭಾಷಾ ನಟ ಪ್ರಕಾಶ ರಾಜ್ ಹೇಳಿದರು.

Share this article