ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಶಾಲಾ ಮಕ್ಕಳಿಗಾಗಿ ಸರ್ಕಾರ ನೀಡುವ ಮಧ್ಯಾಹ್ನದ ಬಿಸಿ ಊಟದ ಆಹಾರಧಾನ್ಯಗಳು ಕಳ್ಳಸಂತೆಯಲ್ಲಿ ಮಾರಾಟವಾದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಅಧಿಕಾರಿಗಳಿಗೆ ಸೂಚಿಸಿದರು.ಜಿಪಂ ನೂತನ ಸಭಾಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತಿ ಪ್ರಥಮ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲಾಗುತ್ತಿದೆ. ಶಿಕ್ಷಕರಿಗೆ ಮಕ್ಕಳ ಸಂಖ್ಯೆ ಹೆಚ್ಚಿಸುವ ಕುರಿತು ತಿಳಿಸಬೇಕು. ಜೊತೆಗೆ ಗುಣಮಟ್ಟದ ಆಹಾರ ಕೊಡುವ ಅವಶ್ಯವಾಗಿದ್ದು, ಮಕ್ಕಳಿಗೆ ಕೊಡುವ ಆಹಾರ ಕಳ್ಳಸಂತೆ ಮಾರಾಟವಾಗದಂತೆ ಕ್ರಮವಹಿಸಲು ಸೂಚಿಸಿದರು.
ಜಿಲ್ಲೆಯಲ್ಲಿ ಕೇವಲ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರಿಗೆ ಸನ್ಮಾನ ಮಾಡುವುದರ ಜೊತೆಗೆ ಪಿಯುಸಿ, ಡಿಗ್ರಿ ಹಾಗೂ ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಂಕ ಪಡೆದು ಜಿಲ್ಲೆಗೆ ಕೀರ್ತಿ ತಂದಂತಹ ವಿದ್ಯಾರ್ಥಿಗಳನ್ನು ಸತ್ಕರಿಸಲು ಸಚಿವರು ತಿಳಿಸಿದರು. ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ದಾಖಲಾಗುತ್ತಿರುವುದು ಸಂತೋಷ ವಿಷಯವಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ವಾರದಲ್ಲಿ ಒಂದು ಬಾರಿಯಾದರೂ ತಮ್ಮ ವ್ಯಾಪ್ತಿಯಲ್ಲಿ ಭೇಟಿ ನೀಡಬೇಕು. ತಿಂಗಳಿಗೆ ಕನಿಷ್ಟ 5 ಹಾಗೂ 20 ಬಾರಿ ಶಾಲೆಗಳಿಗೆ ಭೇಟಿ ನೀಡಲು ತಿಳಿಸಿದರು.ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಕೆಲವು ಬಿಸಿ ಊಟದ ಕೋಣೆಯ ಸುತ್ತಮುತ್ತ ಸ್ವಚ್ಛತೆ ಕೊರತೆ ಇದೆ. ಶಾಲಾ ಮೈದಾನಕ್ಕೆ ನರೇಗಾದಡಿ ಆದ್ಯತೆ ಕೊಡಲು ಸಭೆಗೆ ತಿಳಿಸಿದಾಗ ಇಗ್ಗ ಗಮನ ಹರಿಸುವಂತೆ ಸಚಿವರು ಸೂಚಿಸಿದರು. ಬೀಳಗಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲ ಮಾತನಾಡಿ, ಕಲಾದಗಿ ಆಸ್ಪತ್ರೆಯಲ್ಲಿ ಮಹಿಳಾ ವೈದ್ಯರ ಅವಶ್ಯಕತೆ ಇದೆ. ಕಲಾದಗಿ ಸುತ್ತಮುತ್ತಲಿನ 24 ಹಳ್ಳಿಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದಾಗ ಇದಕ್ಕೆ ಧ್ವನಿ ಗೂಡಿಸಿದ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಹಿಳಾ ವೈದ್ಯರ ಅವಶ್ಯಕತೆ ಇರುವುದಾಗಿ ತಿಳಿಸಿದಾಗ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವುದಾಗಿ ಸಚಿವರು ತಿಳಿಸಿದರು.
