ಅಡಕೆಗೆ ಕೊಳೆ ಕಷ್ಟ: ರೈತರಿಗೆ ಭಾರೀ ನಷ್ಟ

KannadaprabhaNewsNetwork |  
Published : Aug 27, 2024, 01:38 AM IST
ಬೆಳೆಗಾರರ ಮನೆ ಅಂಗಳದಲ್ಲಿ ಹರಡಿದ ಕೊಳೆ ಅಡಕೆ. | Kannada Prabha

ಸಾರಾಂಶ

ಈ ಕೊಳೆ ಅಡಕೆಯನ್ನು ಒಂದಕ್ಕೆ ಎರಡಷ್ಟು ಕೂಲಿ ನೀಡಿ ತೋಟದಿಂದ ಆರಿಸಿ ತರಬೇಕಿದೆ. ಹೀಗಾಗಿ ಒಂದರ್ಥದಲ್ಲಿ ರೈತರು ನಷ್ಟದಲ್ಲಿ ಅಡಕೆ ಉತ್ಪಾದಿಸುವಂತಾಗಿದೆ

ಕಲಗಾರು ಲಕ್ಷ್ಮೀನಾರಾಯಣ ಹೆಗಡೆ

ಕನ್ನಡಪ್ರಭ ವಾರ್ತೆ ತಾಳಗುಪ್ಪ

ಈ ಬಾರಿ ಸುರಿದ ಪುನರ್ವಸು, ಪುಷ್ಯಮಳೆ ಆರ್ಭಟಕ್ಕೆ ನಲುಗಿ ಅಡಕೆ ಬೆಳೆ ಕೊಳೆ ರೋಗಕ್ಕೆ ಸಿಲುಕಿದೆ. ಕ್ವಿಂಟಲ್ ಗಟ್ಟಲೆ ಅಡಕೆ ನೀಡಬೇಕಿದ್ದ ತೋಟವೀಗ ಕೆಜಿ ಲೆಕ್ಕದಲ್ಲಿ ಉದುರಿದ ಕೊಳೆ ಅಡಕೆ ನೀಡುತ್ತಿದ್ದು, ರೈತರು ಅಕ್ಷರಶಃ ಕಂಗಾಲಾಗಿದ್ದಾರೆ.

ಪ್ರತಿ ಕ್ವಿಂಟಲ್ ಹಸಿ ಅಡಕೆಗೆ ಆರು ಸಾವಿರ ಸಿಗುತ್ತಿದ್ದ ಜಾಗದಲ್ಲೀಗ ಪ್ರತಿ ಕ್ವಿಂಟಲ್ ಕೊಳೆ ಅಡಕೆಗೆ 349-800 ರು.ಗಳವರೆಗ ಸಿಗುತ್ತಿದೆ. ಈ ಕೊಳೆ ಅಡಕೆಯನ್ನು ಒಂದಕ್ಕೆ ಎರಡಷ್ಟು ಕೂಲಿ ನೀಡಿ ತೋಟದಿಂದ ಆರಿಸಿ ತರಬೇಕಿದೆ. ಹೀಗಾಗಿ ಒಂದರ್ಥದಲ್ಲಿ ರೈತರು ನಷ್ಟದಲ್ಲಿ ಅಡಕೆ ಉತ್ಪಾದಿಸುವಂತಾಗಿದೆ.

ವ್ಯಾಪಕ ಕೊಳೆ:

