ನಿರ್ಲಕ್ಷ್ಯ ತೋರಿಸಿದರೆ ಶಿಸ್ತುಕ್ರಮ: ಜಿಲ್ಲಾಧಿಕಾರಿ ದಿವ್ಯಪ್ರಭು

KannadaprabhaNewsNetwork |  
Published : Sep 27, 2025, 12:00 AM IST
456456 | Kannada Prabha

ಸಾರಾಂಶ

ಸೆ. 22ರಿಂದ ಆರಂಭವಾಗಿರುವ ಸಮೀಕ್ಷೆಯಲ್ಲಿ ಆರಂಭಿಕ ತಾಂತ್ರಿಕ ಸಮಸ್ಯೆ ಕಂಡೂ ಬಂದರೂ ಪರಿಹರಿಸಲಾಗಿದೆ. ಹೊಸದಾಗಿ 3.5 ಆ್ಯಪ್‌ ಬಿಡುಗಡೆ ಮಾಡಿ ಸಮೀಕ್ಷೆದಾರರು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಧಾರವಾಡ:

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಅಧಿಕಾರಿ, ಸಿಬ್ಬಂದಿ ಕಡ್ಡಾಯವಾಗಿ ಕರ್ತವ್ಯ ನಿರ್ವಹಿಸಬೇಕು. ಸಮೀಕ್ಷೆದಾರರಿಗೆ ಅಗತ್ಯವಿರುವ ತರಬೇತಿ, ಸಹಕಾರ ನೀಡಲು ಜಿಲ್ಲಾಡಳಿತ ಸಿದ್ಧವಿದೆ ಎಂದಿರುವ ಜಿಲ್ಲಾಧಿಕಾರಿ ದಿವ್ಯಪ್ರಭು, ಕರ್ತವ್ಯದಲ್ಲಿ ನಿರ್ಲಕ್ಷ್ಯ, ಉದಾಸೀನತೆ ತೋರಿದರೆ ಶಿಸ್ತು ಕ್ರಮಕೈಗೊಳ್ಳಲು ಆಯಾ ಇಲಾಖೆ ಮುಖ್ಯಸ್ಥರು ಹಾಗೂ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ನಿಯೋಜಿಸಿರುವ ಮೇಲ್ವಿಚಾರಕರ, ನಿಯೋಜಿತ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ, ಸಮೀಕ್ಷೆಯ ಪ್ರಗತಿ ಪರಿಶೀಲಿಸಿ ಮಾತನಾಡಿದರು.

ಸೆ. 22ರಿಂದ ಆರಂಭವಾಗಿರುವ ಸಮೀಕ್ಷೆಯಲ್ಲಿ ಆರಂಭಿಕ ತಾಂತ್ರಿಕ ಸಮಸ್ಯೆ ಕಂಡೂ ಬಂದರೂ ಪರಿಹರಿಸಲಾಗಿದೆ. ಹೊಸದಾಗಿ 3.5 ಆ್ಯಪ್‌ ಬಿಡುಗಡೆ ಮಾಡಿ ಸಮೀಕ್ಷೆದಾರರು ಮೊಬೈಲ್‌ನಲ್ಲಿ ಅಳವಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದರಿಂದ ಒಟಿಪಿ ಸಮಸ್ಯೆ ಇಲ್ಲ. ಆದರೂ ನಿಗದಿತ ಗುರಿ ಪ್ರಕಾರ ನಿರೀಕ್ಷಿತ ಪ್ರಮಾಣದಲ್ಲಿ ಸಮೀಕ್ಷೆ ಪ್ರಗತಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಗದಿಯಂತೆ ಸಮೀಕ್ಷೆ ಪ್ರಗತಿ ಕಾಣದಿರುವುದು, ಸಮೀಕ್ಷೆಗೆ ನೌಕರರು ಹಾಜರಾಗದೆ ಇರುವುದನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಸಮೀಕ್ಷೆ ಹಾಜರಾಗಲು ನಿರ್ದೇಶನ ನೀಡಿ ಇಲ್ಲವೇ ಶನಿವಾರದೊಳಗೆ ಅವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಸಿಎಂ ತಿಳಿಸಿದ್ದಾರೆ ಎಂದ ಜಿಲ್ಲಾಧಿಕಾರಿ, ಅನಾರೋಗ್ಯ, ಅಂಗವೈಕಲ್ಯ, ಗರ್ಭಿಣಿ ಸೇರಿ ವಿನಾಯಿತಿ ನೀಡಿದವರನ್ನು ಬಿಟ್ಟು ಉಳಿದವರು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂದು ಸೂಚಿಸಿದರು.

