ಅಂಗವಿಕಲರು ಕಲ್ಪನೆ ಮೀರಿ ಸಾಧನೆ ಮಾಡಬಲ್ಲರು: ಜಿಲ್ಲಾಧಿಕಾರಿ ದಿವಾಕರ್‌

KannadaprabhaNewsNetwork | Published : Dec 4, 2024 12:32 AM

ಸಾರಾಂಶ

ಅಂಗವಿಕಲರು ಕಲ್ಪನೆಗಳಿಗಿಂತಲೂ ಹೆಚ್ಚಾಗಿ ಸಾಧನೆ ಮಾಡಬಲ್ಲರು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ಹೊಸಪೇಟೆ: ಸಮಾಜದಲ್ಲಿ ಅಂಗವಿಕಲರು ತಮ್ಮದೇ ಆದ ಸಾಮರ್ಥ್ಯಗಳು, ಕೌಶಲ್ಯಗಳು ಹಾಗೂ ಪ್ರತಿಭೆಗಳ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸಿರುವ ಹಲವಾರು ಉದಾಹರಣೆಗಳು ನಮ್ಮ ಮುಂದೆ ಇವೆ. ಅವರು ಕಲ್ಪನೆಗಳಿಗಿಂತಲೂ ಹೆಚ್ಚಾಗಿ ಸಾಧನೆ ಮಾಡಬಲ್ಲರು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್‌ ಹೇಳಿದರು.

ವಿಜಯನಗರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಕಾನೂನು ಸೇವಾ ಸಮಿತಿ ಹೊಸಪೇಟೆ, ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ನಡೆದ ವಿಶ್ವ ಅಂಗವಿಕಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಅಂಗವಿಕಲರಲ್ಲಿ ಇರುವ ಕೀಳರಿಮೆ ನಿವಾರಿಸಿ, ಅವರ ಜೀವನವನ್ನು ಹೆಚ್ಚು ಸುಗಮಗೊಳಿಸಲು ನಮ್ಮೆಲ್ಲರ ಸಹಕಾರ ಅಗತ್ಯ. ಇದು ಕೇವಲ ಅವರಿಗೆ ಸವಲತ್ತು ನೀಡುವ ಪ್ರಶ್ನೆಯಲ್ಲ, ಬದಲಾಗಿ ಸಮಾನ ಅವಕಾಶಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬ ಸಿದ್ಧಾಂತವನ್ನು ಬೆಂಬಲಿಸುವ ಕಾರ್ಯವಾಗಿದೆ ಎಂದರು.

ಅಂಗವಿಕಲರು ಸಮಾಜದಲ್ಲಿ ಯಾವುದಕ್ಕೂ ಎದೆಗುಂದದೆ ಜೀವನ ನಡೆಸುವ ಮನೋಭಾವ ಬೆಳೆಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗವಿಕಲರ ದಿನಾಚರಣೆ ಮಾಡಲಾಗುತ್ತದೆ. ಅವರಿಗೆ ಎಲ್ಲ ರೀತಿಯ ಸಹಾಯ ಸೌಲಭ್ಯವನ್ನು ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿನ ಸೌಲಭ್ಯಗಳಲ್ಲಿನ ಮೀಸಲಾತಿ ಕೇವಲ ಶೇ. 5ಕ್ಕೆ ಸೀಮಿತವಾಗದೆ, ಎಲ್ಲರಂತೆ ಶೇ.100ರಲ್ಲಿ ನಮಗೇನು ದೊರಕಿದೆ ಎಂದು ಅಂಗವಿಕಲರು ವಿಶ್ಲೇಷಣೆ ಮಾಡಿಕೊಂಡು ಮಾನಸಿಕವಾಗಿ ಸದೃಢರಾಗಿ ಸಾಧನೆಯತ್ತ ಸಾಗಬೇಕು. ಪ್ರತಿ ಹತ್ತು ಸಾಧಕರಲ್ಲಿ ಇಬ್ಬರು ನೀವಾಗಿರಬೆಕು ಎಂದು ಸಲಹೆ ನೀಡಿದರು.

