ನರಗುಂದ: ಮುಂಗಾರು ಹಂಗಾಮಿನಲ್ಲಿ ಬೆಳೆಹಾನಿ ಮಾಡಿಕೊಂಡ ರೈತರಿಗೆ ಸರ್ಕಾರ ಪರಿಹಾರ ವಿತರಣೆಯಲ್ಲಿ ತಾರತಮ್ಯ ಮಾಡಿದ್ದರಿಂದ ಅನ್ನದಾತರಿಗೆ ದಿಕ್ಕು ತೋಚದಂತಾಗಿದೆ.ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ತಾಲೂಕಿನ ರೈತರು ವಾಣಿಜ್ಯ ಬೆಳೆಗಳಾದ ಹೆಸರು, ಗೋವಿನಜೋಳ, ಸೂರ್ಯಕಾಂತಿ, ಈರುಳ್ಳಿ, ಬಿ.ಟಿ. ಹತ್ತಿ ಬಿತ್ತನೆ ಮಾಡಿ ಪ್ರತಿ 1 ಎಕರಗೆ ₹20ರಿಂದ ₹30 ಸಾವಿರ ಖರ್ಚು ಮಾಡಿ ಉತ್ತಮ ಬೆಳೆ ಬೆಳೆಸಿ ಬಂಪರ್ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದರು.
ಆದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿಪರೀತ ಮಳೆ ಸುರಿದು ಅತಿವೃಷ್ಟಿಯಿಂದ ಕಟಾವಿಗೆ ಬಂದ ಬೆಳೆಗಳು ತೇವಾಂಶ ಹೆಚ್ಚಾಗಿ ಜಮೀನಿನಲ್ಲಿ ಹಾನಿಯಾದವು. ಅಲ್ಪಸ್ವಲ್ಪ ಉಳಿದ ಬೆಳೆಯನ್ನು ರೈತರು ಕಟಾವು ಮಾರುಕಟ್ಟೆಗೆ ಮಾರಾಟ ಮಾಡಲು ಹೋದರೆ ಅಲ್ಲಿಯೂ ಯೋಗ್ಯ ಬೆಲೆ ಸಿಗಲಿಲ್ಲ.ನಿಯಮದ ಪ್ರಕಾರ ಬಾರದ ಪರಿಹಾರ: ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಖುಷ್ಕಿ ಜಮೀನಿಗೆ ಪ್ರತಿ ಹೆಕ್ಟೇರ್‌ಗೆ ₹8500, ತೋಟಗಾರಿಕೆ ಮತ್ತು ನೀರಾವರಿಗೆ ₹17000 ಸಾವಿರ ಪರಿಹಾರ ನೀಡುವ ನಿಯಮವಿದೆ. ಅದರ ಜತೆ ರಾಜ್ಯ ಸರ್ಕಾರ ಎಸ್‌ಡಿಆರ್‌ಎಫ್ ಮೂಲಕ ಪ್ರತಿ ಹೆಕ್ಟೇರ್‌ಗೆ ಖುಷ್ಕಿ ಜಮೀನಿಗೆ ₹5000, ನೀರಾವರಿಗೆ ₹8000 ಸಾವಿರಗಳನ್ನು ಹೆಚ್ಚುವರಿಯಾಗಿ ಎನ್‌ಡಿಆರ್‌ಎಫ್ ಜತೆ ಸೇರಿಸಿ ಸರ್ಕಾರ ಪರಿಹಾರ ನೀಡಬೇಕು. ಆದರೆ ಸರ್ಕಾರ ಖುಷ್ಕಿ ಜಮೀನುಗಳಿಗೆ ₹6000 ಸಾವಿರ, ನೀರಾವರಿಗೆ ₹15300 ಪರಿಹಾರ ನೀಡಿ ರೈತರಿಗೆ ಅನ್ಯಾಯ ಮಾಡಿದೆ ಎಂಬುದು ರೈತರ ಆರೋಪವಾಗಿದೆ.ಪರಿಹಾರ ವಿವರ: ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಗೆ ಒಟ್ಟು 21488.72 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆ ಹಾನಿಯಾಗಿವೆ. 17363 ರೈತರಿಗೆ ₹34.27 ಕೋಟಿಯನ್ನು ತಾಲೂಕಿನ ರೈತರಿಗೆ ಪರಿಹಾರ ನೀಡಲಾಗಿದೆ ಎಂದು ತಹಸೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ತಿಳಿಸಿದರು.
