ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷೆ ಕಳವಳ । ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ ಜಿಲ್ಲಾ ಸಮ್ಮೇಳನ
ಕನ್ನಡಪ್ರಭ ವಾರ್ತೆ ಗಂಗಾವತಿಆರ್‌ಎಸ್‍ಎಸ್ ನೇತೃತ್ವದ ಫ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕರ ಹಕ್ಕುಗಳ ಮಾಯವಾಗುತ್ತಿವೆ ಎಂದು ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷೆ ಮೈತ್ರಿ ಕೃಷ್ಣನ್ ಕಳವಳ ವ್ಯಕ್ತಪಡಿಸಿದರು.ನಗರದ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‌ನ (ಎಐಸಿಸಿಟಿಯು) ಜಿಲ್ಲಾ 2ನೇ ಸಮ್ಮೇಳನದಲ್ಲಿ ಮಾತನಾಡಿದರು.ಕೇಂದ್ರದ ಆರ್‌ಎಸ್‍ಎಸ್ ನೇತೃತ್ವದ ಫ್ಯಾಸಿಸ್ಟ್ ಆಳ್ವಿಕೆಯಿಂದ ಕಾರ್ಮಿಕ ವರ್ಗದ ಹಕ್ಕುಗಳು, ಕಾನೂನುಗಳನ್ನು ಮರೆ ಮಾಚಲಾಗುತ್ತಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಏರ್ಪಾಡನ್ನು ಪ್ರಧಾನಿ ಮೋದಿ ಆಡಳಿತ ಸಿದ್ಧ ಮಾಡಿಕೊಳ್ಳುತ್ತಿದೆ. ಕಾರ್ಮಿಕರ ಹಕ್ಕುಗಳಿಗಾಗಿ ಐಕ್ಯದಿಂದ ಹೋರಾಟ ತೀವ್ರಗೊಳಿಸಬೇಕೆಂದು ಎಂದು ತರೆ ನೀಡಿದರು.ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹಿರಿಯ ಕಾರ್ಮಿಕ ಮುಖಂಡ ಜೆ. ಭಾರದ್ವಾಜ್, ಕೇಂದ್ರ ಸರ್ಕಾರ 44 ಕಾರ್ಮಿಕ ಕಾನೂನುಗಳ ಬದಲಾಗಿ ನಾಲ್ಕು ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಿ, ಬಂಡವಾಳಶಾಹಿಗೆ ದೇಶದ ಸಂಪನ್ಮೂಲವನ್ನು ಧಾರೆಯೆರೆಯುತ್ತಾ, ಕಾರ್ಮಿಕ ವರ್ಗದ ವಿನಾಶಕ್ಕೆ ಹಾದಿಯನ್ನು ಸುಗಮಗೊಳಿಸುತ್ತಲಿದೆ. ಕಾರ್ಮಿಕರು ತನ್ನ ವರ್ಗ ಮತ್ತು ಹಕ್ಕುಗಳು ಹಾಗೂ ಕಾನೂನುಗಳನ್ನು ರಕ್ಷಿಸಿಕೊಳ್ಳಲು ಜೀವನ್ಮರಣದ ಹೋರಾಟಗಳಿಗೆ ಹೆಗಲೊಡ್ಡಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಎಐಸಿಸಿಟಿಯು ರಾಜ್ಯ ಸಮಿತಿ ಸದಸ್ಯರಾದ ವಿಜಯ್ ದೊರೆರಾಜ್, ನಾಗರಾಜ ಪೂಜಾರ್ ಇತರರು ಮಾತನಾಡಿದರು.ಸಮ್ಮೇಳನದಲ್ಲಿ 22 ಜನರ ಎಐಸಿಸಿಟಿಯು ಕೊಪ್ಪಳ ಜಿಲ್ಲಾ ಸಮಿತಿ ರಚಿಸಿ, ಜಿಲ್ಲಾ ಗೌರವ ಅಧ್ಯಕ್ಷರನ್ನಾಗಿ ಭಾರಧ್ವಾಜ್, ಜಿಲ್ಲಾಧ್ಯಕ್ಷರನ್ನಾಗಿ ವಿಜಯ್ ದೊರೆರಾಜ್, ಕಾರ್ಯದರ್ಶಿಯಾಗಿ ಕೇಶವ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಭೀಮಣ್ಣ, ಚಾಂದ್‍ಪಾಷಾ, ಮಾಯಮ್ಮ, ಪಾರ್ವತಮ್ಮ, ಬುರಾನ್ನುದ್ದಿನ್, ರೇಣುಕಮ್ಮ, ಕೆ. ದುರುಗಪ್ಪ, ಹುಲ್ಲೇಶ, ಮಂಜುನಾಥ, ಜಡಿಯಪ್ಪ ಇತರರು ಇದ್ದರು.