ಜವಳಿ ಉದ್ಯಮಕ್ಕೆ ಸಂಕಷ್ಟ, ಬದುಕು ಅತಂತ್ರ!

KannadaprabhaNewsNetwork |  
Published : Jan 22, 2025, 12:35 AM IST
ಐಸಿಯು ಘಟಕದಲ್ಲಿ ಜವಳಿ ಉದ್ಯಮ, ನೇಕಾರರು ತತ್ತರ! | Kannada Prabha

ಸಾರಾಂಶ

ನೇಕಾರರು ಕುಟುಂಬ ನಿರ್ವಹಣೆ ಹೇಗೆ ಎಂದು ಹಲಬುತ್ತಿದ್ದರೆ, ಕೋಟಿಗಟ್ಟಲೇ ಹಣ ಹೂಡಿದ ಮಾಲೀಕರು ಬ್ಯಾಂಕ್‌ಗಳ ಬಡ್ಡಿ ತುಂಬುವತ್ತ ಹೈರಾಣಾಗುತ್ತಿದ್ದಾರೆ.

ಶಿವಾನಂದ ಪಿ.ಮಹಾಬಲಶೆಟ್ಟಿ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ ಜವಳಿ ಉದ್ಯಮದ ಸುವರ್ಣಯುಗ ಎಂದೇ ಕರೆಯುತ್ತಿದ್ದ ಕಾಲದಲ್ಲಿ ೪೫ ಸಾವಿರಕ್ಕೂ ಹೆಚ್ಚು ಮಗ್ಗಗಳಿದ್ದವು. ನಿತ್ಯ ೫೫ ಸಹಸ್ರ ವಿವಿಧ ವಿನ್ಯಾಸಗಳ ಸೀರೆ ಉತ್ಪಾದನೆಯಿಂದ ಕರ್ನಾಟಕದ ಮ್ಯಾಂಚೇಸ್ಟರ್ ಎಂಬ ಖ್ಯಾತಿಯಿತ್ತು. ಆದರೀಗ ಜವಳಿ ಕ್ಷೇತ್ರದತ್ತ ಯಾವುದೇ ಸರ್ಕಾರಗಳು ಪ್ರಾಮಾಣಿಕ ಯತ್ನ ಮಾಡದ್ದರಿಂದ ಜವಳಿ ಉದ್ಯಮ ಅವಸಾನ ಈಗಲೋ ಆಗಲೋ ಎಂಬಂತೆ ಐಸಿಯು ಘಟಕದಲ್ಲಿದೆ.

ನೇಕಾರರು ಕುಟುಂಬ ನಿರ್ವಹಣೆ ಹೇಗೆ ಎಂದು ಹಲಬುತ್ತಿದ್ದರೆ, ಕೋಟಿಗಟ್ಟಲೇ ಹಣ ಹೂಡಿದ ಮಾಲೀಕರು ಬ್ಯಾಂಕ್‌ಗಳ ಬಡ್ಡಿ ತುಂಬುವತ್ತ ಹೈರಾಣಾಗುತ್ತಿದ್ದಾರೆ. ಇವೆಲ್ಲವುಗಳ ನಡುವೆ ಜವಳಿ ಕ್ಷೇತ್ರಕ್ಕೆ ಬಲ ತುಂಬಲೆಂದೇ ಇರುವ ಪ್ರಮುಖ ನಾಲ್ಕು ನಿಗಮಗಳ ಅಧ್ಯಕ್ಷರು, ಸಿಬ್ಬಂದಿ ಮಾತ್ರ ಕಣ್ಣೆದುರೇ ರಾಜ್ಯದ ಜವಳಿ ದುಸ್ಥಿತಿ ಕಂಡರೂ ಅದನ್ನು ಉಳಿಸಲು ಮುಂದಾಗದೇ ಅಸಡ್ಡೆ ತೋರುತ್ತಿರುವುದರಿಂದ ಜವಳಿ ಉದ್ಯಮ ಅವಸಾನದಂಚಿಗೆ ತಲುಪಿದೆ.

