ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ನೌಕರರ ಉಡಾಫೆ ವರ್ತನೆ

KannadaprabhaNewsNetwork |  
Published : Jan 14, 2025, 01:03 AM IST
13ಎಚ್ಎಸ್ಎನ್9 : ಬೇಲೂರು    ಪಟ್ಟಣದ  ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಾಸನ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ತಾಲ್ಲೂಕ್ ಕಾರ್ಯ ಕಾರಿ ಸಮಿತಿ ಮತ್ತು ಸಾಮಾನ್ಯ ಸಮಿತಿ  ಸಭೆಯ  ನಡೆಸಲಾಯಿತು. | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡುತ್ತಿದ್ದು, ಡಿ ಗ್ರೂಪ್ ನೌಕರರು ಸಮರ್ಪಕವಾಗಿ ತಮ್ಮ ಕರ್ತವ್ಯ ನಿರ್ವಹಿಸದೆ ತಾಲೂಕು ವೈದ್ಯಾಧಿಕಾರಿಗಳ ಮೇಲೆ ಉಡಾಫೆ ವರ್ತನೆ ತೋರುತ್ತಿದ್ದು, ‌ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗಳ ಜೊತೆ‌ ಚರ್ಚಿಸಲಾಗುವುದು ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು. ಈ ಬಗ್ಗೆ ಜಿಲ್ಲೆಯ ಗುತ್ತಿಗೆದಾರನನ್ನು ಕೇಳಲು ಹೋದರೆ ಅವರು ಸಿಗುತ್ತಿಲ್ಲ. ಹೊರಗಿನವರಿಗೆ ಗುತ್ತಿಗೆ ನೀಡುತ್ತಿರುವುದರಿಂದ ಡಿ ಗ್ರೂಪ್ ನೌಕರರು ತಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದು, ಸ್ವಚ್ಛತೆಯಲ್ಲಿ ಹಿಂದುಳಿಯಲು ಕಾರಣವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬೇಲೂರು

ಸರ್ಕಾರಿ ಆಸ್ಪತ್ರೆಯ ಸ್ವಚ್ಛತಾ ನಿರ್ವಹಣೆ ಗುತ್ತಿಗೆಯನ್ನು ಖಾಸಗಿ ಏಜೆನ್ಸಿಗಳಿಗೆ ನೀಡುತ್ತಿದ್ದು, ಡಿ ಗ್ರೂಪ್ ನೌಕರರು ಸಮರ್ಪಕವಾಗಿ ತಮ್ಮ ಕರ್ತವ್ಯ ನಿರ್ವಹಿಸದೆ ತಾಲೂಕು ವೈದ್ಯಾಧಿಕಾರಿಗಳ ಮೇಲೆ ಉಡಾಫೆ ವರ್ತನೆ ತೋರುತ್ತಿದ್ದು, ‌ಈ ಬಗ್ಗೆ ಜಿಲ್ಲಾ ಆರೋಗ್ಯಧಿಕಾರಿಗಳ ಜೊತೆ‌ ಚರ್ಚಿಸಲಾಗುವುದು ಎಂದು ಶಾಸಕ ಎಚ್ ಕೆ ಸುರೇಶ್ ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಹಾಸನ ಜಿಲ್ಲಾ ಆರೋಗ್ಯ ರಕ್ಷಾ ಸಮಿತಿಯ ತಾಲೂಕು ಕಾರ್ಯಕಾರಿ ಸಮಿತಿ ಮತ್ತು ಸಾಮಾನ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕವಾಗಿ ಆಸ್ಪತ್ರೆಯ ಸ್ವಚ್ಛತೆಯ ಕಾರ್ಯವೈಖರಿ ಬಗ್ಗೆ ವ್ಯಾಪಕ ದೂರು ಕೇಳಿ ಬರುತ್ತಿದೆ. ಡಿ ಗ್ರೂಪ್ ನೌಕರರು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಬಗ್ಗೆ ಜಿಲ್ಲೆಯ ಗುತ್ತಿಗೆದಾರನನ್ನು ಕೇಳಲು ಹೋದರೆ ಅವರು ಸಿಗುತ್ತಿಲ್ಲ. ಹೊರಗಿನವರಿಗೆ ಗುತ್ತಿಗೆ ನೀಡುತ್ತಿರುವುದರಿಂದ ಡಿ ಗ್ರೂಪ್ ನೌಕರರು ತಮ್ಮ ಮನಸ್ಸಿಗೆ ಬಂದಂತೆ ಕೆಲಸ ಮಾಡುತ್ತಿದ್ದು, ಸ್ವಚ್ಛತೆಯಲ್ಲಿ ಹಿಂದುಳಿಯಲು ಕಾರಣವಾಗಿದೆ ಎಂದರು.

