ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತೆರಿಗೆ ಪಾಲು, ಅನುದಾನ ಹಂಚಿಕೆ ಮತ್ತು ಬರ ಪರಿಹಾರ ನೀಡುವುದರಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಂಗ್ರೆಸ್ ಸಚಿವರು, ಶಾಸಕರು, ಸಂಸದರು ಹಾಗೂ ನಾಯಕರು ಬುಧವಾರ ನಡೆಸಿದ ಪ್ರತಿಭಟನೆಯನ್ನು ಬೆಂಬಲಿಸಿ ಚಿಕ್ಕಮಗಳೂರಿನಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು.ಆಜಾದ್ ಪಾರ್ಕ್ ವೃತ್ತದಲ್ಲಿ ನನ್ನ ತೆರಿಗೆ ನನ್ನ ಹಕ್ಕು ಘೋಷಣೆಯಡಿ ಕಾರ್ಯಕರ್ತರು ಧರಣಿ ನಡೆಸಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ತಾಯಿ ಸ್ಥಾನದಲ್ಲಿ ನಿಂತು ಎಲ್ಲಾ ರಾಜ್ಯಗಳಿಗೆ ನ್ಯಾಯ ಕಲ್ಪಿಸಬೇಕು. ಆದರೆ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಈ ಮೂಲಕ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ರಾಜ್ಯದಿಂದ 27 ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಅತಿವೃಷ್ಟಿ, ಬರ ಪರಿಹಾರ, ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ನೀಡುವಂತೆ ಕೇಂದ್ರವನ್ನು ಪ್ರಶ್ನಿಸದೆ ಮೌನವಹಿಸಿದ್ದಾರೆ. ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆ ಗಳನ್ನೇ ಬಿಟ್ಟಿ ಭಾಗ್ಯ ಎಂದು ಟೀಕಿಸುವ ಮೂಲಕ ಜನರ ಕಷ್ಟಗಳಿಗೆ ಧ್ವನಿಯಾಗದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಹೇಳಿದರು.ಸಚಿವೆ ಶೋಭಾ ಕರಂದ್ಲಾಜೆ ಎರಡು ಬಾರಿ ಜಿಲ್ಲೆಯ ಸಂಸದೆಯಾಗಿ, ಕೇಂದ್ರದ ರೈತ ಕಲ್ಯಾಣ ಸಚಿವೆಯೂ ಆಗಿದ್ದಾರೆ. ಈವರೆಗೂ ರೈತರ ಸಮಸ್ಯೆ, ಕೇಂದ್ರದ ಅನುದಾನದ ಕುರಿತು ಒಮ್ಮೆಯೂ ಚರ್ಚಿಸಿಲ್ಲ. ಬದಲಾಗಿ ಭಾವನಾತ್ಮಕ ವಿಚಾರ ಮುಂದಿಟ್ಟುಕೊಂಡು ಕೋಮುದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಮದು ಆರೋಪಿಸಿದರು. ಅವರ ಅಧಿಕಾರವಧಿಯಲ್ಲಿ ಜಿಲ್ಲೆಗೆ ನೀಡಿದ ಕೊಡುಗೆ ಏನು ಎಂದು ಪ್ರಶ್ನಿಸಿದರು.ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ, ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ಅನುದಾನ, ಸವಲತ್ತುಗಳ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡದ ಬಿಜೆಪಿ ಸಂಸದರನ್ನು ಆಯ್ಕೆ ಮಾಡಿದ್ದೇವೆ ಎಂದು ಲೇವಡಿ ಮಾಡಿದರು.ದೆಹಲಿಯಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ರಾಜ್ಯದ ಜನರ ಹಿತಕ್ಕಾಗಿಯೇ ಹೊರತು ಕಾಂಗ್ರೆಸ್ ಹಿತಕ್ಕಾಗಿ ಅಲ್ಲ. ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಎನ್ನುವ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ಅನ್ಯಾಯ ಮಾಡುತ್ತಿರುವುದು ಯಾಕೆ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ರೈತರು, ಕಾರ್ಮಿಕರು, ದಲಿತರು ಸೇರಿದಂತೆ ಹಲವು ವರ್ಗದ ಜನರ ಸಮಸ್ಯೆಗಳಿಗೆ ಆಯ್ಕೆಯಾಗಿರುವ ಬಿಜೆಪಿ ಯಾವುದೇ ಸಂಸದರು ಕರ್ನಾಟಕದ ವಿಚಾರಗಳ ಬಗ್ಗೆ ಮಾತನಾಡುತ್ತಿಲ್ಲ. ಅಂತಹ ಮೂರ್ಖ ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದೇವೆ ಎಂದು ಕಿಡಿಕಾರಿದರು.ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ, ಕೇಂದ್ರಕ್ಕೆ ಅಧಿಕ ತೆರಿಗೆ ಆದಾಯ ತಂದುಕೊಡುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಲೋಕಸಭೆ ಚುನಾವಣೆ ಮುಂದಿಟ್ಟುಕೊಂಡು ಜಿಎಸ್‌ಟಿ ಪಾಲು ಹಂಚಿಕೆಯಲ್ಲಿ ವಿರೋಧ ಪಕ್ಷದ ರಾಜ್ಯಗಳಿಗೆ ತಾರತಮ್ಯ ಮಾಡುವುದು ಸರಿಯಲ್ಲ ಎಂದು ಹೇಳಿದರು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಸ್ವಾಮಿ, ಮಾಜಿ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯ್‌ಕುಮಾರ್, ಎಂ. ಡಿ.ರಮೇಶ್, ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಹನೀಫ್, ಹರೀಶ್, ಸಿ.ಎನ್.ಅಕ್ಮಲ್, ತನೋಜ್‌ಕುಮಾರ್, ಮಾಜಿ ಸಂಸದ ಆಯನೂರು ಮಂಜುನಾಥ್, ವಕೀಲ ಪುಟ್ಟೇಗೌಡ, ಪ್ರಕಾಶ್ ರೈ ಹಾಗೂ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. 7 ಕೆಸಿಕೆಎಂ 3ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಖಂಡಿಸಿ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರು ಬುಧವಾರ ನಡೆಸಿದ ಧರಣಿಯನ್ನು ಬೆಂಬಲಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.