ಕೊಪ್ಪಳ(ಯಲಬುರ್ಗಾ):
ಪ್ರಶಸ್ತಿಗೆ ನಮ್ಮ ಶಾಲೆ ಅರ್ಹತೆ ಹೊಂದಿದೆ. 15 ಅಂಕವನ್ನು ಶಾಲಾ ಎಸ್‌ಡಿಎಂಸಿ ಪಡೆದಿದ್ದು ಎಲ್ಲ ಸೌಲಭ್ಯ ಲಭ್ಯವಿದೆ. ಮಕ್ಕಳಿಗೆ ಪೂರಕವಾದ ಅಂಶ ಶಾಲೆಯಲ್ಲಿದ್ದರೂ ಕೇವಲ 5 ಅಂಕ ಪಡೆದ ಶಾಲೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನಮಗೆ ಎಸ್‌ಡಿಎಂಸಿ ಸಮಿತಿಯು ಬೇಡ. ನ್ಯಾಯ ಕೊಡಿ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಶಾಲೆಗೆ ಅಗತ್ಯ ಮೂಲ ಸೌಕರ್ಯ ನೀಡಿದ್ದಾರೆ. ಕಲಿಕೆಗೆ ಉತ್ತಮ ವಾತಾವರಣ, ಗುಣಮಟ್ಟದ ಶಿಕ್ಷಣ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳಿವೆ. ಆದರೂ ಪ್ರಶಸ್ತಿ ಆಯ್ಕೆಯಲ್ಲಿ ಅನ್ಯಾಯವಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಪ್ರೋತ್ಸಾಹಿಸುವ ಬದಲು ತಾರತಮ್ಯ ಮಾಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಬಿಆರ್‌ಸಿ ಸಮನ್ವಯಾಧಿಕಾರಿ ಅಶೋಕಗೌಡರ ಅವರಿಂದಲೇ ನಮಗೆ ಅನ್ಯಾಯವಾಗಿದೆ. 15 ದಿನದಲ್ಲಿ ನಿಮ್ಮ ಶಾಲೆಗೆ ಪ್ರಶಸ್ತಿ ಸಿಗುವಂತೆ ಮಾಡುತ್ತೇನೆ ಎಂದು ಹೇಳಿ ಇದೀಗ ಅನ್ಯ ಶಾಲೆಗೆ ಶಿಫಾರಸು ಮಾಡಿದ್ದೀರಿ. ಇದು ನ್ಯಾಯವೇ ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು, ಮೊದಲು ಜಿಲ್ಲಾ ಹಂತದಲ್ಲಿ ಆಯ್ಕೆ ಮಾಡಿ ರಾಜ್ಯ ಹಂತದಲ್ಲಿ ಕೈಬಿಟ್ಟಿರುವುದು ಏಕೆ. ಜಿಲ್ಲಾಮಟ್ಟದ ಅಧಿಕಾರಿಗಳನ್ನು ಕೇಳಿದರೆ ತಾಲೂಕಿನಿಂದ ಬಂದಿರುವ ಪಟ್ಟಿ ಎಂದು ಹೇಳುತ್ತಾರೆ. ನೀವು ನಮ್ಮ ಶಾಲೆಗೆ ಅನ್ಯಾಯ ಮಾಡಿದ್ದು ಮೇಲಾಧಿಕಾರಿಗೆ ದೂರು ಸಲ್ಲಿಸುತ್ತೇವೆ ಎಂದರು.