ಭಟ್ಕಳ: ಪುರಸಭೆ ವ್ಯಾಪ್ತಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಒಳಚರಂಡಿ ಮ್ಯಾನ್‌ಹೋಲ್‌ನಿಂದ ತ್ಯಾಜ್ಯದ ನೀರು ಸೋರಿಕೆಯಾಗಿ ಕುಡಿಯುವ ನೀರಿನ ಬಾವಿಗೆ ಸೇರಿ ಬಾವಿಯ ನೀರು ಕುಡಿಯದಂತಾಗಿದೆ ಎಂದು ಪುರಸಭೆ ಸದಸ್ಯರು ಆರೋಪಿಸಿದರು.
ಹೊಲಸು ನೀರು ಕುಡಿಯುವ ನೀರಿನ ಬಾವಿಗೆ ಸೇರುತ್ತಿರುವುದರಿಂದ ಜನರು ಪುರಸಭೆ ಸದಸ್ಯರಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಯಾರೋ ಮಾಡಿದ ಕೆಲಸಕ್ಕೆ ಇನ್ಯಾರೋ ಬೈಸಿಕೊಳ್ಳುವಂತಾಗಿದೆ. ಕಾಮಗಾರಿ ನಿರ್ಮಿಸಿದವರ ಮೇಲೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಆಗ್ರಹಿಸಿದರು.
ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ಸಾಗರ ರಸ್ತೆಯಲ್ಲಿರುವ ಪುರಸಭೆಯ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಜಾಲಿ ಪಟ್ಟಣ ಪಂಚಾಯಿತಿಯಿಂದ ಒಣಕಸ ಮರು ಉತ್ಪಾದನೆ ಘಟಕ ನಿರ್ಮಿಸಲು ₹80 ಲಕ್ಷ ನೀಡಲಾಗುತ್ತಿದೆ ಎಂದು ಹೇಳಿದಾಗ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪುರಸಭೆ ಮಾಜಿ ಅಧ್ಯಕ್ಷ ಪರ್ವೇಜ ಕಾಶೀಮಜಿ, ಕಳೆದ ಹಲವು ವರ್ಷಗಳಿಂದ ಜಾಲಿ ಪಪಂನವರು ಪುರಸಭೆಯ ತ್ಯಾಜ್ಯ ಘಟಕದಲ್ಲಿ ತ್ಯಾಜ್ಯ ಹಾಕುತ್ತಿದ್ದರೂ ಒಂದು ರುಪಾಯಿಯೂ ಭರಣ ಮಾಡಿಲ್ಲ.ಜಾಲಿ ಪಟ್ಟಣ ಪಂಚಾಯಿತಿಯನವರು ತ್ಯಾಜ್ಯ ಹಾಕುವ ಸಲುವಾಗಿ ₹25 ಲಕ್ಷ ಬಾಡಿಗೆಯನ್ನು ಪುರಸಭೆಗೆ ಭರಣ ಮಾಡಬೇಕಾಗಿದ್ದು, ಬಾಡಿಗೆ ಪಾವತಿ ಮಾಡುವ ತನಕ ತ್ಯಾಜ್ಯ ಘಟಕದಲ್ಲಿ ಜಾಲಿ ಪಪಂನವರಿಗೆ ತಾಜ್ಯ ಹಾಕಲು ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು. ಪುರಸಭೆಯ ತ್ಯಾಜ್ಯ ಘಟಕದಲ್ಲಿ ಜಾಲಿ ಪಪಂನವರು ಘಟಕ ನಿರ್ಮಿಸುವುದು ಯಾಕೆ? ಹೆಬಳೆ ಹಾಗೂ ಮಾವಳ್ಳಿಯಿಂದಲೂ ಕೂಡ ಕಸವನ್ನು ತಂದು ನಮ್ಮ ಘಟಕಕ್ಕೆ ಹಾಕಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಅವರು ತಂದು ಹಾಕುವ ಕಸಕ್ಕೆ ನಾವು ನಿರ್ವಹಣೆ ಮಾಡಬೇಕೆ ಎಂದು ಖಾರವಾಗಿ ಪ್ರಶ್ನಿಸಿದರು.
ಪುರಸಭಾ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಜಾಗದ ನಕ್ಷೆಯ ಅನುಮೋದನೆ ಮಾಡುವ ನಗರ ಯೋಜನಾ ಅಧಿಕಾರಿ ಸ್ಥಳಕ್ಕೆ ಬಂದು ರಸ್ತೆ ಇನ್ನಿತರ ಬಗ್ಗೆ ಪರಿಶೀಲನೆ ನಡಸದೇ ಸ್ಥಳದಲ್ಲಿಯೇ ಕುಳಿತು ಅನುಮೋದನೆ ನೀಡುತ್ತಿದ್ದಾರೆ. ಇದರಿಂದಾಗಿ ರಸ್ತೆಯ ಮೇಲೆ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಪುರಸಭಾ ಸದಸ್ಯ ಕೃಷ್ಣಾನಂದ ಪೈ ಸಭೆಯ ಗಮನಕ್ಕೆ ತಂದರು.
ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನೀಲಕಂಠ ಮೇಸ್ತ ಅವರು, ಬಂಕ್ ನವರು ವಿದ್ಯುತ್ ನಿರಾಪಕ್ಷಣೆಗೆ ಅರ್ಜಿ ನೀಡಿದ್ದು, ಪುರಸಭೆಯಿಂದ ತಡೆಹಿಡಿಯಲಾಗಿದೆ ಎಂದರು.