ಕನ್ನಡಪ್ರಭ ವಾರ್ತೆ ಕುಶಾಲನಗರ
ಪುರಸಭೆಯ ನೂತನ ಕಟ್ಟಡ ನಿರ್ಮಾಣ ಸಂದರ್ಭ 1.25 ಕೋಟಿ ರು. ವೆಚ್ಚದ ಬೃಹತ್ ಮೊತ್ತದ ಕಾಮಗಾರಿಗೆ ಅಧ್ಯಕ್ಷರು ಘಟನೋತ್ತರ ಅನುಮತಿ ನೀಡಿದ್ದು, ಈ ಬಗ್ಗೆ ಮತ್ತು ಕುಶಾಲನಗರ ಪಟ್ಟಣ ವ್ಯಾಪ್ತಿಯ ರಸ್ತೆಗಳ ಗುಂಡಿ ಮುಚ್ಚುವ 16.5 ಲಕ್ಷ ರು. ಗಳ ಕಾಮಗಾರಿಗೆ ಸಭೆ ಅನುಮೋದನೆ ಪಡೆದಿಲ್ಲ ಎನ್ನುವ ವಿಷಯ ಚರ್ಚೆಗೆ ಗ್ರಾಸವಾಯಿತು.
ಸದಸ್ಯರಾದ ಅಮೃತರಾಜ್ ಮಾತನಾಡಿ, ತುರ್ತು ಸಂದರ್ಭ ಅಧ್ಯಕ್ಷರು, ಸದಸ್ಯರ ಗಮನಕ್ಕೆ ತಾರದೆ ಕೆಲವು ಮಿತಿಯಲ್ಲಿ ಮಾತ್ರ ಕೆಲಸ ಮಾಡಬಹುದು. ಆದರೆ ವಾರ್ಡ್ ಸದಸ್ಯರ ಹಕ್ಕನ್ನು ಕಸಿಯುವುದು ಸರಿಯಲ್ಲ ಎಂದರು.ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಹಾಗೂ ಕಾಮಗಾರಿ ಅನುಮೋದನೆ ನೀಡುವ ನಿಟ್ಟಿನಲ್ಲಿ ಚರ್ಚಿಸದೆ ಅಧ್ಯಕ್ಷರು ತೀರ್ಮಾನ ಕೈಗೊಂಡಿರುವುದು ಸರಿಯಲ್ಲ ಎಂದು ವಿಪಕ್ಷ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣ ವ್ಯಾಪ್ತಿಯ ವಾರ್ಡ್‌ಗಳ ರಸ್ತೆಯ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಬಗ್ಗೆ ಹಿಂದಿನ ಎಂಜಿನಿಯರ್ ಮತ್ತು ಮುಖ್ಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ ಬಗ್ಗೆ ಸಭೆಗೆ ದಾಖಲೆಗಳನ್ನು ಒದಗಿಸಿದರೂ ಸದಸ್ಯರು ತೃಪ್ತರಾಗದೆ ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಬೇಕು. ಈ ಸಂದರ್ಭ ಎನ್‌ಡಿಆರ್‌ಎಫ್ ಮೂಲಕ ಕೂಡ ಕಾಮಗಾರಿ ನಡೆದಿದೆ. ಕಾಮಗಾರಿಯ ಬಗ್ಗೆ ಗೊಂದಲ ಇದೆ. ಈ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಣಯ ಕೈಗೊಳ್ಳುವ ಬಗ್ಗೆ ಸಭೆ ಒಮ್ಮತದ ನಿರ್ಧಾರ ಕೈಗೊಂಡಿತು.ಮಧ್ಯವರ್ತಿ ಹಾವಳಿ ಕಡಿವಾಣಕ್ಕೆ ಆಗ್ರಹ:ಕುಶಾಲನಗರ ಪುರಸಭೆ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ತೀವ್ರ ಚರ್ಚೆ ನಡೆಯಿತು. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸದಸ್ಯರು ಆಗ್ರಹಿಸಿದರು.
ಈ ಕುರಿತು ಸಾರ್ವಜನಿಕರಿಂದಲೂ ದೂರುಗಳು ಬಂದಿವೆ. ಬೆಳಗ್ಗೆಯಿಂದ ಸಂಜೆ ತನಕ ಮಧ್ಯವರ್ತಿಗಳು ಪುರಸಭೆ ಕಚೇರಿಯಲ್ಲಿ ನಿರಂತರ ಓಡಾಟ ಮಾಡುತ್ತಿರುವುದು ಸಾಮಾನ್ಯ ಚಿತ್ರಣವಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಒತ್ತಾಯಿಸಿದರು.