ಉತ್ಕೃಷ್ಟ ವಿನ್ಯಾಸ ಮತ್ತು ಕಾಟನ್ ನೇಯ್ಗೆಗೆ ಹೆಸರಾಗಿದ್ದ ಅವಳಿ ನಗರದ ಪ್ರದೇಶಗಳಲ್ಲಿ ಸದ್ಯ ೭ಸಾವಿರ ಮಗ್ಗಗಳು ಮಾತ್ರ ಉಳಿದಿವೆ. ನಿತ್ಯ ೫೫-೬೦ ಸಾವಿರ ಸೀರೆಗಳ ಉತ್ಪಾದನೆ ಇದೀಗ ಕೇವಲ ೧೦ಸಾವಿರಕ್ಕಿಳಿದಿದೆ. ಸೀರೆ ಉದ್ಯಮ ಪ್ರತಿ ಐದಾರು ವರ್ಷಗಳಿಗೊಮ್ಮೆ ಬೇಡಿಕೆ ಕುಸಿತದ ಕಹಿ ಅನುಭವಿಸುತ್ತಿತ್ತು. ಆದರೆ ಕೆಲವೇ ತಿಂಗಳಲ್ಲಿ ಹೊಸ ವಿನ್ಯಾಸದೊಡನೆ ಚೇತರಿಕೆ ಕಾಣುತ್ತಿತ್ತು. ಆದರೀಗ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತಗೊಂಡು ವರ್ಷಗಳೇ ಉರುಳಿದರೂ ಚೇತರಿಕೆಯು ಮರೀಚಿಕೆಯಾಗಿದೆ. ಸಾಮಾನ್ಯವಾಗಿ ತುಳಸಿ ಪೂಜೆ ಸಂದರ್ಭದಲ್ಲಿ ಚೇತರಿಕೆ ಕಾಣುತ್ತಿದ್ದ ಉದ್ಯಮಕ್ಕೆ ಬರುವ ಫೆಬ್ರುವರಿ ಮಾಸದಲ್ಲಿ ವಿವಾಹ ಸೇರಿದಂತೆ ಇತರೆ ಮುಹೂರ್ತಗಳು ಇದ್ದರೂ ಜನವರಿ ಕೊನೆಯ ಅಂಚಲ್ಲೂ ಚೇತರಿಕೆ ಲಕ್ಷಣಗಳು ಗೋಚರಿಸುತ್ತಿಲ್ಲವಾದ್ದರಿಂದ ನೇಕಾರರು ಹತಾಶರಾಗಿದ್ದಾರೆ.

ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ ನೇಕಾರರಿಗೆ ಉದ್ಯೋಗ ನೀಡಲು ಮಿತಿಯಾಧರಿತ ಸೀರೆ ಉತ್ಪಾದನೆ ನಡೆದಿದ್ದು, ತಯಾರಾದ ಸೀರೆಗಳು ನೇರವಾಗಿ ಗೋದಾಮು ಸೇರುತ್ತಿವೆ. ನೇಕಾರಿಕೆಯ ಕಚ್ಚಾವಸ್ತುಗಳ ವಿಪರೀತ ಬೆಲೆ ಏರಿಕೆ, ಹೂಡಿದ ಬಂಡವಾಳದ ಬಡ್ಡಿ ಭರಣಾ ಮಾಡುವುದು, ಉತ್ಪಾದಿತ ಸೀರೆಗಳ ಬೇಡಿಕೆ ಇಲ್ಲದೇ ಗೋದಾಮು ಸೇರುತ್ತಿರುವುದು ಸೇರಿದಂತೆ ಎಲ್ಲ ಸ್ತರಗಳಲ್ಲೂ ನೇಕಾರರು ಆರ್ಥಿಕವಾಗಿ ಸುಸ್ತಾಗುತ್ತಿದ್ದಾರೆ. ಬಿಗ್ ಬಾರ್ಡರ್ ಸೀರೆಗಳು ಪ್ರಪಾತ ಕಂಡ ಬಳಿಕ ಹೊಸ ವಿನ್ಯಾಸ ಗಗನಕುಸುಮವಾಗಿದೆ.

