ಮತದಾರ ಶಿಕ್ಷಕರಿಗೆ ಭೋಜನ ಕೂಟ, ಗಿಫ್ಟ್ ಆಮಿಷ!

KannadaprabhaNewsNetwork |  
Published : Feb 12, 2024, 01:33 AM IST
5.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ | Kannada Prabha

ಸಾರಾಂಶ

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಇಲ್ಲೂ ಶಕ್ತ ರಾಜಕಾರಣದ ಪಟ್ಟುಗಳು ಕಂಡು ಬರುತ್ತಿದ್ದು, ಮತದಾರರಾದ ಶಿಕ್ಷಕರಿಗೆ ಆಮಿಷವನ್ನೂ ಒಡ್ಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ರಾಮನಗರ: ತೀವ್ರ ಕುತೂಹಲ ಕೆರಳಿಸಿರುವ ವಿಧಾನ ಪರಿಷತ್ ನ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣಾ ಕಣ ದಿನೇ ದಿನೇ ರಂಗೇರುತ್ತಿದೆ. ಇಲ್ಲೂ ಶಕ್ತ ರಾಜಕಾರಣದ ಪಟ್ಟುಗಳು ಕಂಡು ಬರುತ್ತಿದ್ದು, ಮತದಾರರಾದ ಶಿಕ್ಷಕರಿಗೆ ಆಮಿಷವನ್ನೂ ಒಡ್ಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದು ಶಿಕ್ಷಕರ ಕ್ಷೇತ್ರದ ಚುನಾವಣೆ, ಗೋವಿನ ಹಾಡಿನ ಸತ್ಯದ ದರ್ಶನ ಮಾಡಿಸಿ ಪ್ರಜೆಗಳನ್ನು ರೂಪಿಸುವ ಹೊಣೆ ಹೊತ್ತ ಶಿಲ್ಪಿಗಳು. ಮತ ಪಡೆಯಲು ಇವರಿಗೂ ಆಮಿಷ ಒಡ್ಡುತ್ತಿರುವುದು ಈಗ ಕೇಳಿ ಬರುತ್ತಿದೆ. ಗಿಫ್ಟ್ ಹೆಸರಿನಲ್ಲಿ ನಗದು ಹಣ, ದುಬಾರಿ ಬೆಲೆಯ ಪೆನ್‌ ಕ್ಷೇತ್ರದಲ್ಲಿ ಸದ್ದು ಮಾಡುತ್ತಿವೆ. ಸದ್ಯಕ್ಕೆ ಕ್ಷೇತ್ರದಲ್ಲಿ ಅಲ್ಲಲ್ಲಿ ಗುಪ್ತವಾಗಿ ಶಿಕ್ಷಕರಿಗೆ ಭೋಜನ ಕೂಟ ನಡೆಯುತ್ತಿವೆ.

ಚುನಾವಣೆಯಲ್ಲಿ ಹಣದ ಖರ್ಚಿಗೆ ಮಿತಿ ಇಲ್ಲ:

ವಿಧಾನಸಭೆಯಂತೆ ಈ ಚುನಾವಣೆಗೆ ವೆಚ್ಚದ ಮಿತಿ ಇಲ್ಲ. ಅಭ್ಯರ್ಥಿ ಎಷ್ಟು ಹಣ ಬೇಕಾದರೂ ಖರ್ಚು ಮಾಡಬಹುದು. ಇದು ಕೂಡ ಅಭ್ಯರ್ಥಿಗಳಿಗೆ ಹಣ ಖರ್ಚು ಮಾಡಲು ವರವಾಗಿದೆ. ಹಾಗಾಗಿ ಹಣ ಸುರಿದು ಗೆಲ್ಲುವ ಯೋಚನೆಯೂ ಅಭ್ಯರ್ಥಿಗಳಲ್ಲಿ ಕಂಡು ಬರುತ್ತಿದೆ ಎಂಬ ಮಾತುಗಳು ಹರಿದಾಡುತ್ತಿದೆ.

ಕಳೆದ ಚುನಾವಣೆಯಲ್ಲಿ ಯಾವ ಪಕ್ಷಗಳೂ ಆಮಿಷ ಒಡ್ಡುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. ಶಿಕ್ಷಕರಿಗೆ ಚುನಾವಣೆಯಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅವಕಾಶವಿರುವ ಚುನಾವಣೆಯಿದು. ಹಾಗಾಗಿ ಫುಲ್‌ ಟೈಂ ಅಭ್ಯರ್ಥಿಗಳ ಜತೆಯಿರುವ ಕೆಲ ಶಿಕ್ಷಕರೇ ಮತದಾರ ಶಿಕ್ಷಕರಿಗೆ ಗಿಫ್ಟ್‌ ತಲುಪಿಸಿ ಮತ ಹಾಕಲು ಪ್ರಚೋದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾಮಾನ್ಯವಾಗಿ ಶಿಕ್ಷಕರ ಕ್ಷೇತ್ರದ ಚುನಾವಣೆಗಳಲ್ಲಿ ಪಕ್ಷ ನಿಷ್ಠೆಗಿಂತ ವ್ಯಕ್ತಿ ನಿಷ್ಠೆ ಹೆಚ್ಚು ಕೆಲಸ ಮಾಡುತ್ತದೆ. ಆದರೆ, ಈ ಬಾರಿಯ ಉಪಚುನಾವಣೆಯನ್ನು ಬಿಜೆಪಿ - ಜೆಡಿಎಸ್ ಮೈತ್ರಿ ಪಕ್ಷ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರನ್ನು ಮಣಿಸಲು ಇನ್ನಿಲ್ಲದ ರಣತಂತ್ರ ರೂಪಿಸುತ್ತಿರುವುದು ಚುನಾವಣಾ ಕಣ ರಂಗೇರುವಂತೆ ಮಾಡಿದೆ.

