ಗದಗ: ಕ್ರೀಡೆಗಳಿಂದ ಶಿಸ್ತು, ಸಹಕಾರ ಮನೋಭಾವನೆ ಬೆಳೆಯಲಿದ್ದು, ಎಲ್ಲ ಸಂಪತ್ತುಗಳಿಗಿಂತ ಆರೋಗ್ಯ ಸಂಪತ್ತು ಮುಖ್ಯ. ಕ್ರೀಡೆಗಳು ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಂವರ್ಧನೆಗೆ ವರದಾನವಾಗಿವೆ ಎಂದು ವಿಧಾನ ಪರಿಷತ್ ಹಿರಿಯ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಸಂಗೀತ, ಸಾಹಿತ್ಯ, ಕ್ರೀಡೆ, ಅಧ್ಯಾತ್ಮ ಹೀಗೆ ಅನೇಕ ಕ್ಷೇತ್ರಗಳಿಗೆ ಗದಗ ಜಿಲ್ಲೆ ಅನುಪಮ ಕೊಡುಗೆ ನೀಡಿದ್ದು, ಕ್ರೀಡೆಯಲ್ಲಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಸಾಧಕರೂ ಈ ನೆಲದವರಾಗಿದ್ದಾರೆ. ಗದುಗಿನವರಾದ ರಾಜು ಬಾಗಡೆ ಹಾಗೂ ಸುನೀಲ್ ಜೋಶಿ ಕ್ರೀಡಾ ಸಾಧನೆಗಳು ಅವಿಸ್ಮರಣೀಯವಾಗಿವೆ. ಪ್ಲೋರ್‌ಬಾಲ್ ಕ್ರೀಡೆ ಈ ಭಾಗದಲ್ಲಿ ಇನ್ನಷ್ಟು ಜನಪ್ರಿಯತೆ ಪಡೆಯಬೇಕಿದ್ದು, ಅದಕ್ಕೆ ಇಂಥ ಪಂದ್ಯಾವಳಿಗಳ ಆಯೋಜನೆ ಸಹಕಾರಿಯಾಗಲಿವೆ ಎಂದರು.
ಶಾಲಾ ಶಿಕ್ಷಣ ಇಲಾಖೆ (ಪಪೂ) ಉಪನಿರ್ದೇಶಕ ಸಿದ್ಧಲಿಂಗ ಬಂಡು ಮಸನಾಯಿಕ ಮಾತನಾಡಿ, ಪಪೂ ಶಾಲಾ ಶಿಕ್ಷಣ ಇಲಾಖೆಯಿಂದ ರಾಜ್ಯ ಮಟ್ಟದ ಕ್ರೀಡಾಕೂಟ ನಡೆಸುವಾಗ ಒಂದೊಂದು ಜಿಲ್ಲೆಗೆ ಆಯಾ ಕ್ರೀಡೆಗಳು ನಿಗದಿಯಾಗಿರುತ್ತವೆ. ಪ್ಲೋರ್‌ಬಾಲ್ ಕ್ರೀಡೆ 60ರ ದಶಕದಲ್ಲಿ ಹುಟ್ಟಿಕೊಂಡರೂ ಭಾರತದಲ್ಲಿ ಹೆಚ್ಚು ಚಿರಪರಿಚಿತವಾಗಿಲ್ಲ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿದರು. ಕ್ರೀಡಾಕೂಟದ ಜಿಲ್ಲಾ ಸಂಚಾಲಕ ಎಂ.ಕೆ. ಲಮಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ಪರ್ಧಾಳುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. 13ಕ್ಕೂ ಹೆಚ್ಚು ಜಿಲ್ಲೆಗಳ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ತೋಂಟದ ಸಿದ್ಧೇಶ್ವರ ಪಪೂ ಕಾಲೇಜು ವಿದ್ಯಾರ್ಥಿನಿ ನಯನಾ ಅಳವಂಡಿ ಪ್ರಾರ್ಥಿಸಿದರು. ಅಶೋಕ ಅಂಗಡಿ ಸ್ವಾಗತಿಸಿದರು. ದತ್ತಪ್ರಸನ್ನ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಎಸ್.ಎಸ್. ಸೋಮಣ್ಣವರ ವಂದಿಸಿದರು.