ಪ್ರತ್ಯೇಕ ಶಿಕ್ಷಕಿಯರ ದಿನಾಚರಣೆಗೆ ಸಿಎಂ ಜತೆಗೆ ಚರ್ಚೆ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Feb 26, 2024 1:32 AM

ಸಾರಾಂಶ

ಈಗ ರಾಜ್ಯ ಸರ್ಕಾರ ಜ. ೩ರಂದು ಪ್ರತ್ಯೇಕ ಶಿಕ್ಷಕಿಯರ ದಿನ ಆಚರಣೆಗೆ ಮುಂದಾಗುವಂತೆ ಮನವಿ ಮಾಡಿದರು.

ಕಾರಟಗಿ: ರಾಜ್ಯದಲ್ಲಿ ಪ್ರತಿವರ್ಷ ಜ. ೩ರಂದು ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನದಂದು ಶಿಕ್ಷಕಿಯರ ದಿನಾಚರಣೆಯನ್ನಾಗಿ ಪ್ರತ್ಯೇಕವಾಗಿ ಆಚರಿಸಬೇಕು ಎನ್ನುವ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಇಲ್ಲಿನ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಫೆಡರೇಶನ್ ಮತ್ತು ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘಗಳ ಆಶ್ರಯದಲ್ಲಿ ನಡೆದ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದ ಹೆಸರಾಂತ ಮಹಿಳಾ ಶಿಕ್ಷಣದ ಪ್ರವರ್ತಕಿ, ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನವಾದ ಜ. ೩ರಂದು ಪ್ರತ್ಯೇಕ ಶಿಕ್ಷಕಿಯರ ದಿನಾಚರಣೆ ಆಚರಿಸಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿರುವ ರಾಜ್ಯದ ಶಿಕ್ಷಕಿಯರ ಸಂಘದ ಬೇಡಿಕೆಯನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಜಯಂತಿ ಘೋಷಣೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಇದಕ್ಕೂ ಮುನ್ನ ಸಾವಿತ್ರಿಬಾಯಿ ಫುಲೆ ಘಟಕದ ರಾಜ್ಯಾಧ್ಯಕ್ಷೆ ಲತಾ ಮುಳ್ಳೂರು ಮಾತನಾಡಿ, ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಎಲ್ಲ ಸಂಘಗಳಲ್ಲಿ ಪುರುಷ ಪ್ರಧಾನ ಆಡಳಿತವಿದೆ. ಈ ಸಂಘಗಳಲ್ಲಿ ಮಹಿಳೆಯರಿಗೆ ಮಹತ್ವದ ಹುದ್ದೆ ನೀಡದೇ ನಿರ್ಲಕ್ಷಿಸಿದ್ದಾರೆ. ಈ ಕಾರಣಕ್ಕೆ ಪರ್ಯಾಯವಾಗಿ ಶಿಕ್ಷಕಿಯರು ಪ್ರತ್ಯೇಕ ಸಂಘಟನೆ ಕಟ್ಟಲು ಕಾರಣವಾಗಿದೆ. ಈಗ ರಾಜ್ಯ ಸರ್ಕಾರ ಜ. ೩ರಂದು ಪ್ರತ್ಯೇಕ ಶಿಕ್ಷಕಿಯರ ದಿನ ಆಚರಣೆಗೆ ಮುಂದಾಗುವಂತೆ ಮನವಿ ಮಾಡಿದರು.

ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಚಂದ್ರಶೇಖರ ಗಣವಾರಿ, ದ್ಯಾಮಣ್ಣ ಬೆನಕಟ್ಟಿ, ಅಮರೇಶ ಮೈಲಾಪುರ, ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷ ಬಸವರಾಜ ರ್‍ಯಾವಳದ್, ನೌಕರರ ಸಂಘದ ಅಧ್ಯಕ್ಷ ಸರ್ದಾರ ಅಲಿ, ಎನ್‌ಪಿಎಸ್ ನೌಕರರ ಸಂಘದ ವೀರನಗೌಡ ಹಣವಾಳ, ಜಿಪಿಟಿ ಸಂಘದ ಅಧ್ಯಕ್ಷ ಸಂತೋಷ ಹುಡೇದಾಳ, ಸಿಆರ್‌ಪಿಗಳಾದ ತಿಮ್ಮಣ್ಣ ನಾಯಕ್, ಭೀಮಣ್ಣ ಕರಡಿ, ಇ. ಮಾರುತಿ, ಮಂಜುನಾಥ್ ಚಿಕೇನಕೊಪ್ಪ ಇದ್ದರು.

ಪದಗ್ರಹಣ ಸ್ವೀಕಾರ: ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ನೂತನ ತಾಲೂಕು ಘಟಕದ ಉಮಾಮಹೇಶ್ವರಿ (ಅಧ್ಯಕ್ಷೆ), ಅನುಸೂಯಾ ಹಂಚಿನಾಳ (ಗೌರವಾಧ್ಯಕ್ಷೆ), ಅನ್ನಪೂರ್ಣಾ ಸಜ್ಜನ್ (ಪ್ರಧಾನ ಕಾರ್ಯದರ್ಶಿ), ಶಂಕ್ರಮ್ಮ ಸಜ್ಜನ್ (ಕೋಶಾಧ್ಯಕ್ಷ), ಅನಸೂಯ ಕಂಚಿಮಠ (ಕಾರ್ಯದರ್ಶಿ)ಯಾಗಿ ಪದಗ್ರಹಣ ಸ್ವೀಕರಿಸಿದರು.

Share this article