ಸ್ಥಾಯಿ ಸಮಿತಿ ಸದಸ್ಯ ಚಂದ್ರಶೇಖರ್ ಬಿ ಎನ್ ಮಾತನಾಡಿ, ಸರ್ಕಾರಿ ಆಸ್ಪತ್ರೆಗೆ ಬಡವರು ಹೆಚ್ಚಾಗಿ ಬರುತ್ತಾರೆ. ಅವರಿಗೆ ಉತ್ತಮ ಸೇವೆ ಕೊಡಬೇಕು. ಆದರೆ ಆಸ್ಪತ್ರೆಯಲ್ಲಿ ಸಿಬ್ಬಂದಿ ವೈದ್ಯರ ನಡುವೆ ಕಂದಕವಿದ್ದು ಮನೆಯೊಂದು ಮೂರು ಬಾಗಿಲಾಗಿದೆ. ಸಾಮರಸ್ಯದ ಕೊರತೆಯಿಂದ ಆಸ್ಪತ್ರೆಯಲ್ಲಿ ಉತ್ತಮ ವಾತಾವರಣ ಇಲ್ಲವಾಗಿದೆ. ಆಸ್ಪತ್ರೆಯಲ್ಲಿ ಕರ್ತವ್ಯ ನಿರತರಾಗಿರುವ ನೌಕರರು ಸಮವಸ್ತ್ರವನ್ನು ಧರಿಸುತ್ತಿಲ್ಲ. ನೌಕರರಿಗೆ ನೋಟಿಸು ನೀಡಿದ್ದರೂ ಬೆಲೆ ನೀಡುತ್ತಿಲ್ಲ, ಯಾರು ನೌಕರರು ಯಾರೂ ರೋಗಿ ಎಂದು ಪತ್ತೆ ಮಾಡಲು ಕಷ್ಟವಾಗುತ್ತಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಇಲ್ಲವಾಗಿದ್ದು ಕಳೆದ ವಾರ ಸಂಸದರು ದಿಢೀರ್ ಭೇಟಿ ನೀಡಿ ಶೌಚಾಲಯ ದುರ್ನಾತ ಬಗ್ಗೆ ಕಿಡಿಕಾರಿದ್ದರು. ಕೆಲವು ನೌಕರರ ಕುಮ್ಕಕ್ಕಿನಿಂದ ಆಡಳಿತ ಅಧಿಕಾರಿಗಳ ಆದೇಶವನ್ನು ಕಡೆಗಣಿಸಲಾಗುತ್ತಿದೆ, ಪಟ್ಟಣದ ಬಹುತೇಕ ಹೋಟೆಲ್ಗಳಲ್ಲಿ ಇಡ್ಲಿ ಬೇಯಿಸಲು ಪ್ಲಾಸ್ಟಿಕ್ ಹಾಳೆಗಳನ್ನು ಬಳಸಲಾಗುತ್ತಿದೆ ಎಂದು ಸಮಸ್ಯೆ ಮುಂದಿಟ್ಟರು.

ಸ್ಥಾಯಿ ಸಮಿತಿ ಸದಸ್ಯರಾದ ದೇವರಾಜ್, ಹರ್ಷ, ಕೋಳಿ ರಘು, ರೇಣುಕಯ್ಯ ಮಾತನಾಡಿ, ತಾಲೂಕು ವೈದ್ಯಾಧಿಕಾರಿ ವಿಜಯವರು ಆ್ಯಂಬುಲೆನ್ಸ್ ಚಾಲಕನನ್ನೇ ತಮ್ಮ ಕಾರಿನ ಚಾಲನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಹಾಗಾದರೆ ಕಾರಿನ ಚಾಲಕನ ಸಂಬಳ ಎಲ್ಲಿಗೆ ಹೋಗುತ್ತಿದೆ ಎಂದು ಪ್ರಶ್ನಿಸಿದರು. ಒಂದಿಬ್ಬರು ನೌಕರರ ಕಪಿಮುಷ್ಠಿಯಲ್ಲಿ ಆಸ್ಪತ್ರೆಯು ನರಳುವಂತಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಜೊತೆ ಹೋಗಲು ನರ್ಸ್ ಮತ್ತು ಸ್ಕ್ಯಾನಿಂಗ್ ವೈದ್ಯರ ಕೊರತೆ ಇದೆ. ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಲ್ಯಾಬ್ ಇದ್ದರೂ ಖಾಸಗಿ ಲ್ಯಾಬ್‌ಗೆ ರೋಗಿಗಳನ್ನು ಕಳಿಸುತ್ತಾರೆ. ಔಷಧ ಕೊಠಡಿ ಸಂಜೆ ತನಕ ತೆರೆಯುವಂತೆ ಮಾಡಬೇಕು ಎಂದು ಶಾಸಕರ ಗಮನಕ್ಕೆ ತಂದರು.

ಶಾಸಕ ಎಚ್ ಕೆ ಸುರೇಶ್ ಮಾತನಾಡಿ, ವೈದ್ಯ ಸುಧಾ ಅವರು ವೈದ್ಯಾಧಿಕಾರಿಯಾಗಿ ಬಂದಮೇಲೆ ಆಸ್ಪತ್ರೆಯಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಆಸ್ಪತ್ರೆಯಲ್ಲಿ ನೌಕರರು ಕಡ್ಡಾಯ ಸಮವಸ್ತ್ರ ಧರಿಸಬೇಕು. ಒಂದು ವೇಳೆ ನಿರಾಕರಿಸಿದರೆ ಅಂಥವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ಜೊತೆ ದಾದಿಯನ್ನು ಕಳಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಹಾಗೂ ರಕ್ತ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು ಎಂದು ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ದೇವರಾಜ್, ಹರ್ಷ, ರಘು, ರೇಣುಕಯ್ಯ, ತಾಲೂಕು ವೈದ್ಯಾಧಿಕಾರಿ ವಿಜಯ್, ತಾಲೂಕು ಆಡಳಿತಾಧಿಕಾರಿ ಡಾ. ಸುಧಾ, ಆಸ್ಪತ್ರೆ ನೌಕರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