ಹಿಂದೂಗಳಿಂದಲೇ ಸ್ವಧರ್ಮ ಅಗೌರವ ದುರಂತ: ಸ್ವಾಮೀಜಿ

KannadaprabhaNewsNetwork |  
Published : Sep 02, 2024, 02:04 AM IST
ವಿಶ್ವ ಹಿಂದೂ ಪರಿಷದ್‌ನ ಸ್ಥಾಪನಾ ದಿನ ಹಾಗೂ ಷಷ್ಟಿ ಪೂರ್ತಿ ಕಾರ್ಯಕ್ರಮ | Kannada Prabha

ಸಾರಾಂಶ

ವಿಶ್ವದಲ್ಲಿಯೇ ಶ್ರೇಷ್ಠ ಎನಿಸಿಕೊಂಡಿರುವ ಹಿಂದೂ ಸಂಸ್ಕಾರ ಪದ್ಧತಿಯನ್ನು ಹಿಂದೂಗಳೇ ಅಗೌರವಿಸುತ್ತಿರುವುದು ದುರಂತ ಎಂದು ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ವಿಶ್ವದಲ್ಲಿಯೇ ಶ್ರೇಷ್ಠ ಎನಿಸಿಕೊಂಡಿರುವ ಹಿಂದೂ ಸಂಸ್ಕಾರ ಪದ್ಧತಿಯನ್ನು ಹಿಂದುಗಳೇ ಅಗೌರವಿಸುತ್ತಿರುವುದು ನಮ್ಮ ದುರಂತ ಎಂದು ಇಲ್ಲಿನ ವಿರಕ್ತ ಮಠದ ಮಠಾಧೀಶರಾದ ಶ್ರೀ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಕೊಡವ ಸಮಾಜದಲ್ಲಿ ವಿಶ್ವ ಹಿಂದೂ ಪರಿಷತ್‌ ಸೋಮವಾರಪೇಟೆ ಪ್ರಖಂಡದ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಹಿಂದೂ ಪರಿಷತ್‌ನ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ನಮ್ಮ ಧರ್ಮ ಮತ್ತು ಆಚರಣೆಗಳನ್ನು ನಮ್ಮವರೇ ತೆಗಳುವುದರಿಂದ ನಮ್ಮ ದೇಶದಲ್ಲಿಯೇ ಹಿಂದೂ ಧರ್ಮಕ್ಕೆ ಧಕ್ಕೆ ಬರುತ್ತಿದೆ. ಇಂತಹ ಕಾರ್ಯಗಳು ಮುಂದುವರಿಯುತ್ತಾ ಹೋದರೆ ಹಿಂದುತ್ವದ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡುವ ಅನಿವಾರ್ಯತೆ ಬರಲಿದೆ. ಈ ವರೆಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿ.ಹಿಂ.ಪ. ಮಠ ಮಾನ್ಯಗಳು ಹಿಂದೂ ಧರ್ಮವನ್ನು ರಕ್ಷಿಸುತ್ತಾ ಬರುತ್ತಿದೆ. ಮುಂದೆ ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಎಲ್ಲರೂ ಸಂಘಿಗಳಾಗುವ ಮೂಲಕ ಹಿಂದೂ ಧರ್ಮ ಹಾಗೂ ಸಂಸ್ಕಾರವನ್ನು ಗೌರವಿಸುವಂತಾಗಬೇಕು ಎಂದರು.

ದಿಕ್ಸೂಚಿ ಭಾಷಣ ಮಾಡಿದ ವಿ.ಹಿಂ.ಪ. ಜಿಲ್ಲಾ ಬೌದ್ಧಿಕ್ ಪ್ರಮುಖ್ ಚಿ.ನಾ. ಸೋಮೇಶ್, ೧೯೬೪ರ ಆ.೨೯ರಂದು ಮುಂಬೈನಲ್ಲಿ ವಿ.ಹಿಂ.ಪ. ಸ್ಥಾಪನೆಯಾಯಿತು. ಇದರ ಸ್ಥಾಪನೆಗೆ ಬಾಬಾ ಅಮ್ಟೆಯವರು ಮೂಲ ಕಾರಣ ಪುರುಷರಾಗಿದ್ದರು. ಅಂದಿನಿಂದ ಸಮಾಜದಲ್ಲಿನ ಹಲವಾರು ಸಮಸ್ಯೆಗಳಿಗೆ ತಕ್ಕ ಉತ್ತರ ನೀಡುತ್ತಾ, ಹಿಂದೂ ಸಮಾಜವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡುತ್ತಾ ಬರುತ್ತಿದೆ ಎಂದರು.

