ಚಿತ್ರನಟಿ ಉಮಾಶ್ರೀ ಯಕ್ಷಗಾನ ವೇಷದ ಬಗ್ಗೆ ಚಲನಚಿತ್ರ ಪ್ರೇಮಿಗಳು ಹಾಗೂ ಜನರಿಂದ ಪ್ರಶಂಸೆ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಕಲಾವಿದರು ಹಾಗೂ ಅಪ್ಪಟ ಯಕ್ಷಗಾನ ಪ್ರಿಯರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಕಾರವಾರ: ಚಿತ್ರನಟಿ ಉಮಾಶ್ರೀ ಯಕ್ಷಗಾನ ವೇಷದ ಬಗ್ಗೆ ಚಲನಚಿತ್ರ ಪ್ರೇಮಿಗಳು ಹಾಗೂ ಜನರಿಂದ ಪ್ರಶಂಸೆ ವ್ಯಕ್ತವಾದ ಬೆನ್ನಲ್ಲೇ ಹಿರಿಯ ಕಲಾವಿದರು ಹಾಗೂ ಅಪ್ಪಟ ಯಕ್ಷಗಾನ ಪ್ರಿಯರಿಂದ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಉಮಾಶ್ರೀ ಈಚೆಗೆ ಹೊನ್ನಾವರದಲ್ಲಿ ಪಟ್ಟಾಭಿಷೇಕ ಪ್ರಸಂಗದಲ್ಲಿ ನಿರ್ವಹಿಸಿದ ಮಂಥರೆಯ ಪಾತ್ರ ಚರ್ಚೆಗೆ ಗ್ರಾಸವಾಗಿದೆ.ಚಿತ್ರರಂಗ ಹಾಗೂ ನಾಟಕದಲ್ಲಿ ಉಮಾಶ್ರೀ ಅವರ ಕಲೆಯ ಬಗ್ಗೆ ಎಲ್ಲರೂ ಗೌರವ ವ್ಯಕ್ತಪಡಿಸಿದ್ದಾರೆ. ಆದರೆ, ಯಕ್ಷಗಾನದಲ್ಲಿ ಅವರನ್ನು ಕರೆತಂದು ಪಾತ್ರ ಮಾಡಿಸಬೇಕಿತ್ತೇ? ಎಂದು ಪ್ರಶ್ನಿಸಿದ್ದಾರೆ. ಜತೆಗೆ ಮುಂದೆ ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಸರದಿ ಎಂದು ಒಬ್ಬರು ಕುಟುಕಿದ್ದಾರೆ.
ಕೆರೆಮನೆ ಶಿವಾನಂದ ಹೆಗಡೆ, ಉಮಾಶ್ರೀ ಬಗ್ಗೆ ಗೌರವ ಇದೆ. ಆದರೆ ಸಿನಿಮಾ ಇಮೇಜೇ ಮುಖ್ಯವಾಗಿ ಆ ದಿನದ ಯಾವ ಕಲಾವಿದರ ಬಗ್ಗೆ ಚಕಾರ ಎತ್ತಿಲ್ಲ. ಪಟ್ಟಾಭಿಷೇಕದಂತಹ ಪ್ರಸಂಗದಲ್ಲಿ ಮಂಥರೆಯೇ ಕೇಂದ್ರವಾಗಿ ಬದಲಾದಂತೆ ಕಾಣುತ್ತದೆ. ಅನ್ಯ ಪ್ರಕಾರದ ಕಲಾವಿದರನ್ನು ನಮ್ಮ ರಂಗಭೂಮಿಗೆ ತರುವ ಸರಿಯಾದ ಕ್ರಮ ಇದಲ್ಲ. ಒಂದೇ ಒಂದು ಯಕ್ಷಗಾನದ ವೇಷಭೂಷಣ ಕೂಡ ತೊಡಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಉಮಾಶ್ರೀಯಂತಹ ಹಿರಿಯ ನಟರನ್ನು ಆಟಕ್ಕೆ ಕರೆಯುವ ಹಿಂದಿನ ಉದ್ದೇಶ ಗಲ್ಲಾಪೆಟ್ಟಿಗೆಯ ಕಲೆಕ್ಷನ್. ಇದು ಅಪಾಯಕಾರಿ. ಹಣ ಮಾಡುವ ಏಕೈಕ ಧೋರಣೆಯ ಕೆಲ ಸಂಘಟಕರು ದಾವೂದ್ ಇಬ್ರಾಹಿಂನನ್ನು ಕರೆಸಿ ಭಸ್ಮಾಸುರನ ವೇಷ ಮಾಡಿಸುತ್ತಾರೆ ಎಂದು ಗೋಪಾಲಕೃಷ್ಣ ಭಾಗವತ್ ಕುಟುಕಿದ್ದಾರೆ.ಮಹಾಬಲೇಶ್ವರ ಎಸ್. ಭಟ್, ಉಮಾಶ್ರೀ ಮನರಂಜನೆ ನೀಡಿದ್ದಂತೂ ನಿಜ. ಯಕ್ಷಗಾನಕ್ಕಿರುವ ಅದರದ್ದೇ ಆದ ಶೈಲಿ ಮಾತ್ರ ಪಾತ್ರದಲ್ಲಿ ತುಂಬಿಲ್ಲ. ನಾಟಕದ ಪಾತ್ರದಂತೆ ಮೂಡಿಬಂದಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಉಮಾಶ್ರೀ ಯಕ್ಷಗಾನ ಪಾತ್ರ ಚಿತ್ರನಟಿ ಎನ್ನುವ ಹಿನ್ನೆಲೆಯಲ್ಲಿ ರಂಜನೆ ನೀಡಿರಬಹುದು. ಆದರೆ ಯಕ್ಷಗಾನೀಯವಾಗಿ ಮೂಡಿಬಂದಿಲ್ಲ. ನಾಟಕೀಯತೆ ತುಂಬಿತ್ತು. ಯಕ್ಷಗಾನಕ್ಕೆ ಇಂತಹ ಗಿಮಿಕ್‌ಗಳು ಬೇಕಾಗಿರಲಿಲ್ಲ ಎನ್ನುವುದು ಯಕ್ಷಗಾನದ ಅಪ್ಪಟ ಅಭಿಮಾನಿಗಳು, ಕಲಾವಿದರ ಅಂಬೋಣವಾಗಿದೆ.