ವಿಧಾನ ಪರಿಷತ್ ಶಾಸಕಿ ಉಮಾಶ್ರೀ ಮಾತನಾಡಿ, ಸಂತಾನ ಹರಣದಲ್ಲಿ ಮಹಿಳೆಯರಿಗೆ ಹೆಚ್ಚಿನ ಶಸ್ತ್ರಚಿಕಿತ್ಸೆಗಳು ಆಗುತ್ತಿವೆ. ಆದರೆ ಪುರುಷರಿಗೆ ಮಾತ್ರ ಆಗುತ್ತಿಲ್ಲ. ಈ ಕುರಿತು ಆರೋಗ್ಯ ಇಲಾಖೆಯವರು ಗಮನ ಹರಿಸಲು ಸಚಿವರು ತಿಳಿಸಿದರು. ಬಿಳಗಿ ಆಸ್ಪತ್ರೆಗೆ ₹1.47 ಕೋಟಿ ಅನುದಾನ ಮಂಜೂರಾಗಿದೆ. ಈ ಕೆಲಸ ಸರಿಯಾಗಿ ನಡೆದಿಲ್ಲ. ಈ ಬಗ್ಗೆ ತನಿಖೆ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಸರಿಯಾದ ವರದಿ ನೀಡದವರ ಮೇಲೆ ಶಿಸ್ತುಕ್ರಮಕ್ಕಾಗಿ ಸಭೆಯಲ್ಲಿ ಸೂಚಿಸಲಾಯಿತು. ಕೆರೂರಿಗೆ ಓರ್ವ ವೈದ್ಯರ ಅವಶ್ಯಕತೆ ಇದ್ದು, ಕೂಡಲೇ ಪೂರೈಸುವ ಕೆಲಸವಾಗಲು ಶಾಸಕರು ಆಗ್ರಹಿಸಿದರು.ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ಸಿ.ಟಿ ಸ್ಕ್ಯಾನ್ ಮಾತ್ರ ಎಂ.ಆರ್.ಐ ಅವಶ್ಯಕತೆ ಇದೆ. ಬಾಗಲಕೋಟೆಯಿಂದ ವಿಜಯಪುರಕ್ಕೆ ರೋಗಿಗಳು ತೆರಳುತ್ತಿದ್ದಾರೆ. ಜಿಲ್ಲಾ ಆಸ್ಪತ್ತೆಗೆ ಎಂ.ಆರ್.ಐ ತರಲು ಕ್ರಮವಹಿಸುವ ಅಗತ್ಯವಿದೆ. ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕಳಪೆ ಬೀಜ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಎಫ್.ಐ.ಆರ್ ದಾಖಲಿಸಿ ಸೀಜ್ ಮಾಡಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಲಕ್ಷ್ಮಣ ಕಳ್ಳೇನ್ನವರ ಸಭೆಗೆ ತಿಳಿಸಿದರು. ರೈತರಿಗೆ ಸಮರ್ಪಕವಾಗಿ ಬೀಜ ಮತ್ತು ಗೊಬ್ಬರ ಪೂರೈಸಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರವೀಂದ್ರ ಹಕಾಟಿ ಮಾತನಾಡಿ, ತೋಟಗಾರಿಕೆ ರೈತರನ್ನು ಭೇಟಿ ಮಾಡಿದಾಗ ಕಲ್ಲಂಡಗಿಗೆ ಇಂಜೆಕ್ಷನ್ ಮೂಲಕ ಬಣ್ಣ ಮತ್ತು ಋಚಿ ಹೆಚ್ಚಿಸಲು ಪ್ರಯೋಗಿಸುತ್ತಿದ್ದಾರೆಂದು ದೂರು ಬಂದ ಹಿನ್ನೆಲೆಯಲ್ಲಿ ಪರಿಶೀಲಿಸಲಾಗಿ ಈ ಕಾರ್ಯ ನಡೆಯದಿರುವುದು ಕಂಡುಬಂತು ಎಂದು ಸಭೆಗೆ ತಿಳಿಸಿದರು. ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿ, ಅಮೃತ ಯೋಜನೆಯಡಿಯಲ್ಲಿ ದಿನ 24 ಗಂಟೆ ನೀರು ಪೂರೈಸುವ ಕಾರ್ಯದ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು. ಪೈಪಲೈನ್ ಮೂಲಕ ಗ್ಯಾಸ್ ವಿತರಿಸುವ ಕಾರ್ಯ ವಿದ್ಯಾಗಿರಿ ಮತ್ತು ನವನಗರದಲ್ಲಿ ಚಾಲನೆಯಲ್ಲಿದೆ. ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣ ಕಾರ್ಯ ಕುಂಟಿತಗೊಂಡಿದ್ದು, ಪಾವತಿಗೆ ಕ್ರಮವಹಿಸುವ ಅಗತ್ಯವಿದೆ ಎಂದು ತಿಳಿಸಿದರು.ಜಿಲ್ಲಾ ಅಂಕಿ ಸಂಖ್ಯೆ ಇಲಾಖೆಯಿಂದ ಹೊರತಂದ 2024-25ನೇ ಸಾಲಿನ ಜಿಲ್ಲೆಯ ಸಮಗ್ರ ಮಾಹಿತಿಯನ್ನೊಳಗೊಂಡ ಪುಸ್ತಕವನ್ನು ಸಚಿವರು ಬಿಡುಗಡೆ ಮಾಡುವುದರ ಜೊತೆಗೆ ಜುಲೈ 22ರಿಂದ ಜಿಲ್ಲೆಯಲ್ಲಿ ಜಾರಿಗೊಳಿಸಲಾಗುತ್ತಿರುವ ರಾಜ್ಯಾದ್ಯಂತ ವಿಸ್ತರಣೆಗೊಂಡ ಮನೆ ಬಾಗಿಲಿಗೆ ಉಚಿತ ಆರೋಗ್ಯ ಸೇವೆ ನೀಡುವ ಮಹತ್ವಾಕಾಂಕ್ಷಿ ಗೃಹ ಆರೋಗ್ಯ ಯೋಜನೆ ಮಾಹಿತಿಯುಳ್ಳ ಪುಸ್ತಕ ಬಿಡುಗಡೆ ಮಾಡಿದರು.
ಸಭೆಯಲ್ಲಿ ಸಂಸದ ಪಿ.ಸಿ. ಗದ್ದಿಗೌಡರ, ಬಾಗಲಕೋಟೆ ಶಾಸಕ ಹಾಗೂ ಬಿಟಿಡಿಎ ಅಧ್ಯಕ್ಷ ಎಚ್.ವೈ. ಮೇಟಿ, ಬೀಳಗಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೊಹಮ್ಮದ ಮೊಹಸಿನ್, ಜಿಲ್ಲಾಧಿಕಾರಿ ಸಂಗಪ್ಪ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.