ಕೃಷ್ಣ ಲಮಾಣಿ
ಹೊಸಪೇಟೆ: ವಿಶ್ವ ವಿಖ್ಯಾತ ವಿರೂಪಾಕ್ಷೇಶ್ವರ ರಥಬೀದಿ ಸಾಲು ಮಂಟಪದಲ್ಲಿ ಮಲಿನ ನೀರು ನಿಂತಿದ್ದರೂ ಸಂಬಂಧಿಸಿದ ಇಲಾಖೆ ಮಾತ್ರ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಈ ನೀರಿನಲ್ಲಿ ಕಸ ಬೆಳೆದಿದ್ದರೂ ಅದನ್ನು ಸ್ವಚ್ಛಗೊಳಿಸುವ ಗೋಜಿಗೂ ಹೋಗುತ್ತಿಲ್ಲ.ಹಂಪಿ ಸ್ಮಾರಕಗಳ ವೀಕ್ಷಣೆಗೆ ದೇಶ, ವಿದೇಶಗಳಿಂದ ಪ್ರವಾಸಿಗರು ಭಾರೀ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ 1986ರಲ್ಲೇ ವಿಶ್ವ ಪರಂಪರೆ ತಾಣದ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಹಾಗಾಗಿ ಹಂಪಿಯ ಪ್ರಮುಖ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ಕೇಂದ್ರ ಪುರಾತತ್ವ ಇಲಾಖೆಗೆ ವಹಿಸಲಾಗಿದೆ. ಇದರನ್ವಯ ವಿರೂಪಾಕ್ಷೇಶ್ವರ ದೇವಾಲಯ, ರಥಬೀದಿ ಸಂರಕ್ಷಿಸುವ ಹೊಣೆಗಾರಿಕೆಯೂ ಕೇಂದ್ರ ಪುರಾತತ್ವ ಇಲಾಖೆ ಸುಪರ್ದಿಯಲ್ಲಿದೆ. ಈ ದೇವಾಲಯಕ್ಕೆ ದೇಶ, ವಿದೇಶಿ ಪ್ರವಾಸಿಗರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಹೀಗಿದ್ದರೂ ದೇವಾಲಯದ ರಥಬೀದಿಯಲ್ಲಿರುವ ಸಾಲು ಮಂಟಪಗಳ ಪಕ್ಕದಲ್ಲೇ ಮಳೆ ನೀರು ನಿಂತು ಮಲಿನವಾಗಿದೆ. ಜೊತೆಗೆ ಕಸ ಬೆಳೆದಿದ್ದರೂ ಸ್ವಚ್ಛತೆಯತ್ತ ದೃಷ್ಟಿ ಹರಿಸಲಾಗುತ್ತಿಲ್ಲ.
ಮುತ್ತು, ರತ್ನ ಮಾರಾಟ:ಈ ಐತಿಹಾಸಿಕ ಸಾಲು ಮಂಟಪಗಳಲ್ಲಿ ವಿಜಯನಗರದ ಆಳರಸರ ಕಾಲದಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ಮಾರಾಟ ಮಾಡಲಾಗುತ್ತಿತ್ತು. ವಿಜಯನಗರ ಆಳರಸರ ಕಾಲದಲ್ಲಿ ಆಗಮಿಸಿದ್ದ ಆಗಿನ ರಾಯಭಾರಿಗಳಾದ ಡೊಮಿಂಗೊ ಪಯಾಸ್ ಮತ್ತು ಅಬ್ದುಲ್ ರಜಾಕ್‌ರ ಪ್ರವಾಸ ಕಥನ ವರ್ಣನೆಯಿಂದಲೇ ಸಾಲು ಮಂಟಪಗಳಲ್ಲಿ ವಜ್ರ, ವೈಢೂರ್ಯ, ಮುತ್ತು, ರತ್ನಗಳನ್ನು ಬಳ್ಳದಿಂದ ಮಾರಾಟ ಮಾಡಲಾಗುತ್ತಿತ್ತು ಎಂಬುದು ತಿಳಿಯುತ್ತದೆ. ಇಂತಹ ಐತಿಹಾಸಿಕ ಸ್ಮಾರಕಗಳನ್ನು ರಕ್ಷಣೆ ಮಾಡಬೇಕಾದ ಪುರಾತತ್ವ ಇಲಾಖೆಯೇ ಈಗ ನಿರ್ಲಕ್ಷ್ಯ ವಹಿಸುತ್ತಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲ.
