ಕನ್ನಡಪ್ರಭ ವಾರ್ತೆ ಲಿಂಗಸುಗೂರು
ತಾಲೂಕಿನ ರೋಡಲಬಂಡಾ (ತವಗ) ಗ್ರಾಮ ಪಂಚಾಯಿತಿ ವ್ಯಾಪ್ತಿಯ ತವಗ ಗ್ರಾಮದ ಕುಡಿಯುವ ನೀರು ಸಂಗ್ರಹ ಟ್ಯಾಂಕ್‌ಗೆ ವಿಷ ಹಾಕಿದ ಘಟನೆಗೆ ಗ್ರಾಮ ತಲ್ಲಣಗೊಂಡಿದ್ದು ಪ್ರಕರಣ ಭೇದಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.ತವಗ ಗ್ರಾಮದಲ್ಲಿ 200ಕ್ಕೂ ಅಧಿಕ ಮನೆಗಳಿದ್ದು, 1000 ಜನಸಂಖ್ಯೆ ಇದೆ. ಇಬ್ಬರು ಗ್ರಾಪಂ ಸದಸ್ಯರಿದ್ದಾರೆ. ಶೇ.90ರಷ್ಟು ಅಪ್ಪಟ ಒಕ್ಕಲುತನದ ಊರಾಗಿದೆ. ಆಗಾಗ ಕುಡಿಯುವ ನೀರಿನ ಸಮಸ್ಯೆ ಜನರಿಗೆ ಭಾದೆ ಉಂಟು ಮಾಡುತ್ತಿತ್ತು. ಇತ್ತಿಚೀಗೆ ಆ ಸಮಮಸ್ಯೆ ತಲೇದೊರಿಲ್ಲ. ಜೀವನಾಶ್ಯಕ ವ್ಯವಸ್ಥೆಗೆ ಜನರು 5 ಕಿ.ಮೀ ದೂರದ ಹಟ್ಟಿ ಪಟ್ಟಣದ ಅವಲಂಬಿಸಿದ್ದಾರೆ.
ತವಗಕ್ಕೆ ಮೂರು ಕಡೆಯಿಂದ ರಸ್ತೆ ಸಂಪರ್ಕ ಇದೆ. ಗ್ರಾಮದ ಎತ್ತರದ ಪ್ರದೇಶದಲ್ಲಿ ಕುಡಿಯುವ ನೀರು ಸಂಗ್ರಹದ ಟ್ಯಾಂಕ್ ಇದೆ. ಮೋಟಾರು ಪಂಪ್‌ನಿಂದ ಟ್ಯಾಂಕ್‌ಗೆ ನೀರು ತುಂಬಿಸಿ ಗ್ರಾಮಕ್ಕೆ ಪೂರೈಕೆ ಮಾಡಲಾಗುತ್ತದೆ. ಅದರಂತೆ ಶನಿವಾರ ಬೆಳಗ್ಗೆ ಟ್ಯಾಂಕ್‌ನಿಂದ ನೀರು ಪೂರೈಕೆ ಮಾಡಿದಾಗ ನಳದ ಮೂಲಕ ನೀರಿನಲ್ಲಿ ನೊರೆ ಬಂದು ಕ್ರಿಮಿನಾಶಕ ವಾಸನೆ ಮೂಗಿ ಬಡಿದಿದೆ. ಘಟನೆಯಿಂದ ಗಾಬರಿಗೊಂಡ ಜನ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ವಿಷಪ್ರಾಶನ ಮಾಡಲಾಗಿದೆ ಎಂದು ಊರೆಲ್ಲ ಸುದ್ದಿ ತಲುಪಿಸಿದ್ದಾರೆ. ಈ ಆತಂಕದ ಸುದ್ದಿ ತಿಳಿದ ಜನ ಕುಡಿಯುವ ನೀರು ಪಡೆಯುವುದು ನಿಲ್ಲಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡಿದ್ದರಿಂದ ಭಾರಿ ಅನಾಹುತ ತಪ್ಪಿದೆ.ಘಟನೆಯ ಬಳಿಕ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅನೇಕ ಅಧಿಕಾರಿಗಳು, ಸಿಬ್ಬಂದಿ ಗ್ರಾಮದಲ್ಲಿಯೇ ಬಿಡುಬಿಟ್ಟು ಗ್ರಾಮಸ್ಥರ ಸಹಕಾರದಿಂದ ಟ್ಯಾಂಕಿನಲ್ಲಿನ ನೀರು ಸಂಪೂರ್ಣ ಖಾಲಿ ಮಾಡಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೇದೋರದಂತೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ ಮಾಡಿದ್ದಾರೆ. ಟ್ಯಾಂಕಿನಲ್ಲಿ ವಿಷಪ್ರಾಶನ ಮಾಡಿದ ಬಗ್ಗೆ ಹಟ್ಟಿ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 279, 123, ಹಾಗೂ 62ರಡಿ ಪ್ರಕರಣ ದಾಖಲಾಗಿದೆ. ಪ್ರಕರಣ ಭೇದಿಸಲು ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ, ಪಿಐ ಹೊಸಕೇರಪ್ಪ ನೇತೃತ್ವದಲ್ಲಿ ಇಲಾಖೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ.
ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷಪ್ರಾಶನ ಮಾಡಿದ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಕ್ಕೆ ಟ್ಯಾಂಕರ್‌ಗಳಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಿದ್ದು ತನಿಖೆ ಆರಂಭಿಸಿದ್ದಾರೆ. ಸದ್ಯ ಕುಡಿಯುವ ನೀರು ಪೂರೈಕೆಗೆ ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. ಗ್ರಾಮಸ್ಥರು ಆತಂಕಪಡಬೇಕಿಲ್ಲ ಇಲಾಖೆ ಜನರೊಂದಿಗೆ ಇದೆ.ಉಮೇಶ, ಇಒ ತಾಪಂ ಲಿಂಗಸುಗೂರು.
ಕುಡಿಯುವ ನೀರಿನ ಟ್ಯಾಂಕ್‌ಗೆ ವಿಷ ಬೆರಿಸಿದ ಘಟನೆ ಗ್ರಾಮದಲ್ಲಿ ತಲ್ಲಣ ಉಂಟು ಮಾಡಿದೆ. ಅಧಿಕಾರಿ ವರ್ಗ ಹಾಗೂ ಗ್ರಾಮಸ್ಥರ ಸಹಕಾರದಿಂದ ಟ್ಯಾಂಕರ್‌ನಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದಾರೆ. ಘಟನೆಯಿಂದ ರಾತ್ರಿ ನಮಗೇ ನಿದ್ದೆನೆ ಬಂದಿಲ್ಲ.ವೀರಭದ್ರ ಗೌಡ ಪೊಲೀಸ್ ಪಾಟೀಲ್, ತವಗ