- ರಾಜ್ಯದಲ್ಲಿ 1000 ಲೈಬ್ರರಿಗಳಗೆ ಡಿಜಿಟಲೀಕರಣ । ಜಿಪಂನಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆ ಸಹಯೋಗದಲ್ಲಿ ಈ ವರ್ಷ ಜಿಲ್ಲೆಯಲ್ಲಿನ 20 ಗ್ರಾಮ ಪಂಚಾಯಿತಿ ಗ್ರಂಥಾಲಯಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಮತ್ತು ಡೆಲ್ ಸಂಸ್ಥೆಯ ಸಹಯೋಗದಲ್ಲಿ ರಾಜ್ಯದ 6000 ಸಾವಿರ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ 4000 ಗ್ರಾಮ ಪಂಚಾಯಿತಿ ಗ್ರಂಥಾಲಯಗಳಿಗೆ ಡಿಜಿಟಲೀಕರಣ ಮಾಡುವ ಕಾರ್ಯ ಮುಂದುವರಿದಿದೆ. ಈ ವರ್ಷ ರಾಜ್ಯದ 1000 ಗ್ರಂಥಾಲಯಗಳಿಗೆ ಡಿಜಿಟಲೀಕರಣ ಅಳವಡಿಕೆ ಹಾಗೂ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕಳೆದ ವರ್ಷ 61 ಗ್ರಾಪಂ ಗ್ರಂಥಾಲಯಗಳಿಗೆ ಡಿಜಿಟಲಿಕರಣದ ಮೂಲಕ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮ ಅನುಷ್ಠಾನ ಮಾಡಲಾಗಿದೆ. ಜೊತೆಗೆ ಈ ವರ್ಷ 20 ಗ್ರಾಪಂ ಗ್ರಂಥಾಲಯಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಯೋಜನೆ ರೂಪಿಸಲಾಗಿದೆ ಎಂದರು.ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಕೌಶಲಗಳನ್ನು ಅಭಿವೃದ್ಧಿಪಡಿಸುವುದು ಯೋಜನೆ ಉದ್ದೇಶವಾಗಿದೆ. ಇದಕ್ಕೆ ಪೂರಕವಾಗಿ ಲ್ಯಾಪ್‌ಟಾಪ್, ಆಂಡ್ರಾಯ್ಡ್ ಮೊಬೈಲ್. ಮಾನಿಟರ್, ಟಿವಿ, ಇಂಟರ್‌ನೆಟ್ ಸಂಪರ್ಕ ಸೇರಿ ಮೂಲ ತಾಂತ್ರಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜತೆಗೆ ಆನ್‌ಲೈನ್ ಸೇವೆಗಳು, ಅರ್ಜಿ ಸಲ್ಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿ ಇಲ್ಲಿ ಲಭ್ಯ. ಸ್ವಸಹಾಯ ಸಂಘದ ಸದಸ್ಯರಿಗೆ ಡಿಜಿಟಲ್ ಸ್ಕಿಲ್ಸ್‌ಗೆ ಸಂಬಂಧಿಸಿದ ಮಾಹಿತಿ ಅಧಿವೇಶನವನ್ನು ನಡೆಸಲು ಯೋಜನೆ ರೂಪಿಸಲಾಗಿದೆ. ಯುವಕರಿಗೆ ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಕುರಿತು ಈ ವರ್ಷ ಮಾಹಿತಿ ನೀಡುವ ಯೋಜನೆ ರೂಪಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ, ಶಿಕ್ಷಣ ಫೌಂಡೇಷನ್ ಸಂಸ್ಥೆಯ ಶಂಭುಲಿಂಗ, ಗುರುಪಾದಪ್ಪ, ಸುರೇಶ್ ನಾಯ್ಕ ಹಾಗೂ ಇನ್ನಿತರರು ಭಾವಹಿಸಿದ್ದರು.
ದಾವಣಗೆರೆಯಲ್ಲಿ ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಇಲಾಖೆ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದ ಬಗ್ಗೆ ವಿವರಿಸಿದರು.