ಸರ್ಕಾರಿ ಶಾಲೆಯಲ್ಲಿ ಶಿಸ್ತಿನಿಂದ ಕಲಿಯಲು ಸಾಧ್ಯ: ಸುರೇಶ್‌ಗೌಡ

KannadaprabhaNewsNetwork | Published : Nov 6, 2024 11:59 PM

ಸಾರಾಂಶ

ದೇಶದ ಉನ್ನತ ಸ್ಥಾನದಲ್ಲಿರುವ ಅನೇಕ ಮಹನೀಯರು ಸರ್ಕಾರಿ ಶಾಲೆಯಲ್ಲೇ ಕಲಿತವರು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಿಸ್ತು, ಸಂಸ್ಕಾರ, ಆತ್ಮವಿಶ್ವಾಸ ಕಲಿಯುವ ಅವಕಾಶವಿದೆ. ಇಂತಹ ಸರ್ಕಾರಿ ಶಾಲೆಗಳ ಶ್ರೇಷ್ಠತೆ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುದೇಶದ ಉನ್ನತ ಸ್ಥಾನದಲ್ಲಿರುವ ಅನೇಕ ಮಹನೀಯರು ಸರ್ಕಾರಿ ಶಾಲೆಯಲ್ಲೇ ಕಲಿತವರು. ಸರ್ಕಾರಿ ಶಾಲೆಯಲ್ಲಿ ಮಕ್ಕಳು ಶಿಸ್ತು, ಸಂಸ್ಕಾರ, ಆತ್ಮವಿಶ್ವಾಸ ಕಲಿಯುವ ಅವಕಾಶವಿದೆ. ಇಂತಹ ಸರ್ಕಾರಿ ಶಾಲೆಗಳ ಶ್ರೇಷ್ಠತೆ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿಕೊಡುವ ಅಗತ್ಯವಿದೆ ಎಂದು ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‌ಗೌಡ ಹೇಳಿದರು.ತಾಲೂಕಿನ ಬೆಳಗುಂಬದ ಶತಮಾನೋತ್ಸವ ಕಂಡ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮದ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ಬುಧವಾರ ಮಾತನಾಡಿದ ಶಾಸಕರು, ತುಮಕೂರು ನಗರದ ಪಕ್ಕದಲ್ಲೇ ಇರುವ ಬೆಳಗುಂಬದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ. ತಕ್ಕಂತೆ ಶೈಕ್ಷಣಿಕ ಸೌಲಭ್ಯಗಳನ್ನೂ ಒದಗಿಸಬೇಕು. ಇಲ್ಲಿನ ಜನರ ಬೇಡಿಕೆಯಂತೆ ಸರ್ಕಾರಿ ಶಾಲೆಯಲ್ಲಿ ಇಂಗ್ಲೀಷ್ ಮಾಧ್ಯಮ ಆರಂಭಿಸಲಾಗಿದೆ. ಈ ಸಾಲಿನಲ್ಲಿ ಒಂದನೇ ತರಗತಿಗೆ ಆಂಗ್ಲ ಮಾಧ್ಯಮಕ್ಕೆ ಪ್ರವೇಶ ನೀಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಮುಂದಿನ ತರಗತಿಗಳು ಮುಂದುವರೆಯಲಿವೆ ಎಂದರು.ಖಾಸಗಿ ಶಾಲೆಗಳ ಸಮವಸ್ತ್ರ, ಆಡಂಬರಗಳು ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಕೀಳರಿಮೆ ಉಂಟು ಮಾಡಬಾರದು, ಆ ಶಾಲೆಗಳಿಗೆ ಕಡಿಮೆ ಇಲ್ಲದಂತೆ ನಮ್ಮ ಮಕ್ಕಳು ಶೈಕ್ಷಣಿಕ ಚಟುವಟಿಕೆಯಲ್ಲಿ ಉತ್ತಮವಾಗಬೇಕು, ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಬೇಕು. ಸರ್ಕಾರಿ ಶಾಲೆಗಳ ಬಗ್ಗೆ ಮೂಗು ಮುರಿಯುವ ಕಾಲ ಇದಲ್ಲ, ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರು, ಪೂಕರ ಸೌಲಭ್ಯಗಳನ್ನು ಸರ್ಕಾರಗಳು ಕಾಲಕಾಲಕ್ಕೆ ಒದಗಿಸುತ್ತವೆ. ಬೆಳಗುಂಬ ಶಾಲೆ ಜಾಗ ರಸ್ತೆ ವಿಸ್ತರಣೆಗೆ ಹೋಗುವ ಕಾರಣ ಶಾಲೆಯನ್ನು ಸ್ಥಳಾಂತರಿಸಿ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಮಾಡಲು ಕ್ರಮ ತೆಗೆದುಕೊಳ್ಳುವುದಾಗಿ ಶಾಸಕರು ಭರವಸೆ ನಿಡಿದರು.