ಜೆಡಿಎಸ್ - ಬಿಜೆಪಿ ಮೈತ್ರಿ ರಂಗನಾಥ್ ರವರ ಶಕ್ತಿ ವೃದ್ಧಿಯಾಗುವಂತೆ ಮಾಡಿದರೆ, ಈ ದೋಸ್ತಿ ತನ್ನ ಗೆಲುವಿಗೆ ಎಲ್ಲಿ ತೊಡಕಾಗುತ್ತದೆಯೋ ಎಂಬ ಆತಂಕ ಪುಟ್ಟಣ್ಣ ಅವರಿಗೆ ಕಾಡತೊಡಗಿದೆ. ಇಬ್ಬರು ಅಭ್ಯರ್ಥಿಗಳು ಪ್ರತಿಷ್ಠೆ ಪಣಕ್ಕಿಟ್ಟು ಮತದಾರರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ.

2002ರಲ್ಲಿ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಸ್ಪರ್ಧಿಸಿ ಗೆಲುವು ಸಾಧಿಸಿದ ಪುಟ್ಟಣ್ಣ ಅವರು, 3 ಬಾರಿ ಜೆಡಿಎಸ್ ಹಾಗೂ 1 ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಉಳಿಸಿಕೊಂಡಿದ್ದಾರೆ. ಪಕ್ಷ, ಜಾತಿ, ಧರ್ಮದ ಹಂಗಿಲ್ಲದೆ ಮಾಡಿರುವ ನಿಸ್ವಾರ್ಥ ಸೇವೆ ಜತೆಗೆ ಪಕ್ಷದ ವರ್ಚಸ್ಸು ತಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಪುಟ್ಟಣ್ಣ ನಂಬಿಕೊಂಡಿದ್ದಾರೆ.

ಪಕ್ಷಾಂತರದ ಕಳಂಕ ಹೊತ್ತಿರುವ ಕಾಂಗ್ರೆಸ್ ನ ಪುಟ್ಟಣ್ಣನವರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್ ಹವಣಿಸುತ್ತಿದ್ದಾರೆ. ಪುಟ್ಟಣ್ಣ ಜೆಡಿಎಸ್ ಮತ್ತು ಬಿಜೆಪಿಯಿಂದಲೇ ಗೆಲುವು ಸಾಧಿಸುತ್ತಾ ಬಂದವರು. ಈಗ ತಾವೇ ಆ ದೋಸ್ತಿ ಪಕ್ಷದ ಅಭ್ಯರ್ಥಿಯಾಗಿರುವುದರಿಂದ ತಮ್ಮ ಗೆಲವು ಸುಲಭವೆಂದು ರಂಗನಾಥ್ ಭಾವಿಸಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬಿಜೆಪಿ ಪಕ್ಷದ ಅಧಿಕಾರದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನೇ ಪ್ರಧಾನವಾಗಿ ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದಾರೆ.

ಪುಟ್ಟಣ್ಣರವರು ಕಾಂಗ್ರೆಸ್ ಹಾಗೂ ರಂಗನಾಥ್ ರವರು ಜೆಡಿಎಸ್ - ಬಿಜೆಪಿ ಪಕ್ಷಗಳು ಮಾತ್ರವಲ್ಲದೆ ತಾವು ಶಿಕ್ಷಕರ ಪರವಾಗಿ ನಡೆಸಿದ ಹೋರಾಟ, ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳನ್ನು ಮತದಾರ ಶಿಕ್ಷಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಉಭಯ ಅಭ್ಯರ್ಥಿಗಳು ಪ್ರಜ್ಞಾವಂತ ಶಿಕ್ಷಕರು ತಮ್ಮನ್ನು ಬೆಂಬಲಿಸುವುದರಲ್ಲಿ ಅನುಮಾನವಿಲ್ಲ ಎಂಬ ಹುಮ್ಮಸ್ಸಿನಲ್ಲಿದ್ದಾರೆ.ಬಾಕ್ಸ್‌...............

ಕ್ಷೇತ್ರದಲ್ಲಿ ಕಾಣಿಸಿಕೊಳ್ಳದ ಪಕ್ಷೇತರ ಅಭ್ಯರ್ಥಿಗಳು :

ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಹಾಗೂ ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಎ.ಪಿ.ರಂಗನಾಥ್ ಬಿರುಸಿನ ಪ್ರಚಾರ ನಡೆಸಿದ್ದರೆ, ಪಕ್ಷೇತರರಾಗಿ ಕಣದಲ್ಲಿ ಉಳಿದ 7 ಅಭ್ಯರ್ಥಿಗಳು ಈವರೆಗೂ ಕ್ಷೇತ್ರದಲ್ಲಿ ಕಾಣಿಸಿಕೊಂಡಿಯೇ ಇಲ್ಲ.

11ಕೆಆರ್ ಎಂಎನ್ 5,6.ಜೆಪಿಜಿ

5.ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ

6.ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ರಂಗನಾಥ್

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು