ಕನ್ನಡಪ್ರಭ ವಾರ್ತೆ ಇಂಡಿ
ಕೃಷಿ ಇಲಾಖೆಯಿಂದ ವಿತರಣೆ ಮಾಡಿದ ತೊಗರಿ ಬೀಜ ಕಳಪೆಯಾಗಿದ್ದರಿಂದ ತೊಗರಿ ಬೆಳೆಗೆ ಕಾಯಿ ಹತ್ತಿರುವುದಿಲ್ಲ ಎಂಬ ಅಳಲು ಕೆಲ ರೈತರು ತೊಡಿಕೊಂಡಿದ್ದು, ರೈತರಿಗೆ ಆಗಿರುವ ಅನ್ಯಾಯ ಸರಿದೂಗಿಸುವ ಕುರಿತು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ರೈತರ ಪರವಾಗಿ ಸರ್ಕಾರದ ಗಮನ ಸೆಳೆಯುವೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಭರವಸೆ ನೀಡಿದರು.ಪಟ್ಟಣದ ಆಡಳಿತಸೌಧ ಆವರಣದಲ್ಲಿ ಹಮ್ಮಿಕೊಂಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಶಾಸಕರಲ್ಲಿಯೇ ರೈತರ ಪರವಾಗಿ ವಿಧಾನಸಭೆ ಅಧಿವೇಶನದಲ್ಲಿ ಅತ್ಯಂತ ಹೆಚ್ಚು ಪ್ರಶ್ನೆ ಕೇಳಿದವನು ನಾನು. ರೈತರಿಗೆ ತೊಗರಿ ಬೀಜದಿಂದ ನೋವಾಗಿದೆ. ಸರ್ಕಾರ ತನಿಖೆ ಮಾಡಿ, ಪರಿಶೀಲನೆ ಮಾಡಿದ ನಂತರ ಬೀಜಗಳನ್ನು ವಿತರಣೆ ಮಾಡಬೇಕಾಗಿತ್ತು. ಈ ಕುರಿತು ತೊಗರಿ ಬೆಳೆಯಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂಬ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ತಿಳಿಸಿದರು.
ತಾಲೂಕಿನಲ್ಲಿ ಉತ್ತಮ, ಭ್ರಷ್ಟಾಚಾರ ರಹಿತ ಆಡಳಿತ ನಡೆಯಲಿ ಎಂಬ ಉದ್ದೇಶದಿಂದ ಅಧಿಕಾರಿಗಳ ಮುಖ ನೋಡದೆ ತಾಲೂಕಿಗೆ ತಂದಿರುವೆ. ಆದರೆ, ಆಡಳಿತದಲ್ಲಿ ಭ್ರಷ್ಟಾಚಾರ ನಡೆಸಿ ಜನರಿಗೆ ತೊಂದರೆ ನೀಡುತ್ತಿರುವ ಇಲಾಖೆಯ ಅಧಿಕಾರಿಗಳ ಮಾಹಿತಿ ನೀಡಿದರೆ 24 ಗಂಟೆಯಲ್ಲಿ ಅವರನ್ನು ಮತಕ್ಷೇತ್ರದಿಂದ ವರ್ಗಾವಣೆ ಮಾಡಿಸುವೆ. ಬದ್ಧತೆ, ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ರಾಜಕಾರಣ ಮಾಡಿದ್ದೇನೆ. ಸರ್ವಜನರನ್ನು ಪ್ರೀತಿಸುವವರಿಗೆ ನಿಮ್ಮ ಆಶೀರ್ವಾದ ಇರಬೇಕು. ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರೇ ಸಾಲದು, ಅವರ ತತ್ವ, ಸಿದ್ಧಾಂತಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕು ಎಂದರು.ಮಾತಿಗಿಂತ ಕೃತಿಯ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಿದ್ಧೇನೆ. ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಒಬ್ಬ ಪುಣ್ಯಾತ್ಮ ರಾಯಲ್ ಫರ್ಲ್ ಹೆಸರಿನ ಮೂಲಕ ತನ್ನ ಸ್ವಂತ ಆಸ್ತಿಯನ್ನಾಗಿ ಮಾಡಿಕೊಳ್ಳಲು ಹೊರಟಿದ್ದ. ಆದರೆ, ನಾನು ಅದನ್ನು ರೈತರ ಆಸ್ತಿಯನ್ನಾಗಿ ಮಾಡಿದ್ದೇನೆ ಎಂದರು.ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ದಿ.