ಟ್ರ್ಯಾಕ್ಟರ್ ಉಳುಮೆಯ ಕೃಷಿಕರಿಗೆ ಡೀಸೆಲ್ ಬೆಲೆ ಏರಿಕೆ ಭಾರ

KannadaprabhaNewsNetwork | Published : May 5, 2025 12:47 AM

ಸಾರಾಂಶ

ಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೇ ಈಚೆಗೆ ರಾಜ್ಯ ಸರ್ಕಾರ ಲೀಟರ್ ಡೀಸೆಲ್ ₹2 ಬೆಲೆ ಏರಿಸಿದ್ದು, ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ರೈತರಿಗೆ ಮತ್ತಷ್ಟು ಹೊರೆಯಾಗಿದೆ.

ಎಸ್.ಜಿ. ತೆಗ್ಗಿನಮನಿಕನ್ನಡಪ್ರಭ ವಾರ್ತೆ ನರಗುಂದಹಲವಾರು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಧ್ಯೆಯೇ ಈಚೆಗೆ ರಾಜ್ಯ ಸರ್ಕಾರ ಲೀಟರ್ ಡೀಸೆಲ್ ₹2 ಬೆಲೆ ಏರಿಸಿದ್ದು, ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡುವ ರೈತರಿಗೆ ಮತ್ತಷ್ಟು ಹೊರೆಯಾಗಿದೆ.

ಉತ್ತರ ಕರ್ನಾಟಕದ ಹೊಲಗಳಲ್ಲಿ ಕಳೆದ ಕೆಲ ವರ್ಷಗಳಿಂದ ಟ್ರ್ಯಾಕ್ಟರಗಳು ಸದ್ದು ಮಾಡುತ್ತಿದ್ದು, ಎತ್ತುಗಳ ಸಂಖ್ಯೆ ಅತೀ ವಿರಳವಾಗಿವೆ. ಹೊಲ ಹರಗುವುದು, ರಂಟೆ ಹೊಡೆಯುವುದು, ಮುಂಗಾರಿ ಬಿತ್ತನೆ, ಬೆಳೆಸಾಲು ಹೀಗೆ ಪ್ರತಿಯೊಂದು ಕೆಲಸಕ್ಕೂ ಕೃಷಿಕರು ಟ್ರ್ಯಾಕ್ಟರ್ ಮೇಲೆಯೇ ಅವಲಂಬಿತರಾಗಿದ್ದಾರೆ. ಹೀಗಾಗಿ ಡೀಸೆಲ್ ಬೆಲೆ ಹೆಚ್ಚಳ ಮಾಡಿರುವುದು ಕೃಷಿಗೆ ಮತ್ತಷ್ಟು ಹೊರೆಯಾಗಿದೆ.

ಅತಿವೃಷ್ಟಿ, ಅನಾವೃಷ್ಟಿ ಮಧ್ಯೆ ಕೃಷಿಯಲ್ಲಿ ರೈತರು ಪ್ರತಿ ವರ್ಷ ನಷ್ಟ ಅನುಭವಿಸುವಂತಾಗಿದೆ. ಸುಗ್ಗಿ ಕಾಲದಲ್ಲಿ ಕೂಲಿ ಕಾರ್ಮಿಕರನ್ನು ಹೊಲಗಳಿಗೆ ಕರೆದುಕೊಂಡು ಬರಲು ಟ್ರ್ಯಾಕ್ಟರ್ ಬೇಕೆ ಬೇಕು, ಹೀಗಾಗಿ ಬೆಲೆ ಹೆಚ್ಚಳ ಕೃಷಿಕರಿಗೆ ದೊಡ್ಡ ಪೆಟ್ಟು ಕೊಟ್ಟಿದೆ ಎನ್ನುತ್ತಾರೆ ತಾಲೂಕಿನ ರೈತರು.

ಹೆಚ್ಚಿದ ಟ್ರ್ಯಾಕ್ಟರ್ ಬಾಡಿಗೆ: ಸಣ್ಣ ಹಿಡುವಳಿದಾರರು ಈ ಹಿಂದೆ ಪ್ರತಿಯೊಂದು ಎಕರೆ ಉಳುಮೆ ಮಾಡಲು ₹ 2000 ಸಾವಿರ ಟ್ರ್ಯಾಕ್ಟರ್‌ಗೆ ನೀಡಬೇಕಿತ್ತು. ಡೀಸೆಲ್ ಬೆಲೆ ₹ 89.30 ನಿಂದ ₹ 91.30 ಏರಿಕೆ ನಂತರ ಹೊಲದ ಮಾಲೀಕರು ಟ್ರ್ಯಾಕ್ಟರ್ ಪ್ರತಿ 1 ಎಕರೆಗೆ ₹ 2500 ನೀಡಬೇಕಾದ ಸ್ಥಿತಿ ಬಂದಿದೆ. ಇದೇ ರೀತಿ ಜಮೀನು ಹರಗುವದು, ಬಿತ್ತುವುದು, ರೂಟರ್ ಹೊಡೆಯಲು ಬಾಡಿಗೆ ಹೆಚ್ಚಾಗಿದೆ ಎನ್ನುತ್ತಾರೆ ರೈತ ಯಲ್ಲಪ್ಪ ಚಲವಣ್ಣವರ.

ಎತ್ತುಗಳೇ ಮಾಯ:ಹಿಂದೆ ರೈತರು ಜಮೀನು ಉಳುಮೆ ಮಾಡಲು ಎತ್ತುಗಳನ್ನು ಬಳಕೆ ಮಾಡುತ್ತಿದ್ದರು. ಆದರೆ ಇಂದಿನ ಆಧುನಿಕ ಯುಗದಲ್ಲಿ ಯುವಕರು ಎತ್ತುಗಳ ಜೋಪಾನ ಮಾಡುವುದು ಕಷ್ಟವೆಂದು ಒಂದು ಎಕರೆ ಹೊಂದಿರುವ ರೈತರು ಕೂಡ ಟ್ರ್ಯಾಕ್ಟರ್ ಮೊರೆ ಹೋಗಿದ್ದಾರೆ.

ಉಳುಮೆ ಜೋರು: ಕೃಷಿ ಪ್ರಧಾನ ತಾಲೂಕು ನರಗುಂದ ಭಾಗದ ರೈತರು ಮುಂಗಾರು ಹಂಗಾಮಿನ ಬಿತ್ತನೆಗೆ ಸದ್ಯ ಜಮೀನು ಉಳುಮೆಯನ್ನು ಅಬ್ಬರದಿಂದ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಸರ್ಕಾರ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ರೈತ ಸಮುದಾಯಕ್ಕೆ ದಿಕ್ಕು ತೋಚದಾಗಿದೆ. ಈ ಆಧುನಿಕ ಯುಗದಲ್ಲಿ ಕೃಷಿ ಮಾಡುವುದು ತುಂಬಾ ಕಷ್ಟವಿದೆ, ಆದ್ದರಿಂದ ಕೃಷಿ ಮಾಡುವ ರೈತರ ಟ್ರ್ಯಾಕ್ಟರ್ ಗಳಿಗೆ ಸರ್ಕಾರ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಣೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ನಾವು ಕೃಷಿ ಉಳಿಸಲು ಅನುಕೂಲ ಆಗುತ್ತದೆ ಎಂದು ರೈತ ಸಂಘದ ಶಹರ ಘಟಕದ ಅಧ್ಯಕ್ಷ ವಿಠಲ ಜಾಧವ ಹೇಳಿದರು.

Share this article