ವಿಚಾರ ಪ್ರಚೋದಕನನ್ನಾಗಿ ಮಾಡುವುದೇ ಪ್ರವಚನ

KannadaprabhaNewsNetwork |  
Published : Feb 02, 2025, 11:45 PM IST
ಕಾರ್ಯಕ್ರಮದಲ್ಲಿ ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ದೇವರು ಆಶೀರ್ವಚನ ನೀಡಿದರು. | Kannada Prabha

ಸಾರಾಂಶ

ಜಗತ್ತಿನಲ್ಲಿ ಸಕಲ ವಸ್ತುಗಳು ಭಗವಂತನಿಂದಲೆ ಸೃಷ್ಟಿಯಾಗಿವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು.

ನರೇಗಲ್ಲ: ಜಗತ್ತಿನಲ್ಲಿ ಎಲ್ಲ ಪ್ರಾಣಿಗಳಿಗಿಂತ ಹೆಚ್ಚು ವಿಚಾರ ಶಕ್ತಿ ಹೊಂದಿರುವ ಪ್ರಾಣಿ ಮನುಷ್ಯ. ಪುರಾಣ, ಪ್ರವಚನಗಳು ಮನುಷ್ಯನಲ್ಲಿ ವಿಚಾರಗಳ ಪ್ರಚೋದನೆ ಮಾಡುತ್ತವೆ ಎಂದು ರೋಣ ಗುಲಗಂಜಿ ಮಠದ ಶ್ರೀ ಗುರುಪಾದ ಸ್ವಾಮೀಜಿ ಹೇಳಿದರು.

ಸಮೀಪದ ಕೋಡಿಕೊಪ್ಪದ ಶ್ರೀವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವದ ಅಂಗವಾಗಿ ನಡೆದ ಮೂರನೇ ದಿನದ ಪ್ರವಚನದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

ಶ್ರೀವೀರಪ್ಪಜ್ಜನವರ ಪುಣ್ಯಾರಾಧನೆಯ ಶತಮಾನೋತ್ಸವ ಜ್ಞಾನ ದಾಸೋಹ ಮತ್ತು ಅನ್ನದಾಸೋಹದ ಮೂಲಕ ಜರುಗುತ್ತಿರುವುದು ಬಹಳಷ್ಟು ಸಂತಸದ ವಿಷಯ. ಮನುಷ್ಯ ಯಾವಾಗ ಮೊದಲನೆ ಸಾವನ್ನು ಕಂಡನೋ ಅಂದಿನಿಂದ ಅವನಲ್ಲಿ ಜಿಜ್ಞಾಸೆ ಪ್ರಾರಂಭವಾಯಿತು. ಎಂದಾದರೂ ಒಂದು ದಿನ ನಾನೂ ಸಾಯುತ್ತೇನೆ ಎಂಬ ಅರಿವು ಅವನಲ್ಲಿ ಮೂಡಿದಾಗ ಅಷ್ಟರೊಳಗೆ ಏನಾದರೂ ಸಾಧಿಸಬೇಕೆಂಬ ತಿಳಿವಳಿಕೆ ಅವನಲ್ಲಿ ಹುಟ್ಟಿತು. ಈ ಸಾಧನೆಗೆ ಆಧ್ಯಾತ್ಮಿಕವೆ ದಾರಿ ಎಂಬುದನ್ನು ಅರಿತ ಆತ ಪುರಾಣ, ಪ್ರವಚನಗಳ ಮೂಲಕ ಅದನ್ನು ಪಡೆಯಲು ಮುಂದಾದ. ಯಾವುದೇ ಮಹಾತ್ಮರ ಪುಣ್ಯ ಪ್ರವಚನ ಕೇಳಿದರೂ ಅದರಲ್ಲಿ ಬದುಕಿಗೆ ಮಾರ್ಗ ತೋರುವ ಅಂಶಗಳು ಇದ್ದೇ ಇರುತ್ತವೆ. ಅದರಲ್ಲಿಯೂ ಹಠಯೋಗಿ ವೀರಪ್ಪಜ್ಜನ ಪುರಾಣ ನಮ್ಮಲ್ಲಿ ಜೀವನ ಚೈತನ್ಯ ತುಂಬಲು ಸಹಾಯಕವಾಗಿದೆ ಎಂದರು.