ಸಾಲು ಮಂಟಪದ ಬಳಿ ಉತ್ಖನನ ನಡೆಸಿ ಹಾಗೆಯೇ ಬಿಡಲಾಗಿದೆ. ಹಾಗಾಗಿ ಮಳೆ ನೀರು ಈ ಮಂಟಪಗಳ ಬಳಿ ನಿಂತಿದ್ದು, ಈಗ ಮಲಿನ ನೀರಾಗಿ ಬದಲಾಗಿದೆ. ಈ ನೀರಿನಲ್ಲೇ ಕಸ ಬೆಳೆದಿದೆ. ಇದನ್ನು ಕೂಡ ಸ್ವಚ್ಛ ಮಾಡುತ್ತಿಲ್ಲ.ಹಂಪಿಯ ಅಷ್ಟಭುಜ ಸ್ನಾನದ ಕೊಳ, ಮಹಾನವಮಿ ದಿಬ್ಬದ ಬಳಿಯ ಪುಷ್ಕರಣಿ, ಕೃಷ್ಣ ಬಜಾರನ ಪುಷ್ಕರಣಿ, ಮನ್ಮಥ ಹೊಂಡ, ಅಚ್ಯುತರಾಯ ಬಳಿ ಪುಷ್ಕರಣಿ ಸೇರಿದಂತೆ ಹಂಪಿಯ ವಿವಿಧ ಸ್ಮಾರಕಗಳ ಬಳಿ ನೀರು ನಿಂತಿದೆ.
ಹಂಪಿ ಸಾಲು ಮಂಟಪಗಳಲ್ಲಿ ಕೆಲ ಮಂಟಪಗಳು ಶಿಥಿಲಾವಸ್ಥೆಗೆ ತಲುಪಿವೆ. ಈ ಮಂಟಪಗಳನ್ನು ಗುರುತಿಸಿ ಜೀರ್ಣೋದ್ಧಾರ ಮಾಡುವ ಕಾರ್ಯವೂ ಪುರಾತತ್ವ ಇಲಾಖೆಯಿಂದ ಆಗುತ್ತಿಲ್ಲ. ಪ್ರಮುಖ ಸ್ಮಾರಕಗಳ ಬಳಿ ಕಸ ಬೆಳೆದಿದ್ದರೂ ಸ್ವಚ್ಛತೆ ಮಾಡಲಾಗುತ್ತಿಲ್ಲ. ಇನ್ನು ಸ್ಮಾರಕಗಳ ಬಳಿಯೇ ನೀರಿನ ಬಾಟಲಿಗಳನ್ನು ಪ್ರವಾಸಿಗರು ಎಸೆಯುತ್ತಿದ್ದರೂ ಜಾಗೃತಿ ಮೂಡಿಸುವ ಗೋಜಿಗೂ ಹೋಗುತ್ತಿಲ್ಲ. ಕಮಲ ಮಹಲ್ ಸ್ಮಾರಕದ ಮೇಲೆ ಪ್ರವಾಸಿಗರು ಕುಳಿತು ವಿಶ್ರಾಂತಿ ತೆಗೆದುಕೊಳ್ಳುವುದಲ್ಲದೇ, ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರೂ ಯಾರು ಏನೂ ಹೇಳದಂತಾಗಿದ್ದಾರೆ. ಪುರಾತತ್ವ ಇಲಾಖೆ ಅಧಿಕಾರಿಗಳಂತೂ ಸ್ಮಾರಕಗಳಿಗೂ ತಮಗೂ ಸಂಬಂಧವಿಲ್ಲದಂತೆ ವರ್ತಿಸುತ್ತಿರುವುದು ಇತಿಹಾಸಪ್ರಿಯರನ್ನು ಆತಂಕಕ್ಕೀಡು ಮಾಡಿದೆ.ಹಂಪಿಯ ಸ್ನಾರಕಗಳ ಸಂರಕ್ಷಣೆ ಕುರಿತು ಈಗಾಗಲೇ ಕೇಂದ್ರ ಪುರಾತತ್ವ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿರೂಪಾಕ್ಷೇಶ್ವರ ರಥಬೀದಿಯಲ್ಲೂ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ವಿಜಯನಗರ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ.
ಹಂಪಿ ಸ್ಮಾರಕಗಳ ಬಳಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಶುಚಿತ್ವ ಮಾಯವಾಗಿದೆ. ಇನ್ನು ಪ್ರಮುಖ ಸ್ಮಾರಕಗಳ ಬಳಿಯೂ ಕಸ ಬೆಳೆದಿದೆ ಎನ್ನುತ್ತಾರೆ ಪ್ರವಾಸಿಗ ಸಂಚಿತಾ.