ವಿಧಾನ ಪರಿಷತ್ : ಶಿಕ್ಷಣ ಇಲಾಖೆ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಖರೀದಿಸುವ ಅಕ್ಕಿ ದರದಲ್ಲಿ ವ್ಯತ್ಯಾಸ ಇರುವ ವಿಷಯ ಸದನದಲ್ಲಿ ಕೆಲ ಕಾಲ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.
ಪ್ರಶ್ನೋತ್ತರ ವೇಳೆ ಬಿಜೆಪಿಯ ಎನ್. ರವಿಕುಮಾರ್ ಅವರು ಶಿಕ್ಷಣ ಇಲಾಖೆಯಿಂದ ಪೂರೈಸುವ ಅಕ್ಕಿ ಪ್ರತಿ ಕೆಜಿಗೆ 29.30 ರು.ನಂತೆ ಖರೀದಿಸಲಾಗುತ್ತದೆ. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಖರೀದಿಸುವ ಅಕ್ಕಿ ಪ್ರತಿ ಕೆಜಿಗೆ 34.60 ರು. ಇದೆ. ರಾಜ್ಯ ಸರ್ಕಾರದ ಎರಡು ಇಲಾಖೆ ಖರೀದಿಸುವ ದರದಲ್ಲಿ ವ್ಯತ್ಯಾಸ ಯಾಕೆ? ಶಿಕ್ಷಣ ಇಲಾಖೆ ಕಳಪೆ ಗುಣಮಟ್ಟದ ಅಕ್ಕಿ ಖರೀದಿಸಿ ಮಕ್ಕಳಿಗೆ ನೀಡುತ್ತಿದೆಯೇ ಎಂದು ಪ್ರಶ್ನಿಸಿದರು.
ಸಚಿವ ಕೆ.ಎಚ್. ಮುನಿಯಪ್ಪ ಉತ್ತರಿಸಿ ಸರ್ಕಾರಿ ಸಂಸ್ಥೆಗಳ ಮೂಲಕವೇ ಟೆಂಡರ್‌ನಲ್ಲಿ ಅಕ್ಕಿ ಖರೀದಿಸಲಾಗಿದೆ. ಎ ಗ್ರೇಡ್ ಅಕ್ಕಿಯನ್ನು ನಾವು ಜನರಿಗೆ ನೀಡುತ್ತಿದ್ದೇವೆ. ಎಲ್ಲವೂ ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.
ಆಗ ಮಧ್ಯ ಪ್ರವೇಶಿಸಿದ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಮಕ್ಕಳಿಗೆ ಅಕ್ಷರ ದಾಸೋಹ ಯೋಜನೆಗೆ ಗುಣಮಟ್ಟದ ಅಕ್ಕಿಯನ್ನು ಪೂರೈಸುತ್ತಿದ್ದೇವೆ. ರಾಜ್ಯ ಸರ್ಕಾರ ಅಕ್ಕಿ ಖರೀದಿ ಬೇರೆ ರೀತಿಯಲ್ಲಿ ಮಾಡುತ್ತಿದೆ. ಕಳಪೆ ಅಕ್ಕಿ ನೀಡಲಾಗುತ್ತಿದೆ ಎಂಬ ಮಾತು ಸದನದಿಂದ ಹೋಗುವುದು ಬೇಡ ಎಂದು ಮನವಿ ಮಾಡಿದರು.
ಆದರೆ ಸಚಿವರ ಮಾತನಿಂದ ಸಮಾಧಾನಗೊಳ್ಳದ ರವಿಕುಮಾರ್, ಎರಡು ಇಲಾಖೆಗಳು ಖರೀದಿಸುವ ಅಕ್ಕಿ ದರದಲ್ಲಿ ಪ್ರತಿ ಕೆಜಿಗೆ 5.30 ರು. ವ್ಯತ್ಯಾಸ ಕಂಡು ಬರುತ್ತಿದೆ. ಇದರಲ್ಲಿ ಗೋಲ್‌ಮಾಲ್ ನಡೆದಿದೆಯೇ ಎಂದು ಪ್ರಶ್ನಿಸಿದರು.
ಈ ಮಾತಿಗೆ ಸಚಿವ ಕೆ.ಎಚ್. ಮುನಿಯಪ್ಪ ಅವರು, ಕೇಂದ್ರೀಯ ಭಂಡಾರ ಹಾಗೂ ಎನ್‌ಸಿಸಿಎಫ್‌ನಿಂದ ರಾಜ್ಯ ಸರ್ಕಾರ ಖರೀದಿಸುತ್ತಿದೆ. ರಾಜ್ಯ ಸರ್ಕಾರ ಬಡವರಿಗೆ ಅಕ್ಕಿ ವಿತರಿಸಲು ಅಕ್ಕಿ ಕೇಳಿದರೆ, ಸಾಕಷ್ಟು ದಾಸ್ತಾನು ಇದ್ದರೂ ಕೇಂದ್ರ ಸರ್ಕಾರ ಕೊಡಲಿಲ್ಲ. ಈಗ ಮಾರುಕಟ್ಟೆಯಲ್ಲಿ ದರ ಕಡಿಮೆಯಾಗಿರುವುದರಿಂದ ಕಡಿಮೆ ದರದಲ್ಲಿ ಕೇಂದ್ರ ಅಕ್ಕಿ ಮಾರಾಟ ಮಾಡುತ್ತಿದೆ ಎಂದು ಉತ್ತರಿಸಿದರು.
ಈ ಮಾತಿಗೆ ಬಿಜೆಪಿ ಅನೇಕ ಸದಸ್ಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ವಾಗ್ವಾದಕ್ಕೆ ಇಳಿದರು. ಕೊನೆಗೆ ಸಭಾಪತಿ ಹೊರಟ್ಟಿ ಅವರು ಈ ಬಗ್ಗೆ ಸದಸ್ಯರು ಮನವಿ ಸಲ್ಲಿಸಿದರೆ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡುವುದಾಗಿ ಹೇಳಿ ಮುಂದಿನ ಪ್ರಶ್ನೆ ಕೈಗೆತ್ತಿಕೊಂಡರು.