ಸರ್ಕಾರಿ ಶಾಲೆಗೆ ಬಡವರ ಮಕ್ಕಳು ಬರುತ್ತಾರೆ, ಬಡತನ ಶಾಪವಲ್ಲ, ಸರ್ಕಾರಿ ಶಾಲೆಯಲ್ಲಿ ಕಲಿತವರೇ ಹೆಚ್ಚು ಯಶಸ್ವಿಯಾಗಿದ್ದಾರೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ದೇಶಾಭಿಮಾನ ಕಲಿಸಬೇಕು. ಮಕ್ಕಳಿಗೆ ಕಲಿಸುವ ಶಿಕ್ಷಕರೂ ತಾವೂ ಹೆಚ್ಚು ಕಲಿತು ಮಕ್ಕಳಿಗೆ ಬೋಧಿಸಿ ಜ್ಞಾಬ ಬೆಳೆಸಬೇಕು ಎಂದು ಹೇಳಿದರು.ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಲ್.ರವಿಕುಮಾರ್ ಶಾಸಕ ಸುರೇಶ್‌ಗೌಡರಿಗೆ ಮನವಿ ಪತ್ರ ಸಲ್ಲಿಸಿ, 117 ವರ್ಷಗಳ ಇತಿಹಾಸ ಹೊಂದಿರುವ ಬೆಳಗುಂಬ ಸರ್ಕಾರಿ ಶಾಲೆಯು ಸಹಸ್ರಾರು ಜನರಿಗೆ ವಿದ್ಯೆ ನೀಡಿ ಅವರ ಬಾಳು ಬೆಳಗಿದೆ. ಇಂತಹ ಮಹತ್ವಪೂರ್ಣ ಶಾಲೆಗೆ ಅಗತ್ಯ ಸೌಕರ್ಯ ಒದಗಿಸಬೇಕು, ಬೆಳೆಯುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಶಾಲೆಗೆ ಸೌಲಭ್ಯ ಕಲ್ಪಿಸಬೇಕು ಎಂದರು.ಶಾಲೆಯ ಆವರಣ ಕಿರಿದಾಗಿದ್ದು ಸ್ಥಳಾಂತರಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ, ಆಟದ ಮೈದಾನ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಎಲ್ಲಾ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬೆಳಗುಂಬ ವೆಂಕಟೇಶ್ ಮಾತನಾಡಿ, ಕ್ಷೇತ್ರದಲ್ಲಿ ಹಲವಾರು ಗ್ರಾಮಗಳಲ್ಲಿ ಸರ್ಕಾರಿ ಶಾಲೆಗಳನ್ನು ಹೈಟೆಕ್ ಮಾಡಿ, ಆಧುನಿಕ ಸೌಕರ್ಯ ಒದಗಿಸಿರುವ ಶಾಸಕ ಸುರೇಶ್‌ಗೌಡರು ಬೆಳಗುಂಬ ಶಾಲೆಯನ್ನೂ ಅದೇ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.ಈ ಶಾಲೆಗೆ ಇಂಗ್ಲೀಷ್ ಮಾಧ್ಯಮದ ಬೇಡಿಕೆ ಇದ್ದು ಶಾಸಕರು ಈಡೇರಿಸಿದ್ದಾರೆ. ಉನ್ನತ ಶಿಕ್ಷಣಕ್ಕೆ ಇಂಗ್ಲೀಷ್ ಭಾಷೆಯೂ ಅಗತ್ಯವಿರುವ ಕಾರಣ ಮಕ್ಕಳು ಪ್ರಾಥಮಿಕ ಶಾಲೆ ಹಂತದಲ್ಲೇ ಇಂಗ್ಲೀಷ್ ಕಲಿಯಲು ಅನುಕೂಲವಾಗುತ್ತದೆ. ಗ್ರಾಮದಲ್ಲಿ ಗುರುತಿಸಿರುವ ಜಮೀನಿನಲ್ಲಿ ಶಾಲೆ ಕಟ್ಟಡ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನಿಡಿದ್ದಾರೆ, ಗ್ರಾಮಸ್ಥರು ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗಾಯತ್ರಿ ನರಸಿಂಹರಾಜು, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಗಂಗಾಂಜನೇಯ, ಮುಖಂಡರಾದ ವಿಜಯಕುಮಾರ್, ಕೃಷ್ಣಮೂರ್ತಿ, ರಾಮಚಂದ್ರ, ಮಲ್ಲಿಕಾರ್ಜುನ್, ಬಿ.ಎನ್.ಮಂಜುನಾಥ್, ಟಿ.ಡಿ.ರಾಜು, ಬೆಳಗುಂಬತೋಟ ರಾಜು, ಪಿಡಿಓ ಪ್ರಕಾಶ್, ಶಾಲೆಯ ಮುಖ್ಯ ಶಿಕ್ಷಕ ವೆಂಕಟಪ್ಪ ಸೇರಿದಂತೆ ಗ್ರಾ.ಪ. ಸದಸ್ಯರು, ಎಸ್‌ಡಿಎಂಸಿ ಸದಸ್ಯರು, ಶಾಲೆ ಶಿಕ್ಷಕರು, ಗ್ರಾಮದ ಮುಖಂಡರು ಹಾಜರಿದ್ದರು.

Share this article