ಪ್ರಾಣಿಗಳ ಆರೈಕೆಗೆ ಡಿಪ್ಲೊಮಾ ಕೋರ್ಸ್‌: ಈಶ್ವರ ಖಂಡ್ರೆ

KannadaprabhaNewsNetwork |  
Published : Jun 11, 2024, 01:32 AM ISTUpdated : Jun 11, 2024, 11:25 AM IST
ಈಶ್ವರ್‌ ಖಂಡ್ರೆ | Kannada Prabha

ಸಾರಾಂಶ

ಬನ್ನೇರುಘಟ್ಟ ಉದ್ಯಾನ ವನದಲ್ಲಿ ಪ್ರಾಣಿ ಆರೈಕೆ ಡಿಪ್ಲೊಮಾ ಕೋರ್ಸ್‌ ಆರಂಭಕ್ಕೆ ಮೃಗಾಲಯ ಪ್ರಾಧಿಕಾರ ಒಪ್ಪಿಗೆ ನೀಡಿದೆ.

  ಬೆಂಗಳೂರು :  ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಪ್ರಾಣಿಗಳ ಆರೈಕೆ ಮತ್ತು ನಿರ್ವಹಣೆಯ 10 ತಿಂಗಳ ಡಿಪ್ಲೊಮಾ ಕೋರ್ಸ್ ಆರಂಭಿಸಲು ಅರಣ್ಯ ಇಲಾಖೆ ಒಪ್ಪಿಗೆ ನೀಡಿದೆ. ಸೋಮವಾರ ವಿಕಾಸಸೌಧದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156ರ ಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಮೃಗಾಲಯಗಳಲ್ಲಿ ವನ್ಯಜೀವಿಗಳ ಆರೈಕೆಗೆ ನುರಿತ ಸಿಬ್ಬಂದಿಯ ಅಗತ್ಯವಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ಬೆಂಗಳೂರಿನ ಲೈಫ್ ಸೈನ್ಸ್ ಎಜುಕೇಷನ್ ಟ್ರಸ್ಟ್ ಸಹಯೋಗದಲ್ಲಿ ಈ ಕೋರ್ಸ್ ಆರಂಭಿಸಲು ತಾತ್ವಿಕ ಒಪ್ಪಿಗೆ ಸೂಚಿಸಿದರು.

ಡಿಪ್ಲೊಮಾ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಲಭಿಸುವಂತಿರಬೇಕು. ಈ ಕೋರ್ಸ್ ದೀರ್ಘಕಾಲ ಪ್ರಾಮುಖ್ಯತೆ ಪಡೆಯುವಂತಿರಬೇಕು, ಈ ನಿಟ್ಟಿನಲ್ಲಿ ಪಠ್ಯಕ್ರಮ ಮತ್ತು ಪ್ರಾಯೋಗಿಕ ತರಬೇತಿ ಕಾರ್ಯಕ್ರಮ ರೂಪಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಸಾಧಕ ಬಾಧಕ ಚರ್ಚಿಸಿ ಮುಂದಿನ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲು ಅಧಿಕಾರಿಗಳು ನಿರ್ದೇಶನ ನೀಡಿದರು.

ವೈಜ್ಞಾನಿಕವಾಗಿ ವನ್ಯಜೀವಿ ಮತ್ತು ಸಾಕುಪ್ರಾಣಿಗಳ ಸಂರಕ್ಷಣೆ, ನಿರ್ವಹಣೆ, ಆರೈಕೆ ಕುರಿತಂತೆ ಅಗತ್ಯ ಜ್ಞಾನ ಮತ್ತು ಕೌಶಲ ನೀಡುವ ಈ ಡಿಪ್ಲೊಮಾ ಕೋರ್ಸ್ ಪಡೆದವರು ಮೃಗಾಲಯಗಳಲ್ಲಿ, ಪುನರ್ವಸತಿ ಕೇಂದ್ರಗಳಲ್ಲಿ ಪ್ರಾಣಿಪಾಲಕರಾಗಿ ಕೆಲಸ ನಿರ್ವಹಿಸಬಹುದು. ಅದೇ ರೀತಿ ಖಾಸಗಿಯಾಗಿಯೂ ಸಾಕು ಪ್ರಾಣಿಗಳ ಆರೈಕೆ ಕೇಂದ್ರಗಳನ್ನು ನಡೆಸಬಹುದು. ಶಾಲಾ, ಕಾಲೇಜುಗಳಲ್ಲಿ ಪ್ರಾಣಿ ಆರೈಕೆಯ ತರಬೇತಿ ನೀಡಬಹುದು ಎಂಬ ಅಂಶವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಮತ್ಯ್ಸಾಗಾರ ನಿರ್ಮಾಣಕ್ಕೆ ಸಮ್ಮತಿ:

ಮೈಸೂರು ಶ್ರೀಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿ ಕೆರೆ ಮಧ್ಯ ಭಾಗದಲ್ಲಿ ಪಿಪಿಪಿ ಮಾದರಿಯಲ್ಲಿ ಮತ್ಸ್ಯಾಗಾರ ನಿರ್ಮಿಸಲು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವಂತೆ ಸೂಚಿಸಲಾಯಿತು. ಅಲ್ಲದೇ, ಉದ್ಯಾನದಲ್ಲಿ ಕ್ಯಾಮೆರಾ ಟಿಕೆಟ್ ಪರಿಚಯಿಸಿ, ಸ್ಥಿರ ಕ್ಯಾಮರಾಗೆ 150 ರು. ಮತ್ತು ವಿಡಿಯೋ ಕ್ಯಾಮರಾಗೆ 300 ರು. ದರ ವಿಧಿಸಲು ಅನುಮತಿಸಲಾಯಿತು.ಸಫಾರಿ ಆರಂಭಕ್ಕೂ ನಿರ್ಣಯ:

ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನವನದಲ್ಲಿ ಸಿಹಿ ನೀರು ಮತ್ತು ಉಪ್ಪು ನೀರಿನ ಮತ್ಸ್ಯಾಗಾರಗಳನ್ನು ನಿರ್ಮಿಸುವ ಸಂಬಂಧ ಅಧ್ಯಯನ ವರದಿ ಮತ್ತು ಕಾರ್ಯಸಾಧ್ಯತೆ ವರದಿ ಪರಿಶೀಲಿಸಿ ಮತ್ಸ್ಯಾಗಾರ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಯಿತು. ಮೃಗಾಲಯಗಳಲ್ಲಿ ವನ್ಯಜೀವಿ ಪಶುವೈದ್ಯರ ಕೊರತೆಯಾಗದಂತೆ ವೈದ್ಯರ ನೇಮಕಾತಿಗೆ ಅನುಮೋದನೆ ನೀಡಲಾಯಿತು. ಇದೇ ವೇಳೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸುವ ನಿರ್ಣಯ ಕೈಗೊಳ್ಳಲಾಯಿತು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