ಕನ್ನಡಪ್ರಭ ವಾರ್ತೆ ರಾಮನಗರ
ಕಂದಾಯ, ಶಿಕ್ಷಣ ಹಾಗೂ ಇತರೆ ಇಲಾಖೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ್ದು, ಅರ್ಜಿಗಳ ವಿಲೇವಾರಿ ಕುರಿತು ಯಾರೂ ಕೂಡ ವಿಳಂಬ ಮಾಡಬಾರದು ಎಂದು ಶಾಸಕ ಇಕ್ಬಾಲ್ ಹುಸೇನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ತಾಲೂಕು ಆಡಳಿತದ ಸಭಾಂಗಣದಲ್ಲಿ ಅಹವಾಲು ಸ್ವೀಕಾರದ ಸಂದರ್ಭದಲ್ಲಿ ಬಂದ ಪ್ರತಿ ಅರ್ಜಿಗಳನ್ನು ಪರಿಶೀಲಿಸಿದ ಶಾಸಕರು, ಆ ಅರ್ಜಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ವಿಲೇವಾರಿ ಮಾಡುವಂತೆ ತಾಕೀತು ಮಾಡಿದರು.
ಅಹವಾಲು ಸ್ವೀಕಾರದಲ್ಲಿ 100ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ ಕೆಲವೊಂದನ್ನು ಶಾಸಕರು ಸ್ಥಳದಲ್ಲಿಯೇ ಪರಿಹರಿಸಿದರೆ, ಉಳಿದಂತೆ ಬಗರ್ ಹುಕುಂ ಸಾಗುವಳಿ ಚೀಟಿ, ಖಾತೆ, ಸ್ಮಶಾನ ಜಾಗ, ವಸತಿ ರಹಿತರ ನಿವೇಶನ, ಪಿಂಚಣಿ, ರೇಷನ್ ಕಾರ್ಡ್ ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ವಾರದೊಳಗೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕ್ಷೇತ್ರದಲ್ಲಿರುವ ಎಲ್ಲ ಗ್ರಾಮಗಳಿಗೂ ಸ್ಮಶಾನ, ವಸತಿ ರಹಿತರಿಗೆ ಮನೆ, ನಿವೇಶನ ನೀಡಲು ಜಾಗದ ಅವಶ್ಯಕತೆ ಇದೆ. ನಿಮ್ಮ ಕಂದಾಯ ವೃತ್ತಗಳಲ್ಲಿರುವ ಸರ್ಕಾರಿ ಜಮೀನು ಗುರುತಿಸುವಂತೆ ಹೇಳಿದ್ದೆ. ಆದರೆ, ಯಾರೂ ಆ ಕೆಲಸವನ್ನು ಮಾಡಿಲ್ಲ ಏಕೆ? ಅಧಿಕಾರಿಗಳು ನಮ್ಮ ವೇಗಕ್ಕೆ ತಕ್ಕಂತೆ ನಡೆಯಬೇಕು. ನೀವೆಲ್ಲರೂ ಆಸಕ್ತಿಯಿಂದ ಕೆಲಸ ಮಾಡಿ, ನಿಮಗೆ ಬೇಕಾದ ಸಹಕಾರ ಕೊಡುತ್ತೇನೆ. ಕೆಲಸ ಮಾಡಲು ಆಸಕ್ತಿ ಇಲ್ಲವೆಂದು ಅಧಿಕಾರಿಗಳು ಹೇಳಿದಲ್ಲಿ ಅವರಿಗೆ ಬೇಕಾದ ಕಡೆ ವರ್ಗಾವಣೆ ಮಾಡಿಸಿಕೊಡುತ್ತೇನೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಮನಗರ ಕ್ಷೇತ್ರಕ್ಕೆ 3 ಸಾವಿರ ಮನೆಗಳು ಮಂಜೂರಾಗಿದ್ದು, ಅವುಗಳನ್ನು ವಿತರಣೆ ಮಾಡಬೇಕಿದೆ. ನಿವೇಶನ ರಹಿತರ ಪಟ್ಟಿಯಲ್ಲಿ ಅರ್ಹರಾದವರಿಗೆ ಶೀಘ್ರ ನಿವೇಶನ ಹಂಚಬೇಕಿದೆ. ಆದ್ದರಿಂದ ನಿವೇಶನ ನೀಡಲು ಅನುಕೂಲವಿರುವ ಸರ್ಕಾರಿ ಭೂಮಿಯನ್ನು