ಹಾವೇರಿ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಆರ್‌ಬಿಐ ಮಾರ್ಗದರ್ಶನದಡಿಯಲ್ಲಿ ಕೆಲಸ ಮಾಡುತ್ತಿವೆ. ನಿಜವಾದ ಗ್ರಾಹಕರಿಗೆ ಯಾವುದೇ ರೀತಿ ತೊಂದರೆಯುಂಟಾಗದಂತೆ ಕೋಡ್ ಆಪ್ ಕಂಡಕ್ಟ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದರೆ ಕೆಲವು ಮಧ್ಯವರ್ತಿಗಳು ಗ್ರಾಹಕರಲ್ಲಿ ಗೊಂದಲ ಮೂಡಿಸಿ ಮೈಕ್ರೋ ಫೈನಾನ್ಸ್ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮುಖ್ಯಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಈ ಸಂಸ್ಥೆಗಳು ರಾಷ್ಟ್ರೀಕೃತ ಬ್ಯಾಂಕಗಳಿಂದ ಸೌಲಭ್ಯ ವಂಚಿತ ಬಡಕುಟುಂಬಗಳಿಗೆ ಯಾವುದೇ ಅಡಮಾನ ತೆಗೆದುಕೊಳ್ಳದೆ, ವಿಳಾಸಕೊಸ್ಕರ ಕೇವಲ ಒಂದು ಆಧಾರ್ ಕಾರ್ಡ್ ತೆಗೆದುಕೊಂಡು ಒಂದು ಗುಂಪಿನ ಆಧಾರದ ಮೇಲೆ ಸಾಲ ಮಂಜೂರಾತಿ ಮಾಡುತ್ತಿವೆ. ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಗ್ರಾಹಕರ ಮನೆಗೆ ಹೋಗಿ ಅವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಹೈ ಮಾರ್ಕ್ ಪರಿಶೀಲನೆ ಮಾಡಿ ಗ್ರಾಹಕರು ಸಾಲವನ್ನು ತೆಗೆದುಕೊಳ್ಳಲು ಎಷ್ಟು ಅರ್ಹರು? ಎಷ್ಟು ಮೊತ್ತದ ಸಾಲ ನೀಡಬಹುದು ಎಂಬುದನ್ನು ಪರಿಶೀಲಿಸಿ ಗ್ರಾಹಕರಿಗೆ ಹೆಚ್ಚು ಹೊರೆಯಾಗದಂತೆ ಸಾಲವನ್ನು ಅಧಿಕೃತವಾಗಿ ಮಂಜೂರು ಮಾಡುತ್ತಿವೆ. ಆದರೆ ಇದನ್ನೆಲ್ಲಾ ಮಧ್ಯವರ್ತಿಗಳು ಕೆಲ ಆಮಿಷಕ್ಕೆ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ನೈಜ ಗ್ರಾಹಕರಿಗೆ ತೊಂದರೆಯಾಗುತ್ತಿದೆ. ನಿಜವಾದ ಗ್ರಾಹಕರು ಈ ಸಾಲದ ಸದುಪಯೋಗ ಪಡಿಸಿಕೊಂಡು ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ ಸಾಕಷ್ಟು ಕುಟುಂಬಗಳಿವೆ ಹಾಗೂ ರಾಷ್ಟ್ರಿಕೃತ ಬ್ಯಾಂಕ್‌ಗಳು ಮಾಡದ ಕೆಲಸವನ್ನು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮಾಡುತ್ತಿವೆ. ಈ ಕೂಡಲೇ ಮಧ್ಯವರ್ತಿಗಳು ತೊಂದರೆ ಕೊಡುತ್ತಿರುವುದನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯ ಮೈಕ್ರೋ ಫೈನಾನ್ಸ್‌ಗಳನ್ನು ಲೀಡ್ ಮಾಡುವ ನವಚೇತನ ಮೈಕ್ರೋ ಫೈನಾನ್ಸ್ ಮುಖ್ಯಸ್ಥ ಕೊಟ್ರಗೌಡ ಸಿ, ತಿಪ್ಪೇಸ್ವಾಮಿ ಸಿ.ಎಲ್. ಆಂಡ್ ಟಿ. ಫೈನಾನ್ಸ್‌ನ ಗಂಗಾಧರ, ಗ್ರಾಮೀಣ ಕೂಟ ಫೈನಾನ್ಸ್‌ನ ವಿಶ್ವನಾಥ್, ಚೈತನ್ಯ ಫೈನಾನ್ಸ್‌ನ ಮುತ್ತಣ್ಣ, ಫ್ಯೂಷನ್ ಫೈನಾನ್ಸನ ಝಾಕೀರ್, ಇಕ್ವಿಟಾಸ್ ನದಾಫ್ ಸೇರಿದಂತೆ ಜಿಲ್ಲೆಯ ಎಲ್ಲಾ ಮೈಕ್ರೋಫೈನಾನ್ಸ್ ಸಿಬ್ಬಂದಿ ಇದ್ದರು.