ಕನ್ನಡಪ್ರಭ ವಾರ್ತೆ ವಿಜಯಪುರ
ನಗರದ ಪ್ರಕೃತಿ ಕಾಲೋನಿಯಲ್ಲಿ ಬಿ.ಎಲ್.ಡಿ.ಇ ಸಂಸ್ಥೆ ಮತ್ತು ಸಂಭವ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಪ್ರಾರಂಭಿಸಲಾಗಿರುವ ಬಿ.ಎಲ್.ಡಿ.ಇ- ರಘುಕುಲ ಸಮನ್ವಯ ಶಾಲೆ ಉದ್ಟಾಟಿಸಿ ಮಾತನಾಡಿದ ಅವರು, ವಿಶೇಷಚೇತನ ಮಕ್ಕಳ ಸಬಲೀಕರಣಕ್ಕೆ ಸಮರ್ಪಕ ಹೆಜ್ಜೆಯಾಗಿ ಬಿ.ಎಲ್.ಡಿ.ಇ-ರಘುಕುಲ ಸಮನ್ವಯ ಶಾಲೆ ಪ್ರಾರಂಭಿಸಲಾಗಿದೆ. ಪ್ರತಿಯೊಂದು ವಿಶೇಷಚೇತನ ಮಗುವಿನ ಕನಸಿಗೆ ರೆಕ್ಕೆ ನೀಡಿ ಅವರಲ್ಲಿ ಆತ್ಮವಿಶ್ವಾಸ ಬೆಳೆಸುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವದಿಂದ ಬದುಕಲು ಅವಕಾಶ ಕಲ್ಪಿಸುವ ಶಿಕ್ಷಣ ಕೇಂದ್ರವಾಗಿ ಈ ಶಾಲೆ ರೂಪುಗೊಳ್ಳಲಿದೆ. ಇದು ರಾಷ್ಟ್ರಕ್ಕೆ ಮಾದರಿಯಾಗುವ ವಿಶ್ವಾಸವಿದೆ. ಇಲ್ಲಿರುವ ಆಧುನಿಕ ವಿಶಾಲ ಕಟ್ಟಡ, ಸಕಲ ಸೌಕರ್ಯಗಳನ್ನು ಹೊಂದಿರುವ ಕೊಠಡಿಗಳು, ಬೋಧಕ ಮತ್ತು ಆರೈಕೆ ಸಿಬ್ಬಂದಿಯ ನಿಸ್ವಾರ್ಥ ಸೇವೆ ವಿಶೇಷಚೇತನ ಮಕ್ಕಳ ಅಭಿವೃದ್ಧಿಗೆ ಪೂರಕವಾಗಿವೆ. ಬಿ.ಎಲ್.ಡಿ.ಇ ಸಂಸ್ಥೆಯ ಮೆಡಿಕಲ್ ಕಾಲೇಜಿನಿಂದ ಇಲ್ಲಿನ ಮಕ್ಕಳಿಗೆ ಎಲ್ಲ ರೀತಿಯ ಚಿಕಿತ್ಸೆಗೆ ನೆರವು ನೀಡಲಾಗುವುದು. ಇಂಥ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾದಂತೆ ಅಗತ್ಯಕ್ಕೆ ತಕ್ಕಂತೆ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಶಾಸಕ ಸುನಿಲಗೌಡ ಪಾಟೀಲ ಮಾತನಾಡಿ, ಬಸವನಾಡಿನಲ್ಲಿ ಇದು ಅಪರೂಪದ ಶಾಲೆಯಾಗಿದೆ. ವಿಶೇಷಚೇತನ ಮಕ್ಕಳನ್ನು ಸಾಕಿ ಸಲಹುವುದು ಮತ್ತು ಅವರಿಗೆ ಕಲಿಸುವುದು ಸವಾಲಿನ ಕೆಲಸವಾಗಿದೆ. ಅಂಥ ಮಕ್ಕಳಿಗೆ ಈ ಶಾಲೆ ಸಂಜೀವಿನಿಯಾಗಿದೆ. ವಿಶೇಷಚೇತನ ಮಕ್ಕಳ ಸೇವೆ ಮಾಡಿದರೆ ನಮ್ಮ ಮಕ್ಕಳಿಗೂ ಪುಣ್ಯ ಬರುತ್ತದೆ. ಎಲ್ಲರೂ ಸೇರಿ ಕೆಲಸ ಮಾಡಿ ಬೇರೆ ಜಿಲ್ಲೆ ಮತ್ತು ತಾಲೂಕುಗಳಿಗೆ ಈ ಶಾಲೆ ಪ್ರೇರಣೆಯಾಗಿ ನಿಲ್ಲಬೇಕು. ಎಲ್ಲೆಡೆ ಇಂಥ ಶಾಲೆಗಳು ಆರಂಭವಾಗಿ ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಯಾಗಬೇಕು. ನಾನು ತಿಂಗಳಿಗೆ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡುತ್ತೇನೆ ಎಂದು ಹೇಳಿದರು.ಆರೋಗ್ಯ ಉಚಿತ ತಪಾಸಣೆ ಶಿಬಿರ: ಬಿ.ಎಲ್.ಡಿ.ಇ ಆಸ್ಪತ್ರೆಯ ವತಿಯಿಂದ ವಿಶೇಷಚೇತನ ಮಕ್ಕಳ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಚಿಕ್ಕಮಕ್ಕಳ ತಜ್ಞರು, ಶ್ರವಣದೋಶ ವೈದ್ಯರು, ಫಿಜಿಯೋಥೆರಪಿ, ಎಲುಬು ಮತ್ತು ಕೀಲು, ಮೆಡಿಸಿನ್ ಮುಂತಾದ ವಿಭಾಗಗಳ ವೈದ್ಯರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿದರು.