ಬ್ಯಾಡಗಿ: ಬರಗಾಲ ಘೋಷಣೆ ಬಳಿಕ ಪರಿಹಾರ ಬಿಡುಗಡೆ ಮಾಡುವುದು ಸೇರಿದಂತೆ ಕಳೆದ ಸಾಲಿನ ಬೆಳೆವಿಮೆ ವಿತರಣೆ ತಾರತಮ್ಯ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ವಿಮೆ ಕಂಪನಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇದಕ್ಕೂ ಮುನ್ನ ಪಟ್ಟಣದಲ್ಲಿ ಮೆರವಣಿಗೆ ಮೂಲಕ ತಾಲೂಕು ದಂಡಾಧಿಕಾರಿಗಳ ಕಚೇರಿಗೆ ತೆರಳಿದ ನೂರಾರು ರೈತರು ಸರ್ಕಾರದ ದ್ವಂದ್ವ ನೀತಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಗಂಗಣ್ಣ ಎಲಿ, ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ ರಾಜ್ಯ ಸರ್ಕಾರ ಕೇವಲ 2 ಸಾವಿರ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಆದರೆ ರೈತರಿಗೆ ನ್ಯಾಯಯುತವಾಗಿ ಸಲ್ಲಬೇಕಾಗಿದ್ದ (ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ) ಪ್ರತಿ ಹೆಕ್ಟೇರ್‌ಗೆ ರು.35 ಸಾವಿರ ನೀಡಬೇಕಾಗಿದ್ದು ಇಂದಿಗೂ ಹಣ ಬಿಡುಗಡೆಗೊಳಿಸಿಲ್ಲ, ಕೂಡಲೇ ಬರ ಪರಿಹಾರ ಬಿಡುಗಡೆಗೊಳಿಸುವಂತೆ ಆಗ್ರಹಿಸಿದರು.16 ಪಂಚಾಯಿತಿ ಬೆಳೆವಿಮೆ ವಂಚಿತ:ಸರ್ಕಾರವೇ ಮಾಡಿದ ಬೆಳೆ ಅಣೆವಾರಿ (ಕ್ರಾಪ್ ಎಕ್ಸಪರಿಮೆಂಟ್) ರಿಲಾಯನ್ಸ್ ವಿಮೆ ಕಂಪನಿಯು ಒಪ್ಪುತ್ತಿಲ್ಲ, ಅಷ್ಟಕ್ಕೂ ತಾಲೂಕಿನಲ್ಲಿ 6 ಪಂಚಾಯತಿಗಳನ್ನಷ್ಟೇ ವಿಮೆ ಪರಿಹಾರ ಆಯ್ಕೆ ಮಾಡಿದ್ದು, ಬ್ಯಾಡಗಿ ಪಟ್ಟಣ ಸೇರಿದಂತೆ ಹಿರೇಹಳ್ಳಿ, ಹಿರೇಅಣಜಿ, ಕುಮ್ಮೂರ, ಕಾಗಿನೆಲ್ಲಿ, ಹೆಡಿಗ್ಗೊಂಡ, ಮಲ್ಲೂರ, ಮಾಸಣಗಿ, ಕುಮ್ಮೂರ, ತಡಸ, ಶಿಡೇನೂರ, ಬಿಸಲಹಳ್ಳಿ, ಮತ್ತೂರ, ಕದರಮಂಡಲಗಿ, ಕಲ್ಲೇದೇವರ, ಘಾಳಪೂಜಿ ಹಾಗೂ ಸೂಡಂಬಿ ಗ್ರಾಮ ಪಂಚಾಯತಿಗಳನ್ನು ಬೆಳೆವಿಮೆ ಪರಿಹಾರ ವ್ಯಾಪ್ತಿಯಿಂದ ಕೈಬಿಡಲಾಗಿದೆ ಹಾಗಿದ್ದರೇ ಸದರಿ ಗ್ರಾಮ ಪಂಚಾಯತಿಗಳು ಯಾವ ರಾಜ್ಯದಲ್ಲಿವೆ. ಅಲ್ಲಿರುವ ರೈತರಿಂದ ಆಗಿರುವ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿದರು.
