ಹೂವಿನಹಡಗಲಿ: ಸದನದಲ್ಲಿ ನೌಕರರ ಸಮಸ್ಯೆ ಬಗ್ಗೆ ಚರ್ಚಿಸುವೆ ಎಂದು ಶಾಸಕ ಕೃಷ್ಣನಾಯ್ಕ ಭರವಸೆ ನೀಡಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ 2ನೇ ಮಹಡಿ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿ ಮಾತನಾಡಿದ ಶಾಸಕರು, ರಾಜ್ಯದ ಎಲ್ಲ ಕಡೆಗೂ ಸರ್ಕಾರಿ ನೌಕರರು ಈ ಕುರಿತು ಮನವಿ ಸಲ್ಲಿಸಿದ್ದಾರೆ. ಕಳೆದ 5 ವರ್ಷಗಳಿಂದ ಈ 7ನೇ ವೇತನ ಆಯೋಗ ಜಾರಿ ಮಾಡುತ್ತಿಲ್ಲ. ಈ ಕುರಿತು ಜಾರಿಗೆ ಅಡ್ಡಿಯಾದ ತೊಡಕು ಹಾಗೂ ಸಾಧಕ-ಬಾಧಕಗಳನ್ನು ಚರ್ಚಿಸಿ, ಸದನದಲ್ಲಿ ಚರ್ಚಿಸುತ್ತೇನೆ. ಸದಾ ನಿಮ್ಮ ಬೆಂಬಲಕ್ಕೆ ಇರುತ್ತೇನೆಂದು ಹೇಳಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಮೀಸಲಿರುವ ಅನುದಾನದಲ್ಲಿಯೂ ನಮ್ಮ ಕ್ಷೇತ್ರಕ್ಕೆ ಅನ್ಯಾಯವಾಗುತ್ತಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹5 ಸಾವಿರ ಕೋಟಿ ಕ್ರಿಯಾ ಯೋಜನೆ ರೂಪಿಸಲಾಗಿತ್ತು. ಅದರಲ್ಲಿ ಕೆಲ ಬದಲಾವಣೆಗಳನ್ನು ಮಾಡಿದ್ದಾರೆ. ನಮ್ಮ ಕ್ಷೇತ್ರಕ್ಕೆ ₹90 ಕೋಟಿ ಅನುದಾನ ನೀಡಬೇಕಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದ 7 ಜಿಲ್ಲೆಗಳಲ್ಲಿ ಸರ್ಕಾರ ಜಾರಿ ಮಾಡಿರುವ ಎಲ್‌ಕೆಜಿ, ಯುಕೆಜಿ ತರಗತಿಗಳ ಆರಂಭಕ್ಕೆ, ಶಾಸಕರ ಅನುದಾನ ನೀಡಬೇಕಿದೆ. ಜತೆಗೆ ಅದಕ್ಕೆ ಪ್ರತ್ಯೇಕ ಅನುದಾನ ನಿಗದಿ ಮಾಡಿಲ್ಲ. ಅದನ್ನು ನಿರ್ಲಕ್ಷ್ಯ ಮಾಡಿದರೆ ಶಿಕ್ಷಣ ಕ್ಷೇತ್ರಕ್ಕೆ ಅನ್ಯಾಯವಾಗಲಿದೆ. ಏನೇ ತೊಂದರೆ ಬಂದರೂ ಎಲ್ಲವನ್ನು ಸರಿಪಡಿಸುವಂತ ಪ್ರಯತ್ನ ಮಾಡುತ್ತಿದ್ದೇನೆಂದು ಹೇಳಿದರು.ಜಲಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ, ಮಾಗಳ-ಕಲ್ಲಾಗನೂರು ನಡುವೆ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ಈಗಾಗಲೇ ಡಿಪಿಆರ್ ರಚನೆಗೆ ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಈ ಕಾರ್ಯ ಪೂರ್ಣಗೊಳಿಸಿ, ಕಾಮಗಾರಿ ಆರಂಭಿಸುವ ಪ್ರಯತ್ನ ಮಾಡುತ್ತೇನೆ. ಶಿಕ್ಷಕರ ಗುರು ಭವನ ನಿರ್ಮಾಣವನ್ನು ಉತ್ತಮ ಶೈಲಿಯಲ್ಲಿ ನಿರ್ಮಾಣ ಮಾಡಬೇಕಿದೆ. ಅದಕ್ಕೆ ಅಗತ್ಯವಿರುವ ಅನುದಾನ ತರುವಂತಹ ಕೆಲಸ ಮಾಡೋಣ ಎಂದರು.
ತಾಪಂ ಇಒ ಉಮೇಶ ಮಾತನಾಡಿ, ಸರ್ಕಾರ ಎನ್‌ಪಿಎಸ್ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಬೇಕಿದೆ. ನೌಕರರ ನಿವೃತ್ತಿ ಹೊಂದಿದ ಬಳಿಕ ಆ ವ್ಯಕ್ತಿ ತಿಂಗಳಿಗೆ ₹1 ಸಾವಿರ ಮಾತ್ರ ನಿವೃತ್ತಿ ವೇತನ ಬರುತ್ತದೆ. ಇದರಿಂದ ಅವರು ಜೀವನ ಸಾಗಿಸಲು ಹೇಗೆ ಸಾಧ್ಯ ಎಂದ ಅವರು, ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕರ್ನಾಟಕದಲ್ಲಿ ಎನ್‌ಪಿಎಸ್ ಯೋಜನೆ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿ ಮಾಡುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಕೊಟ್ರಗೌಡ, ಅಧ್ಯಕ್ಷ ಎಂ.ಪಿ.ಎಂ.ಅಶೋಕ ಮಾತನಾಡಿದರು.