ಸಾಫ್ಟವೇರ್‌ಗೆ ಚಾಲನೆ

ವಿಜಯನಗರ ಜಿಲ್ಲೆ ರಾಜ್ಯದಲ್ಲಿಯೇ ಮೊದಲ ವಿಶೇಷಚೇತನರ ಮಾಹಿತಿ ನಿರ್ವಹಣೆ ವ್ಯವಸ್ಥೆಯ ಸಾಫ್ಟ್‌ವೇರ್‌ ನಿರ್ಮಿಸಿದ್ದು, ಜಿಲ್ಲಾಧಿಕಾರಿ ದಿವಾಕರ್‌ ಅವರು ಇದಕ್ಕೆ ಚಾಲನೆ ನೀಡಿದರು.

ವಿವಿಧ ಸಲಕರಣೆಗಳ ವಿತರಣೆ

2023-24ನೇ ಸಾಲಿನಲ್ಲಿ ಸುವಿಧಾ ಯೋಜನೆಯಡಿ ಸೌಲಭ್ಯಕ್ಕೆ ಆಯ್ಕೆಯಾದ 9 ಫಲಾನುಭವಿಗಳಿಗೆ ವ್ಹೀಲ್‌ಚೇರ್, 10 ಫಲಾನುಭವಿಗಳಿಗೆ ಶ್ರವಣ ಸಾಧನ, 4 ಫಲಾನುಭವಿಗಳಿಗೆ ಎಂ.ಆರ್ ಕಿಟ್‌ಗಳನ್ನು ಜಿಲ್ಲಾಧಿಕಾರಿ ವಿತರಿಸಿದರು.

ಸಾಧಕರಿಗೆ ಸನ್ಮಾನ

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಂಜುನಾಥ, ಲಕ್ಷ್ಮೀ, ಶರಣೇಶ ಕೆ.ಎಂ., ತರುಣ್, ವಸಂತ್ ಕುಮಾರ, ಬಾಣದ ಗಂಗಮ್ಮ, ಹೊಸೂರಪ್ಪ, ಟಿ. ತಿಮ್ಮಣ್ಣ, ಎಸ್.ಜಿ. ಶಾರದಾ ಮತ್ತು ಪೂಜಾರ್ ದೀಪಾ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಪ್ರಶಸ್ತಿ ಪ್ರದಾನ:ಅಂಗವಿಕಲರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪುಟ್ಟರಾಜ ಗವಾಯಿಗಳ ಭಾವಚಿತ್ರ ಮೆರವಣಿಗೆ

ನಗರದ ನೆಹರು ಕಾಲೋನಿಯ ಸಹಕಾರಿ ಕಲ್ಯಾಣ ಮಂಟಪದಿಂದ ಪುಟ್ಟರಾಜ ಗವಾಯಿಗಳ ಭಾವಚಿತ್ರ ಮೆರವಣಿಗೆ ಪ್ರಾರಂಭಗೊಂಡಿತು. ನಗರದ ವಾಲ್ಮೀಕಿ ವೃತ್ತ, ರಾಜ ವೀರಮದಕರಿ ವೃತ್ತ, ಉದ್ಯೋಗ ಪೆಟ್ರೋಲ್ ಬಂಕ್, ಮಸೀದಿ ಮಾರ್ಗ, ಗಾಂಧಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಶ್ರೀ ವೆಂಕಟೇಶ್ವರ ಕಲ್ಯಾಣ ಮಂಟಪದ ವರೆಗೆ ಶ್ರೀ ಪುಟ್ಟರಾಜ ಗವಾಯಿಗಳ ಭಾವಚಿತ್ರದ ಮೆರವಣಿಗೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶ ಲಿಂಗ ಎಸ್. ಗೋಟಖಿಂಡಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸುಭದ್ರಾದೇವಿ, ಶಿರಸ್ತೆದಾರ್ ಶಿವರತ್ನಮ್ಮ, ಅಂಜಲಿ ಬೆಳಗಲ್‌, ಸಿದ್ದಲಿಂಗೇಶ್‌ ಮತ್ತಿತರರಿದ್ದರು.

Share this article