ಕನ್ನಡಪ್ರಭ ವಾರ್ತೆ, ಬೀದರ್
2023ರ ಚುನಾವಣೆಯಲ್ಲಿ ಡಾ. ಬೆಲ್ದಾಳೆ ಅವರು ದಕ್ಷಿಣ ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಬೆಲ್ದಾಳೆ ಅವರು ಚಿಟ್ಟಾವಾಡಿ ನಿವಾಸಿ ಎಂದು ಪ್ರಮಾಣಪತ್ರದಲ್ಲಿ (ಅಫಿಡಿವಿಟ್ನಲ್ಲಿ) ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ. ಚಿಟ್ಟಾವಾಡಿಯಲ್ಲಿ ಇವರ ಮನೆ ಅಥವಾ ಆಸ್ತಿ ಇಲ್ಲ ಎಂದು ರಾಜಕುಮಾರ ಮಡಕಿ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಅ.16ರಂದು ರದ್ದುಪಡಿಸಿದೆ. ಇದರೊಂದಿಗೆ ಶಾಸಕ ಬೆಲ್ದಾಳೆ ಅವರಿಗೆ ಹೈಕೋರ್ಟ್ ಜನಪ್ರತಿನಿಧಿಗಳ ನ್ಯಾಯಾಲಯದ ಬಳಿಕ ಈಗ ಸುಪ್ರೀಂಕೋರ್ಟ್ನಲ್ಲಿ ಸಹ ಜಯ ಸಿಕ್ಕಿದ್ದು, ಪ್ರತಿವಾದಿಗಳಿಗೆ ಮುಖಭಂಗವಾದಂತಾಗಿದೆ.
ರಾಜಕುಮಾರ ಮಡಕಿ ಸಲ್ಲಿಸಿದ್ದ ತಕಾರರು ಅರ್ಜಿಯನ್ನು 2025ರ ಮಾರ್ಚ್ 7ರಂದು ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಮಡಕಿ ಅವರು ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಒಂದು ವರ್ಷ ಸುದೀರ್ಘ ವಿಚಾರಣೆ ಹಾಗೂ ಅಗತ್ಯ ದಾಖಲೆಗಳ ಪರಿಶೀಲನೆ ಬಳಿಕ ಸುಪ್ರೀಂಕೋರ್ಟ್ ಇವರ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಹೇಳಿ ಪ್ರಕರಣ ರದ್ದುಪಡಿಸಿದೆ.ಬೆಲ್ದಾಳೆ ಪರ ವಕೀಲ ಸಂಜಯ್ ವಕಾಲತ್: ಡಾ.ಬೆಲ್ದಾಳೆ ಅವರು ಚಿಟ್ಟಾವಾಡಿ ಸ್ಥಳೀಯರಿದ್ದು, ಅಲ್ಲಿ ಆಸ್ತಿ ಹೊಂದಿದ್ದಾರೆ. ಚುನಾವಣೆಗೆ ನಾಮಪತ್ರ ಸಲ್ಲಿಸುವ ವೇಳೆ ನೀಡಿದ್ದ ಪ್ರಮಾಣಪತ್ರಗಳು ಹಾಗೂ ದಾಖಲೆಗಳ ಪರಿಶೀಲನೆ ನಡೆಸಿಯೇ ಚುನಾವಣಾಧಿಕಾರಿಗಳು ನಾಮಪತ್ರ ಸ್ವೀಕರಿಸಿದ್ದಾರೆ. ಈ ಹಿಂದೆ ಒಮ್ಮೆ ಜಿಪಂ ಚುನಾವಣೆ ನಿಂತು ಗೆದ್ದಿದ್ದಾರೆ. ಹಿಂದೆ ಎರಡು ಸಲ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಸೋತಿದ್ದು, 2023ರಲ್ಲಿ ಮೂರನೇ ಸಲ ಗೆದ್ದಿದ್ದಾರೆ. ಶಾಸಕರಿಗೆ ಅನಗತ್ಯ ಕಿರಿಕಿರಿ ನೀಡಲು ಚುನಾವಣಾ ತಕರಾರು ಅರ್ಜಿ ಸಲ್ಲಿಸಿದೆ. ಇಲ್ಲಿ ಅರ್ಜಿದಾರರ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಲ್ದಾಳೆ ಪರ ವಕೀಲರು ನ್ಯಾಯಮೂರ್ತಿಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸಫಲರಾಗಿದ್ದರು. ಇವರ ವಾದವನ್ನು ಪುರಸ್ಕರಿಸಿ ತಕರಾರು ಅರ್ಜಿ ರದ್ದುಗೊಳಿಸಿ, ಈ ಪ್ರಕರಣ ವಿಲೇವಾರಿ ಮಾಡಿದೆ. ಬೆಲ್ದಾಳೆ ಅವರ ಪರ ವಕೀಲರಾದ ಸಂಜಯ್ ನೂಲಿ, ಗೌರೀಶ ಖಾಶೆಂಪುರ ಅವರು ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸಿದ್ದರು.
ಪ್ರಜಾತಂತ್ರದಲ್ಲಿ ಜನರ ತೀರ್ಪು ದೊಡ್ಡದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಮಾಜಿ ಶಾಸಕ ಅಶೋಕ ಖೇಣಿ ಅವರು ಜನರ ತೀರ್ಪಿಗೆ ತಲೆಬಾಗಬೇಕಿತ್ತು. ಅದನ್ನು ಬಿಟ್ಟು ತಮ್ಮವರಿಂದ ಚುನಾವಣಾ ತಕರಾರು ಅರ್ಜಿ ದಾಖಲಿಸಿರುವುದು, ರಾಜಕೀಯ ದುರುದ್ದೇಶದಿಂದ ಕಿರಿಕಿರಿ ನೀಡಲು ಯತ್ನಿಸಿರುವುದು ಬೇಸರ ತಂದಿದೆ. ಜನರೇ ಇಂಥವರಿಗೆ ತಕ್ಕ ಪಾಠ ಕಲಿಸುತ್ತಾರೆ.