ಸರ್ಕಾರ ತಾಲೂಕಿನ ರೈತರಿಗೆ ಖುಷ್ಕಿ ಜಮೀನುಗಳಿಗೆ ನೀಡಿದ ರೀತಿಯಲ್ಲಿ ನೀರಾವರಿ ಜಮೀನಗಳಿಗೆ ಬೆಳೆಹಾನಿ ವಿತರಣೆ ಮಾಡಿದ್ದಾರೆ. ಆದ್ದರಿಂದ ಸರ್ಕಾರ ನೀರಾವರಿ ಜಮೀನು ಹೊಂದಿರುವ ರೈತರಿಗೆ ಸರ್ಕಾರ ನಿಯಮದ ಪ್ರಕಾರ ಬೆಳೆಹಾನಿ ವಿತರಣೆ ಮಾಡಬೇಕೆಂದು ಕೃಷಿಕ ಸಮಾಜದ ಅಧ್ಯಕ್ಷ ಬಸವರಡ್ಡಿ ರಾಯರಡ್ಡಿ ಆಗ್ರಹಿಸಿದರು.ಬೆಳೆಹಾನಿ ಸಮೀಕ್ಷೆಯಲ್ಲಿ ಹಾನಿಯಾದ ಪ್ರಕಾರ ಸದ್ಯ ರೈತರಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಕೆಲವು ರೈತರಿಗೆ ಪರಿಹಾರ ಬಾರದ ರೈತರು ತಮ್ಮ ಜಮೀನುಗಳ ಮೂಲಕ ದಾಖಲೆ ತೆಗೆದುಕೊಂಡು ಗ್ರಾಮಲೆಕ್ಕಾಧಿಕಾರಿಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಿದರೆ ಅಂಥಾ ರೈತರಿಗೆ ಪರಿಹಾರ ನೀಡಲಾಗುವುದೆಂದು ತಹಸೀಲ್ದಾರ್ ಶ್ರೀಶೈಲ ತಳವಾರ ತಿಳಿಸಿದರು.
ಹುನ್ನಾರ: ಸರ್ಕಾರ ಎನ್‌ಡಿಆರ್‌ಎಫ್ ಜತೆ ಎಸ್‌ಡಿಆರ್‌ಎಫ್ ಸೇರಿಸಿ ಖುಷ್ಕಿ ಪ್ರತಿ 1 ಹೆಕ್ಟೇರ್‌ಗೆ ₹13500, ತೋಟಗಾರಿಕೆ ಮತ್ತು ನೀರಾವರಿಗೆ ಕೂಡ 1 ಹೆಕ್ಟೇರ್‌ಗೆ ₹25000 ಸಾವಿರ ಪರಿಹಾರ ನೀಡಬೇಕು. ಆದರೆ ಸರ್ಕಾರ ಸದ್ಯ ಕಷ್ಟದಲ್ಲಿರುವ ರೈತರ ಅಲ್ಪಸ್ವಲ್ಪ ಪರಿಹಾರ ನೀಡಿ ಕೈತೊಳೆದುಕೊಳ್ಳುವ ಹುನ್ನಾರ ನಡೆಸಿದೆ ಎಂದು ಜಿಲ್ಲಾ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಎಸ್.ಎಸ್. ಪಾಟೀಲ ತಿಳಿಸಿದರು.