ಕನ್ನಡಪ್ರಭ ವಾರ್ತೆ ಪಾಂಡವಪುರ
ಕಾರ್ಖಾನೆಯನ್ನು 40 ವರ್ಷ ಗುತ್ತಿಗೆಗೆ ಪಡೆದಿರುವ ನಿರಾಣಿ ಶುಗರ್ಸ್, ಪಿಎಸ್‌ಎಸ್‌ಕೆ ಕಾರ್ಮಿಕರನ್ನೂ ಕೆಲಸಕ್ಕೆ ತೆಗೆದುಕೊಂಡಿಲ್ಲ. ಈಗಾಗಲೇ 4 ವರ್ಷ ಕಬ್ಬು ನುರಿಸಿದೆ. 3 ವರ್ಷದಿಂದ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿದ್ದು, ಪ್ರಸಕ್ತ ವರ್ಷ ಮುಗಿದರೂ ತಮಗೆ ರಜಾ ನಗದೀಕರಣ ಮತ್ತು ಶಾಸನ ಬದ್ಧ ಬೋನಸ್ ನೀಡಿಲ್ಲ ಎಂದು ಕಾರ್ಮಿಕರು ದೂರಿದರು.
ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿದ್ದು, ರಜಾ ನಗದೀಕರಣ ಮತ್ತು ಬೋನಸ್ ಹಣ ಬಂದಲ್ಲಿ ತಮ್ಮ ಮಕ್ಕಳ ಶಾಲಾ ದಾಖಲಾತಿಗೆ ಅನುಕೂಲವಾಗುತ್ತದೆ. ಆರೋಗ್ಯ ವೆಚ್ಚ ಸರಿದೂಗಿಸಲು ಸಾಧ್ಯವಾಗುತ್ತದೆ. ಈ ಬಗ್ಗೆ ಜನವರಿ ತಿಂಗಿನಿಂದಲೇ ತಾವು ಮನವಿ ಸಲ್ಲಿಸಿದ್ದು, ಇಲ್ಲಿವರೆಗೂ ಕಾರ್ಖಾನೆ ಆಡಳಿತ ಮಂಡಳಿ ತಮಗೆ ಹಣ ನೀಡಿಲ್ಲ ಎಂದು ಕಾರ್ಮಿಕರು ಅಳಲು ತೋಡಿಕೊಂಡರು.ಕಾರ್ಮಿಕರ ವೇತನದಲ್ಲಿ ಪಿಎಫ್‌ಹಣ ಕಟಾವು ಮಾಡಲಾಗುತ್ತಿದೆ. ಆದರೆ, ಅದರ ಅಕೌಂಟ್ ನಂಬರ್ ನೀಡುತ್ತಿಲ್ಲ. ಎರಡು ದಿನದಿಂದ ನಾವು ಕಾರ್ಖಾನೆಗೆ ಬಂದಿದ್ದರೂ ಹಾಜರಿ ನೀಡಿಲ್ಲ. ಕ್ಯಾಂಟಿನ್ ಸೌಲಭ್ಯ ತೀರಾ ಕಳಪೆ, ಸಮಯಕ್ಕೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ನೋವು ಹೇಳಿದರು.
ಈ ವೇಳೆ ಸಿಜಿಎಂ ಸಂಜೀವ್ ಕುಮಾರ್ ಮಾತನಾಡಿ, ರಜಾ ನಗದೀಕರಣ ಹಣವನ್ನು ಕಾರ್ಮಿಕರು ನಿವೃತ್ತಿಯಾದಾಗ ನೀಡಲು ಮತ್ತು ಶಾಸನ ಬದ್ಧ ಬೋನಸ್ ಹಣವನ್ನು ದೀಪಾವಳಿಯಂದು ಕೊಡಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದರು. ಅಲ್ಲದೇ, ಕಾರ್ಮಿಕರಲ್ಲಿ ಶಿಸ್ತನ ಕೊರತೆ ಇದೆ. ಭಾನುವಾರದಂದು ನಾನು ಕಾರ್ಖಾನೆ ಬಂದಾಗ ನನ್ನನ್ನು ಕಾರ್ಮಿಕರು ಗೇಟ್‌ನಲ್ಲಿ ತಡೆದರು ಎಂದು ಸಿಜಿಎಂ ಕಾರ್ಮಿಕರ ವಿರುದ್ಧ ದೂರಿದಾಗ, ಪಿಎಸ್‌ಎಸ್‌ಕೆ ಮಾಜಿ ಉಪಾಧ್ಯಕ್ಷರೂ ಆದ ರೈತಸಂಘದ ತಾಲ್ಲೂಕು ಅಧ್ಯಕ್ಷ ಪಿ.ನಾಗರಾಜು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ರೈತ ಮುಖಂಡರ ಆಕ್ರೋಶಕ್ಕೆ ಮಣಿದ ಸಿಜಿಎಂ ಸಂಜೀವ್ ಕುಮಾರ್, ಈ ಬಗ್ಗೆ ಕೂಡಲೇ ಆಡಳಿತ ಮಂಡಳಿಗೆ ವಿಷಯ ತಿಳಿಸಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.