ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಮಾತನಾಡಿ, ರೈಲ್ವೆ ಯೋಜನೆಗಾಗಿ ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಬೆಲೆ ನಿಗದಿಪಡಿಸುವಲ್ಲಿ ತೀವ್ರ ಅನ್ಯಾಯ ಎಸಗಲಾಗಿದೆ. ಕೆಲವು ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡಿ, ಇನ್ನು ಕೆಲವು ಗ್ರಾಮಗಳಿಗೆ ಕಡಿಮೆ ಹಣ ನಿಗಧಿ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲೂಕು ರೈತ ಸಂಘದ ನೇತೃತ್ವದಲ್ಲಿ ಆಲೂರು ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ತೋಟಗಾರಿಕಾ ಇಲಾಖೆಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಆಲೂರು
ಬೇಲೂರು-ಆಲೂರು ರೈಲ್ವೆ ಸಂಪರ್ಕ ಕಾಮಗಾರಿಗಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬೆಲೆ ನಿಗದಿಪಡಿಸುವಾಗ ತಾರತಮ್ಯ ನೀತಿ ಅನುಸರಿಸಲಾಗಿದೆ ಎಂದು ಆರೋಪಿಸಿ, ತಾಲೂಕು ರೈತ ಸಂಘದ ನೇತೃತ್ವದಲ್ಲಿ ಆಲೂರು ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ರೈತರು ತೋಟಗಾರಿಕಾ ಇಲಾಖೆಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸಿದರು.ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಧರ್ಮರಾಜ್ ಮಾತನಾಡಿ, ರೈಲ್ವೆ ಯೋಜನೆಗಾಗಿ ತಮ್ಮ ಜಮೀನುಗಳನ್ನು ಕಳೆದುಕೊಳ್ಳುತ್ತಿರುವ ರೈತರಿಗೆ ಬೆಲೆ ನಿಗದಿಪಡಿಸುವಲ್ಲಿ ತೀವ್ರ ಅನ್ಯಾಯ ಎಸಗಲಾಗಿದೆ. ಕೆಲವು ಗ್ರಾಮಗಳಿಗೆ ಹೆಚ್ಚಿನ ಪರಿಹಾರ ನೀಡಿ, ಇನ್ನು ಕೆಲವು ಗ್ರಾಮಗಳಿಗೆ ಕಡಿಮೆ ಹಣ ನಿಗಧಿ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದೇ ವೇಳೆ, ರೈತರು ತಾವು ಬೆಳೆದಿರುವ ತೋಟಗಾರಿಕಾ ಬೆಳೆಗಳಿಗೆ ಸೂಕ್ತ ಬೆಲೆ ನಿಗದಿಪಡಿಸುವಂತೆ ಕೋರಿದ್ದಕ್ಕೆ, ತೋಟಗಾರಿಕಾ ಇಲಾಖೆಯ ಅಧಿಕಾರಿಯೊಬ್ಬರು "ನೀವು ವಿಷ ಕುಡಿದು ಸಾಯಿರಿ " ಎಂದು ಅತ್ಯಂತ ಬೇಜವಾಬ್ದಾರಿಯಿಂದ ಮತ್ತು ಉಡಾಫೆಯಿಂದ ಮಾತನಾಡಿದ್ದಾರೆ. ರೈತರ ಕಷ್ಟಕ್ಕೆ ಸ್ಪಂದಿಸಬೇಕಾದ ಅಧಿಕಾರಿಯೇ ದಬ್ಬಾಳಿಕೆ ನಡೆಸಿ ಈ ರೀತಿ ಮಾತನಾಡಿರುವುದು ಖಂಡನೀಯ. ಕೂಡಲೇ ಅಂತಹ ಅಧಿಕಾರಿಯ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ರೈತರ ಭೂಮಿಗೆ ಸೂಕ್ತ ಮತ್ತು ನ್ಯಾಯಯುತ ಬೆಲೆ ನಿಗದಿಪಡಿಸಬೇಕು ಎಂದು ಅವರು ಒತ್ತಾಯಿಸಿದರು.ಪ್ರತಿಭಟನಾ ಸ್ಥಳಕ್ಕೆ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಯೋಗೇಶ್ ಆಗಮಿಸಿ, ರೈತರ ಮನವಿಯನ್ನು ಸ್ವೀಕರಿಸಿ, ನಿಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಶಾಂತಗೊಳಿಸಲಾಯಿತು.ಪ್ರತಿಭಟನೆಯಲ್ಲಿ ತಾಳೂರು ಗ್ರಾಮ ಪಂಚಾಯತಿ ಮಾಜಿ ಸದಸ್ಯ ಷಡಕ್ಷರಿ, ಹರೀಶ್ ಜಿ.ಜಿ. ಕೊಪ್ಪಲು, ಯೋಗೇಶ್ ಕುಪ್ಪೆಹೊಸಹಳ್ಳಿ, ನಂದೀಶ್ ತಾಳೂರು, ಜಿ.ಕೆ. ವೆಂಕಟೇಶ್, ಸೋಮಶೇಖರ್ ಗುಡ್ಡನಹಳ್ಳಿ, ತಾಳೂರು ಭೀಮಯ್ಯ, ದ್ಯಾವಯ್ಯ ಸೇರಿದಂತೆ ಹಲವು ರೈತರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.