ಸಮೀಕ್ಷೆಗೆ ನಿಯೋಜಿಸಿರು ಸಿಬ್ಬಂದಿ, ಅಧಿಕಾರಿಗಳು, ಆಯಾ ಇಲಾಖೆ ಮುಖ್ಯಸ್ಥರ ಹಾಗೂ ಜಿಲ್ಲಾಧಿಕಾರಿ ಪೂರ್ವಾನುಮತಿ ಪಡೆಯದೆ ಕೇಂದ್ರ ಸ್ಥಾನದಿಂದ ತೆರಳುವಂತಿಲ್ಲ ಮತ್ತು ರಜೆ ಹೊಗುವಂತಿಲ್ಲ. ತೀರಾ ಅನಿವಾರ್ಯತೆ ಇದ್ದಲ್ಲಿ ತಹಸೀಲ್ದಾರ್‌ ಸಂಪರ್ಕಿಸಿ ಲಿಖಿತ ಮನವಿ ನೀಡಿ, ಪರ್ಯಾಯ ಸಮೀಕ್ಷೆದಾರರನ್ನು ನಿಯೋಜಿಸಿ, ಅನುಮತಿ ಪಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಪ್ರೊಬೇಷನರಿ ಐಎಎಸ್ ಅಧಿಕಾರಿ ರೀತಿಕಾ ವರ್ಮಾ, ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಜಿಲ್ಲಾ ನಗರಾಭಿವೃದ್ಧಿ ಕೊಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಡಿಡಿಪಿಐ ಎಸ್.ಎಸ್. ಕೆಳದಿಮಠ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಬಾನುಮತಿ ಎಚ್. ಇದ್ದರು. ಅ. 7ರೊಳಗೆ ಸಮೀಕ್ಷೆ ಮುಗಿಸಿಜಿಲ್ಲೆಯಲ್ಲಿ ಅಂದಾಜು ೫,೪೬,೦೯೮ ಮನೆಗಳಿದ್ದು, ಈ ಮನೆಯ ಕುಟುಂಬಗಳ ಸಮೀಕ್ಷೆಗಾಗಿ ೪,೮೮೬ ಬ್ಲಾಕ್‌ ರಚಿಸಲಾಗಿದೆ. ಸಮೀಕ್ಷೆಗಾಗಿ ೪,೬೭೧ ಸಮೀಕ್ಷೆದಾರರನ್ನು ತರಬೇತಿ ನೀಡಿ ಸಿದ್ಧಗೊಳಿಸಲಾಗಿದೆ. ಮೇಲ್ವಿಚಾರಣೆಗಾಗಿ ೨೦೮ ಸಿಬ್ಬಂದಿ ನಿಯೋಜಿಸಿದ್ದು ತಾಲೂಕು ಮಟ್ಟದಲ್ಲಿ ತಹಸೀಲ್ದಾರ್‌ ನೇತೃತ್ವದಲ್ಲಿ ಬಿಇಒ, ತಾಪಂ ಇಒ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ವಿಸ್ತಾರಣಾಧಿಕಾರಿ ಸಮೀಕ್ಷಾ ಕಾರ್ಯ ಮೇಲ್ವಿಚಾರಣೆ ನಿರ್ವಹಿಸುತ್ತಾರೆ. ಅ. ೭ರೊಳಗಾಗಿ ಜಿಲ್ಲೆಯ ಎಲ್ಲ ಕುಟುಂಬದ ಸಮೀಕ್ಷೆ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಸೂಚಿಸಿದರು.

PREV

Recommended Stories

ಹತ್ತು ವರ್ಷವಾದ್ರೂ ನೇಕಾರರ ಮನೆಗಳಿಗಿಲ್ಲ ಮುಕ್ತಿ
ಭೀಮಾನದಿ ನೀರಿನ ಹರಿವು ಮತ್ತೆ ಏರಿಕೆ