ಎಡೆಬಿಡದೆ ತಿಂಗಳುಗಳ ಕಾಲ ಸುರಿದ ಮಳೆಯಿಂದಾಗಿ ಅಡಕೆ ಗೊನೆಗಳಿಗೆ ಔಷಧ ಸಿಂಪಡಿಸಲೂ ಸಾಧ್ಯವಾಗದ ಪರಿಸ್ಥಿತಿಯುಂಟಾಗಿ ವಾಡಿಕೆ ಫಸಲಿನ ಅರ್ಧಕ್ಕಿಂತ ಹೆಚ್ಚು ಬೆಳೆ ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ಮಲೆನಾಡಿನ ಸಾಂಪ್ರದಾಯಕ ಅಡಕೆ ಹಿಂದೆಂದೂ ಕಾಣದ ಕೊಳೆ ರೋಗಕ್ಕೆ ತುತ್ತಾಗಿ ಬಲಿಯುವ ಮುನ್ನವೇ ಅಡಕೆ ಉದುರುತ್ತಿದೆ. ಹೀಗೆ ಉದುರಿದ ಕೊಳೆ ಕಾಯಿಯನ್ನು ತೋಟದಿಂದ ಆರಿಸಿ ಹೊರಗೆ ಹಾಕಲೇಬೇಕು. ಇಲ್ಲದಿದ್ದರೆ ರೋಗ ಪ್ರಸರಣ ಹೆಚ್ಚುತ್ತದೆ. ಅಡಕೆ ಮರ ಸಾಯುವ ಸಂಭವ ಕೂಡ ಇರುತ್ತದೆ. ಹೀಗಾಗಿ ಲಾಭ ನಷ್ಟದ ಲೆಕ್ಕಾಚಾರ ಹಾಕದೆ ದುಬಾರಿ ಕೂಲಿಯ ಸನ್ನಿವೇಶದಲ್ಲಿ ಕೊಳೆ ಅಡಕೆಯನ್ನು ಆರಿಸಿ ಹೊರ ಹಾಕಲೇಬೇಕು. ಹೀಗೆ ಆರಿಸಿದ ಕೊಳೆ ಅಡಕೆಯನ್ನು ತಕ್ಷಣವೇ ಸುಲಿದು ಒಣಗಿಸಬೇಕು. ಬಿಸಿಲೇ ಇಲ್ಲದ ಈ ಸಂದರ್ಭದಲ್ಲಿ ಇದು ಕೂಡ ಕಠಿಣ ಕಾರ್ಯ.

ಪ್ರತಿಯೊಬ್ಬ ಬೆಳೆಗಾರನೂ ಮನೆ ಅಂಗಳದಲ್ಲಿ ರಾಶಿ ಹಾಕಿರುವ ಕೊಳೆ ಅಡಿಕೆಯನ್ನು ಕಂಡು ಸಂಕಟ ಪಡುತ್ತಿದ್ದಾನೆ. ಬೆಳೆಗಾರರ ಅಂದಾಜಿನಂತೆ ಎಷ್ಟು ಪ್ರಮಾಣ ಅಡಕೆ ಸಿಗಬೇಕಿತ್ತೋ, ಕೊಳೆ ರೋಗ ಬಂದರೆ ಅದರ ಐದನೇ ಒಂದು ಭಾಗದಷ್ಟು ಮಾತ್ರ ಕೊಳೆ ಅಡಕೆ ಸಿಗುತ್ತದೆ. ಈ ಅಡಕೆಗೆ ಧಾರಣೆ ಕೂಡ ವಿಪರೀತ ಎನ್ನುವಷ್ಟು ಕಡಿಮೆ.

ಲಕ್ಷಾಂತರ ರು. ನಷ್ಟ.

ಕೊಳೆ ಅಡಕೆ ವ್ಯಾಪಾರಿಗಳಿಗೆ ಸುಗ್ಗಿ:

ಕೊಳೆ ಅಡಕೆಯನ್ನು ಒಣಗಿಸಿ ಸುಲಿದರೆ ಕೋಳಿ ಹಿಕ್ಕೆಯಂತಹ ಚಿಕಣಿ ಅಡಿಕೆ ದೊರೆಯುತ್ತದೆ. ಕೆಲ ಸಣ್ಣ ವ್ಯಾಪಾರಸ್ಥರು ಕೊಳೆ ಅಡಕೆ ಖರೀದಿಸಿ ಸುಲಿಸಿ ಮಾರುತ್ತಾರೆ. ಅಂತಹವರಿಗೆ ಈ ಬಾರಿ ಎಲ್ಲೆಂದರಲ್ಲಿ ರಾಶಿ ರಾಶಿ ಕೊಳೆ ಅಡಕೆ ದೊರಕುತ್ತಿದೆ.

ಕೊಳೆ ಅಡಕೆ ಕ್ವಿಂಟಲ್‌ಗೆ 349 ರು.

ಸಿರ್ಸಿಯ ತೋಟಗಾರ್ ಸೊಸೈಟಿಯು ಅಗಸ್ಟ್‌ 15 ರಿಂದ ಕೊಳೆ ಅಡಕೆಗೆ ಟೆಂಡರ್ ಮೂಲಕ ವ್ಯಾಪಾರ ವ್ಯವಸ್ಥೆ ಕಲ್ಪಿಸಿದೆ. ಕ್ವಿಂಟಲ್ಗೆ ಕನಿಷ್ಠದರ 349 ರು. ಆಗಿದ್ದು, ಗರಿಷ್ಠ 809 ರು. ಗಳಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''