ಸದಸ್ಯ ಪ್ರಮೋದ್ ಮುತ್ತಪ್ಪ ಮಾತನಾಡಿ, ಸಾರ್ವಜನಿಕರ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಅನಗತ್ಯವಾಗಿ ಅವರನ್ನು ಅಲೆದಾಡಿಸಬಾರದು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.ಈ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಾಧಿಕಾರಿ ಗಿರೀಶ್, ಕಚೇರಿಯಲ್ಲಿ ಪ್ರಸ್ತುತ 41 ಫೈಲುಗಳು ಬಾಕಿ ಇವೆ. ಕಳೆದ ತಿಂಗಳು 70 ಹಾಗೂ ಮೇನಲ್ಲಿ 80 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.ಪಟ್ಟಣದ 3ನೇ ಬ್ಲಾಕ್, ಬಿ.ಎಂ.ರಸ್ತೆಯಲ್ಲಿರುವ ವೆಂಕಟೇಶ್ವರ ಚಿತ್ರ ಮಂದಿರವನ್ನು ಬಾಡಿಗೆ ನೀಡುವ ಕುರಿತು ಚರ್ಚೆ ನಡೆಯಿತು. ಸದಸ್ಯ ಕಲಿಮುಲ್ಲಾ, ಪ್ರಮೋದ್ ಮಾತನಾಡಿ, ಈ ಕುರಿತು ಕಾನೂನು ಸಲಹೆಗಾರದಿಂದ ಸಲಹೆ ಪಡೆದು ಬಾಡಿಗೆ ನೀಡುವಂತೆ ತಿಳಿಸಿದರು.ಸದಸ್ಯ ಬಿ.ಜೈವರ್ಧನ್ ಮಾತನಾಡಿ, ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಈ ವಿಚಾರ ಅಜೆಂಡಾದಲ್ಲಿ ಸೇರಿಸುವಂತೆ ಸಲಹೆ ನೀಡಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಬಾಬು ಜಗಜೀವನ್‌ರಾಮ್ ಭವನ ನಿರ್ಮಾಣಕ್ಕೆ ಜಾಗ ಕಾಯ್ದಿರಿಸಲು ಕೋರಿ ಬಂದಿರುವ ಪತ್ರದ ಬಗ್ಗೆ ಸದಸ್ಯ ಜೈವರ್ಧನ್ ಗಮನ ಸೆಳೆದರು. ಭವನಕ್ಕೆ 2 ಕೋಟಿ ಅನುದಾನ ನೀಡುತ್ತಿದ್ದು, ಇದನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯ ಶಿವಶಂಕರ್ ಕಾಳಮ್ಮ ಕಾಲೋನಿ ಬಳಿ 30 ಸೆಂಟ್ ಜಾಗ ಇದೆ. ಇದು ಬಾಬು ಜಗಜೀವನ್ ರಾಮ್ ಯುವಕ ಸಂಘದ ಹೆಸರಿನಲ್ಲಿ ಇದೆ. ಈ ಜಾಗವನ್ನು ಭವನಕ್ಕೆ ಬಿಟ್ಟು ಕೊಡಲಾಗುವುದು. ಈ ಬಗ್ಗೆ ಅಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬೇಕು ಎಂದರು.ಮುಳ್ಳುಸೋಗೆ ವ್ಯಾಪ್ತಿಯಲ್ಲಿ ಹೆಚ್ಚಿನ ಕಂದಾಯ ವಸೂಲಿ ಆಗುತ್ತಿದ್ದರೂ ಪುರಸಭೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಗ್ರಾಮಕ್ಕೆ ಬರುತ್ತಿಲ್ಲ. ಮುಂದಿನ ಸಾಲಿನಿಂದ ಹೆಚ್ಚಿನ ಅನುದಾನ ನೀಡಿ ಗ್ರಾಮದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಸದಸ್ಯ ಎಂ.ವಿ.ಹರೀಶ್, ಪದ್ಮಾವತಿ ಒತ್ತಾಯಿಸಿದರು.* ಪೌರಕಾರ್ಮಿಕರಿಗೆ ಉಪಹಾರ ಸಾಕಾಗುತ್ತಿಲ್ಲ:
ಈ ಬಗ್ಗೆ ಮಾತನಾಡಿದ ಹಿರಿಯ ಆರೋಗ್ಯ ನಿರೀಕ್ಷಕ ಉದಯಕುಮಾರ್, ಸರ್ಕಾರ ಉಪಹಾರಕ್ಕೆ 35 ರು. ನಿಗದಿ ಮಾಡಿದೆ. ಜೊತೆಗೆ ಮೊಟ್ಟೆಯನ್ನು ನೀಡಲಾಗುತ್ತಿದೆ ಎಂದರು.