ಬಿಜೆಪಿಯವರಿಗೆ ಅಂದು ಸಂವಿಧಾನ ನೆನಪಾಗಲಿಲ್ಲವೇ?: ತಂಗಡಗಿ

KannadaprabhaNewsNetwork | Published : Mar 24, 2025 12:37 AM

ಸಾರಾಂಶ

೨೦೦೮ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ನಾವು ಐವರು ಪಕ್ಷೇತರರೇ ಕಾರಣ

ಕಾರಟಗಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣೀಕರ್ತರಾದ ಐವರು ಶಾಸಕರನ್ನು ೨೦೧೨-೧೩ರಲ್ಲಿ ಶಾಸಕ ಸ್ಥಾನದಿಂದಲೇ ಬಿಜೆಪಿಯವರು ಅನರ್ಹಗೊಳಿಸಿದರಲ್ಲ. ಅಂದು ಬಿಜೆಪಿಗರಿಗೆ ಸಂವಿಧಾನದ ಆಸ್ತಿತ್ವ ನೆನಪಿಗೆ ಬರಲಿಲ್ಲವೇ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಟಾಂಗ್ ನೀಡಿದ್ದಾರೆ.

ತಾಲೂಕಿನ ಕಿಂದಿಕ್ಯಾಂಪಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ೨೦೦೮ರಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ನಾವು ಐವರು ಪಕ್ಷೇತರರೇ ಕಾರಣ. ಸರ್ಕಾರದ ಅಸ್ತಿತ್ವಕ್ಕೆ ಕಾರಣರಾದ ನಮ್ಮನ್ನೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಿದರಲ್ಲ. ಆಗ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮತ್ತು ಸಿ.ಟಿ. ರವಿ ಅವರಿಗೆ ಸಂವಿಧಾನಕ್ಕೆ ಅಪಚಾರವಾಯಿತು ಎಂದು ಎನಿಸಲಿಲ್ಲವೇ? ಆಗ ನಮ್ಮನ್ನು ಗೆಲ್ಲಿಸಿದ್ದ ನಮ್ಮ ಕನಕಗಿರಿ ಕ್ಷೇತ್ರದ ಜನತೆ ಅಂದು ಮೋಸ ಮಾಡಿದ್ದರಲ್ಲ, ಅದು ನೆನಪಾಗುತ್ತಿಲ್ಲವೇ? ಎಂದರು.

೨೦೧೨-೧೩ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ತಮಗಾಗಿದ್ದನ್ನು ನೆನಪಿಸಿದ ತಂಗಡಗಿ, ನಮ್ಮನ್ನು ಅನರ್ಹಗೊಳಿಸಿದ್ದು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿ, ನಮಗೆ ಪುನಃ ಶಾಸಕರಾಗಲು ಅವಕಾಶ ನೀಡಿ, ಅಂದಿನ ಸಭಾಪತಿ ಕೆ.ಜಿ. ಬೋಪಯ್ಯ ಅವರಿಗೆ ಛೀಮಾರಿ ಕೂಡಾ ಹಾಕಿತ್ತು ಎನ್ನುವುದನ್ನು ಸ್ಮರಿಸಿ ಎಂದರು.

ಅಂದು ಬಿಜೆಪಿಯವರು ಮಾಡಿದ ಪಾಪದ ಕೃತ್ಯಕ್ಕಾಗಿ ಇಂದಿಗೂ ಅನುಭವಿಸುತ್ತಿದ್ದಾರೆ. ಇನ್ನು ಹನಿಟ್ರ್ಯಾಪ್ ಕುರಿತು ಮಾತನಾಡಿದ ಸಚಿವರು, ಈ ಕೃತ್ಯ ಅಕ್ಷಮ್ಯ ಅಪರಾಧ. ಇದಕ್ಕೆ ಕ್ಷಮೆಯೇ ಇಲ್ಲ. ಈ ಕುರಿತು ಮುಖ್ಯಮಂತ್ರಿ ಅವರು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಐಸಿಸಿ ಸಭೆಯಲ್ಲಿ ಏ. ೧೦ರ ವರೆಗೆ ನೀರು ಹರಿಸುವ ನಿರ್ಧಾರ ಪ್ರಕಟಿಸಿದ್ದು ಸೂಕ್ತವಾಗಿದೆ. ಇದರಿಂದ ರೈತರಿಗೆ ಯಾವುದೇ ರೀತಿಯ ನೀರಿನ ಕೊರತೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಮುಖಂಡ ಕೆ.ಎನ್. ಪಾಟೀಲ್, ಚೆನ್ನಬಸಪ್ಪ ಸುಂಕದ್, ಶಿವರೆಡ್ಡಿ ನಾಯಕ, ಅಯ್ಯಪ್ಪ ಉಪ್ಪಾರ, ಬ್ಲಾಕ್ ಅಧ್ಯಕ್ಷ ಶರಣೇಗೌಡ ಮಾ.ಪಾ. ಇನ್ನಿತರರು ಇದ್ದರು.

Share this article