ಸರ್ಕಾರದ ಅಸಡ್ಡೆ:

ನೆರೆಯ ರಾಜ್ಯಗಳಂತೆ ನೇಕಾರಿಕೆ ಪ್ರೋತ್ಸಾಹಕ ಕ್ರಮಗಳನ್ನು ರೂಪಿಸದೇ ರಾಜ್ಯ ಸರ್ಕಾರ ನಿಷ್ಕ್ರಿಯವಾಗಿದೆ. ನಿಪುಣ ವಿನ್ಯಾಸಕಾರರಿಲ್ಲದೇ ಇರುವುದು, ಕಚ್ಚಾ ಸಾಮಗ್ರಿಗಳು, ಮಜೂರಿ ದರಗಳು ಏರಿಕೆಯಾಗಿರುವುದು, ಬೇಡಿಕೆ ತೀವ್ರ ಕುಸಿತದಿಂದ ಕಂಗಾಲಾಗಿರುವ ಕಾಲದಲ್ಲಿ ಉತ್ಪಾದನಾ ವೆಚ್ಚಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಸೀರೆಗಳಿಗೆ ದರ ಏರಿಕೆಯಾಗದಿರುವುದು, ಹೊಸ ತಂತ್ರಜ್ಞಾನ ಭರಿತ ರೆಫಿಯರ್, ಕಂಪ್ಯೂಟರ್ ಝಕಾರ್ಡ್ ಮಗ್ಗಗಳನ್ನು ತಂದರೂ ಅವುಗಳನ್ನು ನಡೆಸಲು ಕೌಶಲ್ಯಾಧಾರಿತ ನೇಕಾರರಿಲ್ಲದೇ ಅವು ಧೂಳು ತಿನ್ನುತ್ತ ಬಂಡವಾಳದ ಮೇಲೆ ಬಡ್ಡಿ ಹೆಚ್ಚುತ್ತಿರುವುದು ಇವೇ ಮೊದಲಾದ ಸಮಸ್ಯೆಗಳನ್ನು ನೇಕಾರಿಕೆ ಕ್ಷೇತ್ರ ಅನುಭವಿಸುತ್ತಿದೆ.

ನೇಕಾರಿಕೆ ಉಳಿಸಿ ಬೆಳೆಸಲು ಆರಂಭಿಸಿರುವ ಸರ್ಕಾರಿ ಬಿಳಿಯಾನೆಯಂತಿರುವ ನಿಗಮಗಳ ಮುಖ್ಯಸ್ಥರು ಮಾತ್ರ ಸಮೃದ್ಧ ಹುಲ್ಲುಗಾವಲಲ್ಲಿ ಮೇಯುತ್ತಿದ್ದಾರೆ. ಮೂಲ ಬೇರಿನಂತಿರುವ ನೇಕಾರರು ಮಾತ್ರ ನಿತ್ಯದ ವೇತನ ಸಿಗದೇ ಕುಟುಂಬದ ನಿರ್ವಹಣೆ ಹೇಗೆಂದು ಚಿಂತಿಸುವಂತಾಗಿದೆ. ರಾಜ್ಯ ಸರ್ಕಾರ ನೆರೆಯ ರಾಜ್ಯಗಳ ನೇಕಾರಿಕೆ ಉತ್ತೇಜಕ ಕ್ರಮಗಳನ್ನು ತಕ್ಷಣ ಕೈಗೊಳ್ಳದೇ ಹೋದಲ್ಲಿ ಜವಳಿ ಸಚಿವರು ಮತ್ತು ಸಿಎಂ ರಾಜ್ಯದ ಜವಳಿ ಕ್ಷೇತ್ರಕ್ಕೆ ಕೊನೇ ಮೊಳೆ ಹೊಡೆದ ಅಪಖ್ಯಾತಿಗೆ ಭಾಜನರಾಗುವುದು ಖಚಿತ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