ಭಟ್ಕಳ: ತಾಲೂಕು ಆಡಳಿತದಿಂದ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಅಫ್ಸಾ ಖಾಜೀಯಾ ಹುಜೈಫಾ ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸದೇ ಅಗೌರವ ತೋರಿರುವುದಕ್ಕೆ ಆಸರಕೇರಿ ಭುವನೇಶ್ವರಿ ಕನ್ನಡ ಸಂಘದಿಂದ ಪ್ರತಿಭಟನೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ತಾಲೂಕು ಆಡಳಿತದ ಅಧಿಕಾರಿಗಳ ಸಮ್ಮುಖದಲ್ಲೇ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸದೇ ಅಗೌರವ ತೋರಿದ್ದಾರೆ. ತಮ್ಮ ಕಣ್ಣ ಮುಂದೆಯೇ ಕನ್ನಡಾಂಬೆಗೆ ಅವಮಾನ ಆದರೂ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಕನ್ನಡ ರಾಜ್ಯೋತ್ಸವ ದಿನದಂದೇ ಕನ್ನಡಾಂಬೆಗೆ ಅಗೌರವ ತೋರಿದ ಜಾಲಿ ಪಪಂ ಅಧ್ಯಕ್ಷರು ಕನ್ನಡಿಗರ ಕ್ಷಮೆ ಯಾಚಿಸಬೇಕು ಮತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಇನ್ನು ಮುಂದೆ ಯಾವುದೇ ಕಾರಣಕ್ಕೂ ಕನ್ನಡಾಂಬೆಗೆ ಅಗೌರವ ತೋರುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದ ಅವರು, ಜಾಲಿ ಪಪಂ ಅಧ್ಯಕ್ಷರು ಕನ್ನಡಿಗರ ಕ್ಷಮೆಯಾಚಿಸದೇ ಇದ್ದಲ್ಲಿ ಜಾಲಿ ಪಪಂ ಮುಂದೆ ಕನ್ನಡ ಸಂಘಟನೆಗಳ ಒಟ್ಟಾಗಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಲಿದೆ ಎಂದರು.
ಹಿರಿಯ ಮುಖಂಡ ಕೃಷ್ಣ ನಾಯ್ಕ ಆಸರಕೇರಿ, ಶ್ರೀಧರ ನಾಯ್ಕ, ವೆಂಕಟೇಶ ನಾಯ್ಕ, ಶ್ರೀಕಾಂತ ನಾಯ್ಕ ಮುಂತಾದವರು ಮಾತನಾಡಿ, ಕನ್ನಡಾಂಬೆಗೆ ಜಾಲಿ ಪಪಂ ಅಧ್ಯಕ್ಷರು ಅಗೌರವ ತೋರಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅವರು ಕ್ಷಮೆ ಯಾಚಿಸಬೇಕು ಮತ್ತು ತಾಲೂಕು ಆಡಳಿತದ ಸಮ್ಮುಖದಲ್ಲೇ ಕನ್ನಡಾಂಬೆಗೆ ಅವರು ಅಗೌರವ ತೋರಿದ್ದರಿಂದ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸಹಾಯಕ ಆಯುಕ್ತರಾದ ಡಾ. ನಯನಾ ಮನವಿ ಸ್ವೀಕರಿಸಿದರು. ಪ್ರಮುಖರಾದ ಲಕ್ಷ್ಮೀನಾರಾಯಣ ನಾಯ್ಕ, ಭವಾನಿಶಂಕರ ನಾಯ್ಕ, ಶ್ರೀನಿವಾಸ ನಾಯ್ಕ, ದೀಪಕ ನಾಯ್ಕ, ಈಶ್ವರ ನಾಯ್ಕ, ನಾಗೇಂದ್ರ ನಾಯ್ಕ, ರಮೇಶ ನಾಯ್ಕ, ದಯಾನಂದ ನಾಯ್ಕ ಮುಂತಾದವರಿದ್ದರು.
ಜಾಲಿ ಪಪಂ ಅಧ್ಯಕ್ಷರ ನಡೆಗೆ ಕಸಾಪ ಖಂಡನೆಭಟ್ಕಳ: ಕನ್ನಡ ರಾಜ್ಯೋತ್ಸವದ ಆಚರಣೆ ಸಂದರ್ಭದಲ್ಲಿ ಜನಪ್ರತಿನಿಧಿಯಾಗಿ ಕನ್ನಡಾಂಬೆಗೆ ಪುಷ್ಪಾರ್ಚನೆ ಮಾಡಲು ಹಿಂದೇಟು ಹಾಕಿದ ಜಾಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷರ ವರ್ತನೆಯನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಗಂಗಾಧರ ನಾಯ್ಕ ತೀವ್ರವಾಗಿ ಖಂಡಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿದ ಅವರು, ಸಾರ್ವಜನಿಕ ಸಮಾರಂಭವಾದ ರಾಷ್ಟ್ರೀಯ ದಿನಾಚರಣೆಗಳ ವೇದಿಕೆಯಲ್ಲಿ ಅವರ ಈ ವರ್ತನೆ ಸ್ವೀಕಾರಾರ್ಹವಲ್ಲ. ನಾವೆಲ್ಲರೂ ಭಾರತವನ್ನು, ಕರ್ನಾಟಕವನ್ನು ಬರಿಯ ನೆಲವಾಗಿ ಕಾಣುವುದಿಲ್ಲ. ಹೊತ್ತ ತಾಯಿಯಂತೆ ಕಾಣುತ್ತೇವೆ. ಭುವನೇಶ್ವರಿಯ ಅರ್ಚನೆ ನಮ್ಮ ತಾಯಿಯನ್ನು ಪೂಜಿಸಿದಂತೆ. ಕನ್ನಡ ಮಾತೆಗೆ ಪುಷ್ಪಾರ್ಚನೆ ಮಾಡಿದಲ್ಲಿ ಅದು ಅವರ ಧರ್ಮಬಾಹಿರ ಆಚರಣೆಯಾಗುತ್ತದೆ ಎಂದು ಅವರು ಯಾವ ಸಂದರ್ಭದಲ್ಲಿಯೂ ಭಾವಿಸಬಾರದು. ನಾಡದೇವಿಯನ್ನು ಪೂಜಿಸುವುದು ಸಮಾಜ ಒಪ್ಪಿತವಾದ ಸಂಸ್ಕಾರ ಎಂದಿದ್ದಾರೆ.