ಅರಣ್ಯ ನಾಶ ತಡೆಯದಿದ್ದರೆ ಅನಾಹುತ ತಪ್ಪಿದ್ದಲ್ಲ-ಶಾಸಕ ಶ್ರೀನಿವಾಸ ಮಾನೆ

KannadaprabhaNewsNetwork | Published : Oct 2, 2024 1:09 AM

ಸಾರಾಂಶ

ಏನಾದರೂ ಕೆಲಸ ಮಾಡಿ ಬದುಕಬಹುದು. ಆದರೆ ಅರಣ್ಯ ನಾಶ ಮಾಡಿ ಬದುಕುವುದು ಅಸಾಧ್ಯ. ಭೂಮಿಯ ಮೇಲಿನ ಭಾರ, ಒತ್ತಡ ದಿನೇ ದಿನೆ ಹೆಚ್ಚುತ್ತಿದೆ. ಇನ್ನಾದರೂ ಜವಾಬ್ದಾರಿ ಅರಿಯದಿದ್ದರೆ, ಜಾಗೃತಿ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.

ಹಾನಗಲ್ಲ: ಏನಾದರೂ ಕೆಲಸ ಮಾಡಿ ಬದುಕಬಹುದು. ಆದರೆ ಅರಣ್ಯ ನಾಶ ಮಾಡಿ ಬದುಕುವುದು ಅಸಾಧ್ಯ. ಭೂಮಿಯ ಮೇಲಿನ ಭಾರ, ಒತ್ತಡ ದಿನೇ ದಿನೆ ಹೆಚ್ಚುತ್ತಿದೆ. ಇನ್ನಾದರೂ ಜವಾಬ್ದಾರಿ ಅರಿಯದಿದ್ದರೆ, ಜಾಗೃತಿ ವಹಿಸದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂದು ಶಾಸಕ ಶ್ರೀನಿವಾಸ ಮಾನೆ ಆತಂಕ ವ್ಯಕ್ತಪಡಿಸಿದರು.ಇಲ್ಲಿನ ರೋಶನಿ ಶಾಲೆಯಲ್ಲಿ ರೋಶನಿ ಟ್ರಸ್ಟ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಹಾಗೂ ಜನವೇದಿಕೆ ಮುಖಂಡರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೈಸರ್ಗಿಕ ವ್ಯತ್ಯಾಸ ವ್ಯಾಪಕವಾಗಿ ಹೆಚ್ಚುತ್ತಿದೆ. ಅರಣ್ಯ ನಾಶದ ದುಷ್ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದೇವೆ. ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ತೊಂದರೆಗೆ ಸಿಲುಕಿಕೊಳ್ಳಲಿದ್ದೇವೆ ಎಂದು ಎಚ್ಚರಿಸಿದರು. ತಾಲೂಕಿನಲ್ಲಿ ಜನವೇದಿಕೆ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಕ್ಕುಗಳನ್ನಷ್ಟೇ ಕೇಳುವ ಸ್ವಭಾವ ಹೆಚ್ಚುತ್ತಿರುವ ಈ ದಿನಗಳಲ್ಲಿ ಸಮುದಾಯದಲ್ಲಿ ಕರ್ತವ್ಯದ ಬಗ್ಗೆಯೂ ಸಹ ಅರಿವು ಮೂಡಿಸಬೇಕಿದೆ. ಕರ್ತವ್ಯ ಮರೆತು ಸಾಗಿದರೆ ಹಕ್ಕುಗಳು ಸಿಗುವುದು ಕಷ್ಟಸಾಧ್ಯವಾಗಲಿದೆ. ಸರ್ಕಾರ ದೇವರಲ್ಲ, ಬದಲಿಗೆ ಜನರ ಪರವಾಗಿ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದೆ. ಎಲ್ಲವನ್ನೂ ಸರ್ಕಾರವೇ ಮಾಡಲಿ ಎನ್ನುವ ಮನೋಭಾವನೆ ಬದಲಾಗಬೇಕಿದೆ ಎಂದರು.ರೋಶನಿ ಸಮಾಜ ಸೇವಾ ಸಂಸ್ಥೆಯ ನಿರ್ದೇಶನಿ ಸಿಸ್ಟರ್ ಅನಿತಾ ಡಿಸೋಜಾ ಮಾತನಾಡಿ, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಸಂವಿಧಾನದ ಮೂಲ ಆಶಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಜನವೇದಿಕೆ ಪ್ರಾಮಾಣಿಕವಾಗಿ ಮಾಡುತ್ತಿದೆ. ಸಂವಿಧಾನದ ಮೂಲ ಆಶಯಗಳನ್ನು ಮರೆತಿದ್ದೇವೆ. ಪ್ರಕೃತಿಯ ವಿಷಯದಲ್ಲಿಯೂ ತಪ್ಪಾಗಿ ನಡೆದುಕೊಳ್ಳುತ್ತಿದ್ದೇವೆ. ವೈಯಕ್ತಿಕ ಜಂಜಾಟಗಳಲ್ಲಿ ಮುಳುಗಿ ಸಾಮಾಜಿಕ ಜವಾಬ್ದಾರಿ ಮರೆತಿರುವ ಸಮುದಾಯದಲ್ಲಿ ಎಚ್ಚರಿಕೆ ಮೂಡಿಸುವ ಕೆಲಸವನ್ನು ಜನವೇದಿಕೆ ಮಾಡುತ್ತಿದೆ ಎಂದರು.ತಹಸೀಲ್ದಾರ್ ರೇಣುಕಾ ಎಸ್., ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ಫಾದರ್ ಅನೀಲ್ ಡಿಸೋಜಾ, ಮುಖಂಡರಾದ ಸತೀಶ ಅಂಕೋಲಾ, ಬಸವರಾಜ ಕೋತಂಬರಿ, ಶಿವಾನಂದ ಗೌರಕ್ಕನವರ, ಕಲೀಂ ಮಾಸನಕಟ್ಟಿ, ಪಾಲಾಕ್ಷಯ್ಯ ಹಿರೇಮಠ, ರಾಮಚಂದ್ರ ಶಿಡ್ಲಾಪೂರ, ಗೀತಾಂಜಲಿ ತಳವಾರ, ಮಂಜಪ್ಪ ಕುದರಿ, ಫಕ್ಕೀರಪ್ಪ ಬಾಳೂರ, ನೀಲಮ್ಮ ಮಟ್ಟಿಮನಿ, ಮಂಜಪ್ಪ ಸಾಬರದ, ಯಲ್ಲಮ್ಮ ಬೆಣಗೇರಿ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರಾಜ್ಯದ ಮೇಲೆ ೫ ಲಕ್ಷ ಕೋಟಿ ಸಾಲದ ಹೊರೆ ಇದೆ. ವಾರ್ಷಿಕ ೪೫ ಸಾವಿರ ಕೋಟಿ ಬಡ್ಡಿ ಪಾವತಿಸಬೇಕಿದೆ. ಸಾಲದ ಮೇಲಿನ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ವಾಸ್ತವ ಸಂಗತಿ ತಿಳಿಯುವಲ್ಲಿ ವಿಫಲರಾಗಿದ್ದೇವೆ. ಕರ್ತವ್ಯ ಮರೆತು ಸಾಗುತ್ತಿರುವುದರಿಂದ ಅಪಾಯ ಹೆಚ್ಚುತ್ತಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.

Share this article