ಜಗತ್ತಿನಲ್ಲಿ ಸಕಲ ವಸ್ತುಗಳು ಭಗವಂತನಿಂದಲೆ ಸೃಷ್ಟಿಯಾಗಿವೆ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು. ಅದಕ್ಕಾಗಿ ನಾವು ಭಗವಂತನಿಗೆ ಎಂದಿಗೂ ಕೃತಜ್ಞರಾಗಿರಬೇಕು. ನಾವು ಸ್ವಾರ್ಥ ತೊರೆದು ನಿಸ್ವಾರ್ಥತೆಯಿಂದ ಬದುಕಿದಾಗ ಮಾತ್ರ ನಮ್ಮ ಬಾಳು ಬಂಗಾರವಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಒಂದೊಂದು ಆಚರಣೆಗೂ ಒಂದೊಂದು ಅರ್ಥವಿದೆ ಮತ್ತು ಬಹುತೇಕ ಅದು ವೈಜ್ಞಾನಿಕ ತಳಹದಿಯ ಮೇಲೆಯೆ ಅವಲಂಬಿತವಾಗಿದೆ. ನೀವು ಮಾಡುವ ದಾನ, ಧರ್ಮಗಳು ಎಂದಿಗೂ ಸ್ಥಿರವಾಗಿರುತ್ತವೆ ಮತ್ತು ನಿಮ್ಮ ಕೀರ್ತಿ ಅಚಂದ್ರಾರ್ಕವಾಗಿ ಇರಿಸುತ್ತವೆ ಎಂದು ತಿಳಿಸಿದರು.

ಡಾ.ವಿಶ್ವನಾಥ ಸ್ವಾಮಿಗಳು ಮಾತನಾಡಿ, ಬಾಲ್ಯದ ದಿನಗಳಲ್ಲಿ ಶ್ರೀವೀರಪ್ಪಜ್ಜವನರ ಕಾರ್ಯ ಚಟುವಟಿಕೆಗಳು ಹೇಗಿದ್ದವು, ಅವನು ಯಾರಿಂದ ಪ್ರಭಾವಿತನಾಗಿ ವೈರಾಗ್ಯ ತಾಳಿದ, ನಂತರ ಅವನ ನಡೆ ನುಡಿಗಳಲ್ಲಿ ಹೇಗೆ ಬದಲಾವಣೆಗಳಾದವು ಎಂಬುದನ್ನು ವಿವರಿಸಿದರು.

ಈ ವೇಳೆ ಟ್ರಸ್ಟ್ ಕಮಿಟಿ ಅಧ್ಯಕ್ಷ ಡಾ.ಎಂ.ಸಿ. ಚಪ್ಪನ್ನಮಠ, ನಿವೃತ್ತ ಶಿಕ್ಷಕ ಎಂ.ಎ. ಹಿರೆವಡೆಯರ ಇದ್ದರು. ಗವಾಯಿ ಹನುಮಂತಕುಮಾರ ಮೇಟಿ ಸಂಗೀತ ಸೇವೆ ನೀಡಿದರು. ಶಾಂತಕುಮಾರ ಹಿರೇಮಠ ತಬಲಾ ಸಾಥ್ ನೀಡಿದರು. ಶಿಕ್ಷಕ ಎಂ.ಕೆ. ಬೇವಿನಕಟ್ಟಿ ನಿರೂಪಿಸಿದರು.

PREV

Recommended Stories

ಇಂದಿನಿಂದ ಪ್ರೊ ಕಬಡ್ಡಿ ಲೀಗ್‌ ಶುರು : 12ನೇ ಆವೃತ್ತಿ । 12 ತಂಡ, ಒಟ್ಟು 117 ಪಂದ್ಯ
‘ಧರ್ಮಸ್ಥಳ ಬಗ್ಗೆ ಅಪಪ್ರಚಾರ ಮಾಡುವವರು ಕಷ್ಟಕ್ಕೆ ಸಿಲುಕ್ತಾರೆ’