ಜನ ಜಾನುವಾರುಗಳೊಂದಿಗೆ ಮುತ್ತಿಗೆ: ರೈತ ಸಂಘದ ಕಾರ್ಯಾಧ್ಯಕ್ಷ ಕಿರಣಕುಮಾರ ಗಡಿಗೋಳ ಮಾತನಾಡಿ, ತಾಲೂಕಿನಲ್ಲಿಯೇ ಇಂತಹ ಇಬ್ಬಗೆ ನೀತಿಯನ್ನು ಅನುಸರಿಸುತ್ತಿರುವ ವಿಮೆ ಕಂಪನಿಯನ್ನು ಕೂಡಲೇ ಬಹಿಷ್ಕರಿಸಬೇಕು, ಸರ್ಕಾರ ಮತ್ತು ರೈತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿರುವ ರಿಲಯನ್ಸ್ ವಿಮೆ ಕಂಪನಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ನಮ್ಮೆದುರಿಗೆ ಚರ್ಚಿಸಬೇಕು ಇಲ್ಲದೇ ಹೋದಲ್ಲಿ ಜನ ಜಾನುವಾರು ಸಮೇತ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುವುದಲ್ಲದೇ ಪರಿಹಾರ ತೆಗೆದುಕೊಂಡ ಬಳಿಕವೇ ಪ್ರತಿಭಟನೆ ಕೈಬಿಡುವುದಾಗಿ ಎಚ್ಚರಿಸಿದರು.ವಿಮೆ ಅಧಿಕಾರಿಗಳೊಂದಿಗೆ ಸಭೆ: ತಹಸೀಲ್ದಾರ್ ಎಫ್.ಎ. ಸೋಮನಕಟ್ಟಿ ಮಾತನಾಡಿ, ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ಮೂಲಕ ಬೆಳೆವಿಮೆ ಪರಿಹಾರ ನೀಡುವ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಂಕರ ಮರಗಾಲ, ಪ್ರಕಾಶ ಕುಮ್ಮೂರ, ಕುಮಾರಗೌಡ ಪಾಟೀಲ, ಹನುಮಂತಪ್ಪ ಮಾಸಣಗಿ, ಮಲ್ಲಿಕಾರ್ಜುನ ದುರ್ಗದ, ಶಿವನಗೌಡ ತೆವರಿ, ಬಸಪ್ಪ ಬನ್ನಿಹಟ್ಟಿ, ಶಿವಕುಮಾರ ಬಣಕಾರ, ಮಾಲತೇಶ ಚೂರಿ, ಎಸ್.ಎಸ್. ಕುಲಕರ್ಣಿ, ಹನುಮಂತಪ್ಪ ಚೌಟಗಿ, ಫಕ್ಕಿರೇಶ ಹೊನ್ನಪ್ಪನವರ, ಆನಂದ ಚೂರಿ, ಅಜ್ಜಯ್ಯ ಪೂಜಾರ, ಕಲ್ಲಪ್ಪ ಪವಾಡಶೆಟ್ಟರ, ಕಾಳಪ್ಪ ಬಡಿಗೇರ, ಭೀಮಣ್ಣ ಕಾಟೇನಹಳ್ಳಿ, ರಾಮಣ್ಣ ಆಡಿನವರ, ನಿಂಗಪ್ಪ ಪೂಜಾರ, ಬಸವರಾಜ ಗಾಣೀಗೇರ, ವಿನಾಯಕ ಪಾಟೀಲ, ಶಿವಕುಮಾರ ಬಣಕಾರ ಮಲ್ಲಿಕಾರ್ಜುನ ಬಳ್ಳಾರಿ, ರುದ್ರಗೌಡ ಕಾಡನಗೌಡ್ರ, ಕೆ.ವಿ.ದೊಡ್ಡಗೌಡ್ರ, ಚಿಕ್ಕಪ್ಪ ಛತ್ರದ, ಸೇರಿದಂತೆ ಇನ್ನಿತರರಿದ್ದರು.