ಮೀನುಗಾರಿಕಾ ಇಲಾಖೆಯ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಶ್ರೀಕೃಷ್ಣ ಹುಟ್ಟಿದ ದಿನವೇ ವಿ.ಹಿಂ.ಪರಿಷತ್ ಸ್ಥಾಪನೆಯಾಯಿತು. ಶ್ರೀಕೃಷ್ಣ ಪರಮಾತ್ಮನಿಗೆ ದೊಡ್ಡ ಆರಾಧನೆ ಮಾಡದೆ ಕೇವಲ ಪ್ರೀತಿಸಿ, ಭಜಿಸಿದರೆ ಸಾಕು ಆತನ ಕೃಪೆಗೆ ಪಾತ್ರರಾಗಬಹುದು. ಈ ದಿನ ಮಕ್ಕಳಿಗೆ ಶ್ರೀಕೃಷ್ಣನ ವೇಷ ಹಾಕುವ ಮೂಲಕ ನಾವು ಪರಮಾತ್ಮನನ್ನು ಕಾಣುತ್ತಿದ್ದೇವೆ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿ.ಹಿಂ.ಪ. ಸೋಮವಾರಪೇಟೆ ಪ್ರಖಂಡದ ಅಧ್ಯಕ್ಷ ಎ.ಎಸ್. ಮಲ್ಲೇಶ್‌ ಪರಿಷತ್‌ ಬೆಳೆದು ಬಂದ ಹಾದಿಯನ್ನು ವಿವರಿಸಿದರು. ವೇದಿಕೆಯಲ್ಲಿ ಚೌಡ್ಲು ಪ್ರಾ.ಕೃ.ಪ.ಸ. ಸಂಘದ ನಿವೃತ್ತ ನೌಕರ ಎಚ್.ಎಚ್. ಹೂವಯ್ಯ ಇದ್ದರು.

ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪ್ರಾರ್ಥಿಸಿದರು. ಜಿಲ್ಲಾ ಸತ್ಸಂಗ ಪ್ರಮುಖ್ ಪವಿತ್ರಾ ಶೇಷಾದ್ರಿ ನಿರೂಪಿಸಿ, ಪ್ರಖಂಡದ ದುರ್ಗಾವಾಹಿನಿ ಪ್ರಮುಖ್ ಭಾನುಮತಿ ಆದರ್ಶ್ ಸ್ವಾಗತಿಸಿ, ವಿಧಿ ಪ್ರಕೋಷ್ಠದ ಸಂಚಾಲಕ ವಕೀಲ ಹೆಮಂತ್ ವಂದಿಸಿದರು.

ರಾಧಾ- ಕೃಷ್ಣ ವೇಷ: ೧ರಿಂದ ೭ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಶ್ರೀಕೃಷ್ಣ ರಾಧೆಯರ ಛಧ್ಮವೇಷ ಸ್ಪರ್ಧೆಯನ್ನು ಆಯೋಜಿಸಿ ಬಹುಮಾನ ಹಾಗೂ ಪ್ರಶಸ್ತಿಪತ್ರಗಳನ್ನು ನೀಡಲಾಯಿತು. ಕಾರ್ಯಕ್ರಮದಲ್ಲಿ ವಿ.ಹಿಂ.ಪ.ನ ಜಿಲ್ಲಾಧ್ಯಕ್ಷ ಸಿ.ಕೆ. ಬೋಪಣ್ಣ, ಜಿಲ್ಲಾ ಸಮಿತಿಯ ಪರಮೇಶ್ ಕೂತಿ, ತಾಲೂಕು ಸಮಿತಿಯ ಸಿ.ಎಸ್. ನಾಗರಾಜ್, ಮಾಜಿ ಸಚಿವ ಅಪ್ಪಚ್ಚು ರಂಜನ್ ಹಾಗೂ ಇತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''