ಕನ್ನಡಪ್ರಭ ವಾರ್ತೆ ಬಂಟ್ವಾಳ
ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ದಿಗಂತ್ ಕೊನೆಗೂ 16 ದಿನಗಳ ಬಳಿಕ ಬುಧವಾರ, ತಾಯಿಯ ಜೊತೆ ಮನೆ ಕಡೆ ಹೆಜ್ಜೆ ಹಾಕಿದ್ದಾನೆ. ಇದರೊಂದಿಗೆ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದ್ದ ವಿದ್ಯಾರ್ಥಿ ದಿಗಂತ್ ನಿಗೂಢ ನಾಪತ್ತೆ ಪ್ರಕರಣ ಸುಖಾಂತ್ಯಗೊಂಡಿದೆ.ಕಳೆದ ಫೆ.25 ರಂದು ದಿಗಂತ್ ಫರಂಗಿಪೇಟೆ ರೈಲ್ವೆ ಹಳಿಯಿಂದ ರಾತ್ರಿ ವೇಳೆ ನಾಪತ್ತೆಯಾಗಿದ್ದ. ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಕಾಲೇಜಿನಿಂದ ತಂದಿದ್ದ ದಿಗಂತ್ ಬಳಿಕ ಸಂಜೆ ವೇಳೆ ದೇವಸ್ಥಾನಕ್ಕೆಂದು ತೆರಳಿದ್ದು, ಅಲ್ಲಿಂದ ನಾಪತ್ತೆಯಾಗಿದ್ದ.ಅಪ್ರಾಪ್ತ ಬಾಲಕ ನಿಗೂಢವಾಗಿ ನಾಪತ್ತೆಯಾಗಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿ, ಬೇರೆಬೇರೆ ರೀತಿಯ ವದಂತಿಗಳಿಗೂ ಅವಕಾಶ ಮಾಡಿಕೊಟ್ಟಿತ್ತು. ಇದರ ಜೊತೆಗೆ ಈತನ ಪತ್ತೆಗಾಗಿ ಪ್ರತಿಭಟನೆಯನ್ನು ನಡೆಸಲಾಯಿತು.ದ.ಕ.ಜಿಲ್ಲೆಯ ಪೋಲೀಸರಿಗೆ ಸವಾಲಿನ ಪ್ರಕರಣವಾಗಿತ್ತು. ನಾಪತ್ತೆಯಾದ ಸ್ಥಳದಲ್ಲಿ ಚಪ್ಪಲಿ ಬಿಟ್ಟುಹೋದ ದಿಗಂತ್ ಮೊಬೈಲ್ ಕೂಡ ಅಲ್ಲೇ ಬಿಟ್ಟು ಹೋಗಿದ್ದ, ಅಲ್ಲದೆ ಚಪ್ಪಲಿಯಲ್ಲಿ ರಕ್ತದ ಕಲೆ ಇದ್ದು, ಪ್ರಕರಣ ಒಂದಷ್ಟು ಗೊಂದಲಗಳನ್ನು ಸೃಷ್ಟಿಮಾಡಿತ್ತು.
ದಿಗಂತ್ ತಂದೆ ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ ಕಾರಣ ಪೊಲೋಸರಿಗೂ ತಲೆನೋವಾಗಿತ್ತು.ಕಳೆದ ಶನಿವಾರ ದಿಗಂತ್ ನಿಗೂಢವಾಗಿಯೇ ಉಡುಪಿಯ ಡಿ.ಮಾರ್ಟ್ ನಲ್ಲಿ ಸಿಕ್ಕಿದ್ದ. ಅದಾಗಲೇ ಅರ್ಧ ಪ್ರಕರಣ ಸುಖಾಂತ್ಯ ಕಂಡುಬಂದಿತ್ತಾದರೂ ಸಾಕಷ್ಟು ಊಹಾಪೋಹಗಳು ಕೇಳಿ ಬಂದ ಕಾರಣ ಮತ್ತೆ ಪ್ರಕರಣ ಜಟಿಲವಾಗುತ್ತದೆ ಎಂಬ ಆತಂಕ ಉಂಟುಮಾಡಿತ್ತು. ಬುಧವಾರ ಜಿಲ್ಲೆಯ ಪೊಲೀಸರು ದಿಗಂತ್ ಪತ್ತೆಯಾದ ವರದಿಯನ್ನು ಹೈಕೋರ್ಟ್ ಗೆ ಸಲ್ಲಿಸಿದ್ದರು. ಆದರೆ ಅಪ್ರಾಪ್ತ ಬಾಲಕನಾಗಿದ್ದರಿಂದ ಈತನನ್ನು ಮಂಗಳೂರಿನ ಚೈಲ್ಡ್ ವೆಲ್ ಫೇರ್ ಕಮಿಟಿಯ ಮುಂದೆ ಹಾಜರುಪಡಿಸಿ ಅವರ ನಿರ್ಧಾರದಂತೆ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ದಿಗಂತ್ ಮನೆಗೆ ಹೋಗುವ ವಿಚಾರ ಹೇಳಿದರೆ ಆತನನ್ನು ಮನೆಗೆ ಕಳುಹಿಸಿಕೊಡಿ ಎಂದು ನ್ಯಾಯಾಲಯ ಅದೇಶ ಮಾಡಿತ್ತು. ಇದೀಗ ದಿಗಂತ್ ತಾಯಿಯ ಜೊತೆ ಮನೆ ಸೇರಿದ್ದಾನೆ ಎಂದು ಪೋಲೀಸ್ ಮೂಲಗಳು ಹೇಳಿವೆ.