ಇಂದಿರಾಗಾಂಧಿಯನ್ನು ಬಿಟ್ಟರೆ ರಾಜ್ಯದ ದೇವರಾಜ ಅರಸ್ ಅವರು ಮುಖ್ಯಮಂತ್ರಿ ಆಗಿದ್ದಾಗ ಆಡಳಿತ ಮಾಡಿದ್ದಾರೆ. ಬಸವಣ್ಣನವರು ಎಲ್ಲರೂ ನಮ್ಮವರೇ ಎಂಬ ಸಂಸ್ಕಾರ ನೀಡಿ ಹೋಗಿದ್ದಾರೆ. ಬಸವಣ್ಣನವರ ತತ್ವ, ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದವರು ನಾವು. ಸಂವಿಧಾನವನ್ನು ಗೌರವಿಸುವುದು ನಾಗರಿಕ ಸಮಾಜದ ಕರ್ತವ್ಯ. ರಾಮಕೃಷ್ಣ ಹೆಗಡೆ ಅವರು ಒಂದೇ ಟೀಕೆಗೆ ರಾಜೀನಾಮೆ ನೀಡಿದ್ದಾರೆ. ನಿಜಲಿಂಗಪ್ಪನವರು ಅಧಿಕಾರ ತ್ಯಾಗ ಮಾಡಿದ್ದಾರೆ. ಅಂತವರ ಸಾಲಿನಲ್ಲಿ ಪ್ರಬುದ್ಧ, ಬದ್ಧತೆಯ ರಾಜಕಾರಣ, ಸಮಾಜವಾದಿ ಸಿದ್ಧಾಂತದ ಮೇಲೆ ರಾಜಕಾರಣ ಮಾಡುತ್ತಿರುವವರು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದು ಬಣ್ಣಿಸಿದರು.ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಹಸಿವುಮುಕ್ತ ರಾಜ್ಯವನ್ನಾಗಿಸಲು ಘೋಷಣೆ ಮಾಡಿದವರು ಸಿಎಂ ಸಿದ್ದರಾಯ್ಯನವರು. ದೇವರಾಜ ಅರಸರ ನಂತರ ಬದ್ಧತೆಯ ರಾಜಕಾರಣ ಮಾಡುವವರು ಸಿಎಂ ಸಿದ್ದರಾಮಯ್ಯನವರು. ಸರ್ಕಾರ ಜಾರಿಗೊಳಿಸಿದ ಗ್ಯಾರಂಟಿ ಯೋಜನೆಯಿಂದ ಬಡವರಿಗೆ, ಮಹಿಳೆಯರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ, ಇಲಿಯಾಸ್ ಬೋರಾಮಣಿ, ಎಂ.ಆರ್.ಪಾಟೀಲ ಮಾತನಾಡಿದರು.ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಎಸಿ ಅಬೀದ್ ಗದ್ಯಾಳ, ತಹಸೀಲ್ದಾರ್ ಬಿ.ಎಸ್.ಕಡಕಬಾವಿ, ತಾಪಂ ಇಒ ನಂದೀಪ ರಾಠೋಡ, ಸಿಡಿಪಿಒ ಗೀತಾ ಗುತ್ತರಗಿಮಠ, ಎಇಇ ಎಸ್.ಆರ್,ಮೇಡೆಗಾರ, ವಿ.ಆರ್.ಹವಲ್ದಾರ, ವಿಠಲ ನಡುವಿನಮನಿ, ಅನುಷ್ಠಾನ ಸಮಿತಿ ಸದಸ್ಯರಾದ ಮಹೇಶ ಹೊನ್ನಬಿಂದಗಿ, ಸಂಜುಕುಮಾರ ನಾಯ್ಕೋಡಿ, ಸತೀಶ ಹತ್ತಿ, ನಿರ್ಮಲಾ ತಳಕೇರಿ, ಶೈಲಜಾ ಜಾಧವ, ಶಶಿಕುಮಾರ ಹಿರೇಮಠ, ಸಿದ್ದು ಕಟ್ಟಿಮನಿ, ಪ್ರಭು ಕುಂಬಾರ, ಸಂಕೇತ ಜೋಶಿ, ಮಲ್ಲೇಶಿ ಭೊಸಗಿ, ರುದ್ರುಗೌಡ ಅಲಗೊಂಡ, ಭೀಮರಾಯ ಮೇತ್ರಿ, ಸೋಮಣ್ಣ ಪ್ರಚಂಡಿ, ಅಜೀತ ಜೀರಗಿ, ಸಣ್ಣಪ್ಪ ತಳವಾರ, ಧರ್ಮು ವಾಲಿಕಾರ, ಹುಚ್ಚಪ್ಪ ತಳವಾರ, ಶೇಖರ ಶಿವಶರಣ, ಶೇಖರ ನಾಯಕ, ಸದಾಶಿವ ಪ್ಯಾಟಿ, ಜಟ್ಟೆಪ್ಪ ರವಳಿ, ನೀಲಕಮಠ ರೂಗಿ, ಪುತಳಾಬಾಯಿ ಭಜಂತ್ರಿ, ಮಲ್ಲು ಮಡ್ಡಿಮನಿ, ಸೋಮು ಮ್ಯಾಕೇರಿ, ಭೀಮಾಶಂಕರ ಮೂರಮನ, ರೈಸ್ಟೇಕರ, ಕಲ್ಲು ಅಂಜುಟಗಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.ನನಗೆ ಸಚಿವ ಸ್ಥಾನ ನೀಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹಾಗೂ ಸುರ್ಜೇವಾಲಾರು ಮಾತು ಕೊಟ್ಟಿದ್ದರು. ಆದರೆ, ಆ ಮಾತು ಉಳಿಸಿಕೊಳ್ಳಲಿಲ್ಲವೆಂದು ನಾನೇನು ರಾಜೀನಾಮೆ ನೀಡಲಿಲ್ಲ. ನನ್ನ ಭಾಗಕ್ಕೆ ಕಾಲುವೆ ನೀರು ಹರಿಸಲಿಲ್ಲ ಎಂದರೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೇನೆ. ಮತಕ್ಷೇತ್ರವನ್ನು ಸರ್ವವಿದಧಲ್ಲಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಮೈಸೂರಿಗೆ 14 ಜಿಯೋ ಟ್ಯಾಗ್ ಲಭಿಸಿದೆ. ಹಿಂದೆ ಕ್ಷೇತ್ರವನ್ನಾಳಿದವರಿಗೆ ಇಂಡಿಗೆ ಜಿಯೋಗ್ರಫೀ ಟ್ಯಾಗ್ ದೊರಕಿಸಿಕೊಡಲು ಏಕೆ ಆಗಿರುವುದಿಲ್ಲ?.
-ಯಶವಂತರಾಯಗೌಡ ಪಾಟೀಲ, ಶಾಸಕರು.