ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀನಿಯರ್ ಚೇಂಬರ್ ವತಿಯಿಂದ ಹೆಣ್ಣು ಮಕ್ಕಳ ಹದಿಹರೆಯದ ಬಗ್ಗೆ ಉಪನ್ಯಾಸ
ಇತ್ತೀಚಿನ ವರ್ಷಗಳಲ್ಲಿ ಬದಲಾದ ಆಹಾರ ಶೈಲಿ, ಜೀವನ ಶೈಲಿಯಿಂದ ಹೆಣ್ಣು ಮಕ್ಕಳ ದೈಹಿಕ ಬೆಳವಣಿಗೆಯಲ್ಲಿ ವ್ಯತ್ಯಾಸವಾಗುತ್ತಿದೆ ಎಂದು ಕೊಪ್ಪದ ವೈದ್ಯೆ ಡಾ.ಅನಿತಾ ನಟರಾಜ್ ತಿಳಿಸಿದರು.
ಮಂಗಳವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸೀನಿಯರ್ ಚೇಂಬರ್ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳ ಹದಿಹರೆಯದ ಸಮಸ್ಯೆಗಳ ಬಗ್ಗೆ ಉಪನ್ಯಾಸ ನೀಡಿ, ಹಿಂದೆ 15 -16 ನೇ ವಯಸ್ಸಿಗೆ ಋತುಮತಿಯಾಗುತ್ತಿದ್ದ ಹೆಣ್ಣು ಮಕ್ಕಳು ಈಗ 10- 12 ನೇ ವಯಸ್ಸಿಗೆ ಆಗುತ್ತಿದ್ದಾರೆ. ಬದಲಾದ ಜೀವನ ಶೈಲಿಯೇ ಇದಕ್ಕೆ ಕಾರಣ. 12 -18 ನೇ ವಯಸ್ಸಿನವರೆಗೂ ವಿದ್ಯಾರ್ಥಿನಿಯರಲ್ಲಿ ಶಾರೀರಿಕ ಹಾಗೂ ಮಾನಸಿಕ ಬದಲಾವಣೆ ಸಹಜ ಪ್ರಕ್ರಿಯೆ.ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಗಾಬರಿಯಾಗದೆ ತಮ್ಮ ಸಮಸ್ಯೆಗಳನ್ನು ಶಿಕ್ಷಕಿ ಯರು ಹಾಗೂ ಪೋಷಕರೊಂದಿಗೆ ಹಂಚಿಕೊಳ್ಳಬೇಕು. ಸಣ್ಣ ಸಮಸ್ಯೆ ಎಂದು ಹಾಗೇ ಬಿಟ್ಟರೆ ಮುಂದೆ ಅದು ದೊಡ್ಡ ಸಮಸ್ಯೆಯಾಗಿ ಗಂಭೀರ ಪರಿಣಾಮವಾಗುತ್ತದೆ. ಶಿಕ್ಷಣ ಕಲಿಯುವ ಹಂತದಲ್ಲಿ ವಿದ್ಯಾರ್ಥಿನಿಯರು ಏಕಾಗ್ರತೆಯಿಂದ ಗುರಿ ಮುಟ್ಟುವ ತನಕ ಕಠಿಣ ಪರಿಶ್ರಮದಿಂದ ಪಠ್ಯ ಪುಸ್ತಕಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸೀನಿಯರ ಚೇಂಬರ್ ಉಪಾಧ್ಯಕ್ಷ ಎಸ್.ಎಸ್.ಜಗದೀಶ್ ಮಾತನಾಡಿ, ಸೀನಿಯರ್ ಚೇಂಬರ್ ವಿಶೇಷವಾಗಿ ಶಾಲಾ, ಕಾಲೇಜುಗಳಲ್ಲಿ ಇಂತಹ ಆರೋಗ್ಯ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳಾಗಿರುವುದರಿಂದ ಮುಂದೆ ದೇಶದ ಉತ್ತಮ ನಾಗರಿಕರಾಗಿ ಬಾಳಬೇಕು ಎಂಬುದೇ ಉದ್ದೇಶವಾಗಿದೆ ಎಂದರು.