ಗುರುತಿಸಿ ತಿಳಿಸಿ, ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಿಕೊಡುವುದಾಗಿ ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಕುಟುಂಬಗಳು ಬೆಳೆಯುತ್ತಿದ್ದು, ಅವರ ಜೀವನಕ್ಕೆ ಆಧಾರ ಮಾಡಿಕೊಡಬೇಕಿದೆ. ಆದ್ದರಿಂದ ನೀವೆಲ್ಲರೂ ಸಹಕಾರ ನೀಡಿ ಸರ್ಕಾರಿ ಜಾಗ ಗುರುತಿಸಿ ಕೊಡಬೇಕು. ಜೊತೆಗೆ ಉಪ ಗ್ರಾಮಗಳಿಗೆ ಸ್ಮಶಾನ ಜಾಗ ಹಾಗೂ ಮೂಲ ಸೌಕರ್ಯ ಕಲ್ಪಿಸಬೇಕಿದ್ದು, ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಹೇಳಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಇಕ್ಬಾಲ್ ಹುಸೇನ್, ಪ್ರತಿ ಮಂಗಳವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಸಬಾ, ಕೈಲಾಂಚ ಹಾಗೂ ನಗರ ಪ್ರದೇಶ ಜನರ ಕಷ್ಟ - ಸುಖ ಆಲಿಸುತ್ತೇನೆ. 20-30 ವರ್ಷಗಳಿಂದ ಬಗರ್ ಹುಕುಂ ಸಾಗುವಳಿ ಚೀಟಿ ನೀಡಿಲ್ಲ, ಖಾತೆ ಮಾಡಿಕೊಟ್ಟಿಲ್ಲ. ರಸ್ತೆ, ಕೆರೆ ಒತ್ತುವರಿ ತೆರವು, ಸ್ಮಶಾನಕ್ಕೆ ಜಾಗ, ವಸತಿಗೆ ಜಾಗ ಇಲ್ಲದಿರುವ ಅರ್ಜಿಗಳು ಬಂದಿವೆ. ಕೆಲವೊಂದನ್ನು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಕೆಲವೊಂದು ಅರ್ಜಿಗಳನ್ನು ಸೂಕ್ತವಾಗಿ ಪರಿಶೀಲಿಸಿ ನಿರ್ಧಿಷ್ಟ ಗಡುವಿನೊಳಗೆ ವಿಲೇವಾರಿ ಮಾಡಲು ಸೂಚಿಸಿದ್ದೇನೆ ಎಂದರು.ಬೆಂಗಳೂರು - ಮೈಸೂರು ಹಳೆಯ ರಸ್ತೆಗೆ ಡಾಂಬರೀಕರಣ ಗುಣಮಟ್ಟದಿಂದ ಕೂಡಿದೆ. ಕಳಪೆ ಕಾಮಗಾರಿಯೆಂದು ಆರೋಪ ಮಾಡುತ್ತಿರುವ ನಾಯಕರು ಆ ರಸ್ತೆ ಬಗ್ಗೆ ಏಕೆ ಗಮನ ಹರಿಸಿರಲಿಲ್ಲ? ನಾವ್ಯಾರು ಅವರಂತೆ ನಿರೀಕ್ಷೆ ಇಟ್ಟುಕೊಂಡು ಕೆಲಸ ಮಾಡುವವರಲ್ಲ. ಅದರ ಅವಶ್ಯಕತೆಯೂ ಇಲ್ಲ. ನಗರದಲ್ಲಿನ ಮಣ್ಣು ರಸ್ತೆಗಳನ್ನು ಡಾಂಬರೀಕರಣ ಮಾಡುತ್ತೇವೆ ಎಂದು ಇಕ್ಬಾಲ್ ಹುಸೇನ್ ಹೇಳಿದರು.
ಉಪ ತಹಸೀಲ್ದಾರ್ ಶಂಕರ್ , ತಾಪಂ ಇಒ ಪ್ರದೀಪ್ , ಎಡಿಎಲ್ ಆರ್ ಸಚಿನ್ , ರಾಜಸ್ವ ನಿರೀಕ್ಷಕರಾದ ನಾಗರಾಜು, ರಾಜಶೇಖರ್ , ಪುಟ್ಟರಾಜು, ಚಂದ್ರಶೇಖರ್ , ಸರ್ವೇಯರ್ ಪ್ರಭಾಕರ್ , ಗ್ರಾಮ ಲೆಕ್ಕಾಧಿಕಾರಿಗಳಾದ ಮುಬಾರಕ್ , ಪರಮೇಶ್ , ಉಷಾ, ಮೋಹನ್ ಮತ್ತಿತರರು ಹಾಜರಿದ್ದರು.