ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ತಾಲೂಕು ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಗಣಿ ಮತ್ತು ಭೂ ವಿಜ್ಞಾನ, ಕಂದಾಯ, ಪೊಲೀಸ್ , ಅರಣ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಪಿಡಿಒಗಳ ಗಣಿ ಸಂರಕ್ಷಣ ಸಮಿತಿ ಸಭೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವ ಸಂಬಂಧ ಸಭೆ ನಡೆಸಿದರು.
ತಾಲೂಕಿನ ಶಿಂಷಾ ನದಿ ವ್ಯಾಪ್ತಿಯಲ್ಲಿ 144ನೇ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಸಹ ಮರಳು ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಗಣಿ, ಕಂದಾಯ, ಪೊಲೀಸ್ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಮರಳು ದಂಧೆ ಕೋರರೊಂದಿಗೆ ಶಾಮೀಲಾಗಿ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ಎಲ್ಲ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸುವುದರೊಂದಿಗೆ ತಂಡ ರಚನೆ ಮಾಡಿಕೊಂಡು ಮರಳು ಗಣಿಗಾರಿಕೆ, ದಾಸ್ತಾನು ಕೇಂದ್ರಗಳ ಮೇಲೆ ದಾಳಿ ನಡೆಸಬೇಕು ಹಾಗೂ ಮರಳು ಸಾಗಾಣಿಕೆ ಮಾಡುವ ಲಾರಿಗಳನ್ನು ತಡೆದು ಮಾಲೀಕರು ಮತ್ತು ಚಾಲಕರ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸೂಚನೆ ನೀಡಿದರು.
ಮನೆ ನಿರ್ಮಾಣ ಮತ್ತು ಶೌಚಾಲಯ ನಿರ್ಮಾಣದ ಹೆಸರಿನಲ್ಲಿ ಗ್ರಾಮದ ಕೆಲವರು ಶಿಂಷಾ ನದಿಯಿಂದ ಎತ್ತಿನ ಗಾಡಿಗಳಲ್ಲಿ ಮರಳು ಸಾಗಾಣಿಕೆ ಮಾಡಿ ತಮ್ಮ ಜಮೀನುಗಳಲ್ಲಿ ದಾಸ್ತಾನು ಮಾಡಿಕೊಂಡು ನಂತರ ರಾತ್ರಿ ವೇಳೆ ಅಕ್ರಮವಾಗಿ ಲಾರಿಗಳ ಮೂಲಕ ಮರಳು ಸಾಗಾಣಿಕೆ ಮಾಡುತ್ತಿರುವುದು ಜಿಲ್ಲಾ ಆಡಳಿತದ ಗಮನಕ್ಕೆ ಬಂದಿದೆ. ಇಂತಹ ಗಾಡಿ ಮಾಲೀಕರಿಗೆ 3000 ದಿಂದ 5 ಸಾವಿರ ರು. ವರೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಹಸೀಲ್ದಾರ್ ಸೋಮಶೇಖರ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್, ಸರ್ಕಲ್ ಇನ್ಸ್ ಪೆಕ್ಟರ್ ಗಳಾದ ವೆಂಕಟೇಗೌಡ, ಶಿವಕುಮಾರ್, ಅರಣ್ಯಾಧಿಕಾರಿ ಗವಿ ಸಿದ್ದಪ್ಪ, ಸೇರಿದಂತೆ ವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.
ಮದ್ದೂರು ತಾಪಂ ಸಭಾಂಗಣದಲ್ಲಿ ಅಕ್ರಮ ಮರಳು ಗಣಿಗಾರಿಕೆ ತಡೆಗಟ್ಟುವ ಸಂಬಂಧ ಸಭೆ ನಡೆಯಿತು.