ಇಂದು ಹಿಂದು ಮಹಾಸಭಾ ಗಣಪತಿ ವಿಸರ್ಜನೆ

KannadaprabhaNewsNetwork | Published : Sep 17, 2024 12:54 AM

ಸಾರಾಂಶ

ಶಿವಮೊಗ್ಗ ಎಂಆರ್‌ಎಸ್‌ ವೃತ್ತದಲ್ಲಿ ಹಿಂದು ಮಹಾಸಭಾ ಗಣಪತಿ ವಿಸರ್ಜನೆ ಅಂಗವಾಗಿ ನಿರ್ಮಿಸಿರುವ ಶಿವಾಜಿ ಮಹಾರಾಜರ ಪ್ರತಿಕೃತಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನಗರದ ಶಿವಪ್ಪನಾಯಕ ವೃತ್ತದ ಬಳಿಯ ಗಾಂಧಿ ಬಜಾರ್ ಮುಖ್ಯ ದ್ವಾರದಲ್ಲಿ ಕಾಶಿ ವಿಶ್ವನಾಥ ಮಂದಿರದ ಅಲಂಕಾರ, ಅಮೀರ್ ಅಹಮ್ಮದ್ ವೃತ್ತದಲ್ಲಿ ಆಯೋಧ್ಯೆಯ ಪ್ರತಿಕೃತಿ ಮುಂದೆ ಹನುಮನನ್ನು ತಬ್ಬಿಕೊಂಡು ನಿಂತಿರುವ ರಾಮ, ದೈವಜ್ಞ ವೃತ್ತದಲ್ಲಿ ರೆಕ್ಕಿ ಬಿಚ್ಚಿರುವ ಗರುಡ, ಎಂ.ಆರ್.ಎಸ್.ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಕೃತಿ, ನಗರದ ನೆಹರು ರಸ್ತೆಯಲ್ಲಿ ಗಣಪತಿಯ ವಿವಿಧ ನಾಮವಳಿ, ಅಲಂಕೃತ ಪ್ಲೆಕ್ಸ್‌ಗಳು, ಬಹುತೇಕ ನಗರವೇ ಕೇಸರಿ ಮಯ. ಇದು ಈ ಬಾರಿ ಹಿಂದು ಮಹಾಸಭಾ ಗಣಪತಿ ವಿಸರ್ಜನೆಗೆ ಸಿದ್ದಗೊಂಡಿರುವ ಶಿವಮೊಗ್ಗ ನಗರದ ಚಿತ್ರಣ.

ಸದಾ ಹಸಿರಿನಿಂದ ಕಂಗೊಳಿಸುವ ಶಿವಮೊಗ್ಗ ಈಗ ಸಂಪೂರ್ಣ ಕೇಸರಿಮಯವಾಗಿದೆ. ಶಿವಮೊಗ್ಗದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಿನ್ನೆಲೆಯಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳು ಸಂಪೂರ್ಣ ಕೇಸರಿಮಯವಾಗಿದೆ. ವಿಘ್ನ ನಿವಾರಕನ ಮೆರವಣಿಗೆ ಶಾಂತಿಯುತವಾಗಿ ನಡೆಯಲಿ ಎಂಬ ನಿಟ್ಟಿನಲ್ಲಿ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಕುಟುಂಬ ಸಮೇತರಾಗಿ ಜನರು ಬಂದು ನೋಡಲಿ ಎಂಬ ನಿಟ್ಟಿನಲ್ಲಿ ಶಿವಮೊಗ್ಗವನ್ನು ಅಲಂಕಾರ ಮಾಡಲಾಗಿದೆ.

ಅದರಲ್ಲೂ ಶಿವಪ್ಪ ನಾಯಕ ಪ್ರತಿಮೆ ಮುಂಭಾಗದಲ್ಲಿ ನಿರ್ಮಾಣ ಮಾಡಿರುವ ಕಾಶಿ ವಿಶ್ವನಾಥನ ಮಹಾದ್ವಾರ ಕಣ್ಣಿಗೆ ಕಟ್ಟುವಂತೆ ರಾರಾಜಿಸುತ್ತಿದೆ.

*ಗಣೇಶ ವಿಸರ್ಜನೆಗೆ ಭರ್ಜರಿ ತಯಾರಿ:

ಇತ್ತೀಚಿಗಷ್ಟೇ ಮಲೆನಾಡು ಜಿಲ್ಲೆ, ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಶಿವಮೊಗ್ಗ ಕೋಮು ದಳ್ಳುರಿಯಿಂದ ನಲುಗಿ ಹೋಗಿತ್ತು. ಪದೇ ಪದೇ ಅಶಾಂತಿಯಿಂದ ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ಕದಡುವಂತಾಗಿತ್ತು. ಶಿವಮೊಗ್ಗವೀಗ ಸಂಪೂರ್ಣ ಕೇಸರಿಮಯವಾಗಿದೆ. ಎಲ್ಲೆಲ್ಲೂ, ಬೀದಿ, ಬೀದಿಗಳಲ್ಲಿ, ವೃತ್ತ, ವೃತ್ತಗಳಲ್ಲಿ ಸಂಪೂರ್ಣ ಕೇಸರಿಮಯವಾಗಿ ಕಂಗೊಳಿಸುತ್ತಿದೆ. ಸೆ.17ರಂದು ವಿಸರ್ಜನೆ ಮಾಡಲಾಗುತ್ತಿರುವ ಹಿಂದೂ ಮಹಾಸಭಾ ಗಣಪತಿಗಾಗಿ ಈ ಅಲಂಕಾರ ಮಾಡಲಾಗಿದೆ.

ನಗರದ ಗಾಂಧಿ ಬಜಾರ್‌ ನಲ್ಲಿ ನಿರ್ಮಿಸಲಾಗಿರುವ ಕಾಶಿ ವಿಶ್ವನಾಥ ಮಂದಿರ ಕಣ್ಮನ ಸೆಳೆಯುತ್ತಿದೆ. ಮಂದಿರದ ಹಿಂಬದಿಯಲ್ಲಿ ಕಾಶಿಯ ರಕ್ಷಕ ಶ್ರೀ ಕಾಲ ಭೈರವೇಶ್ವರನ ಪರಿಗೆ ಎಲ್ಲರೂ ಮಾರು ಆಗಿದ್ದಾರೆ. ಮಹದ್ವಾರದ ಮುಂದೆ ಜನರು ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ ಸಾಗುವ ಮಾರ್ಗಗಳು ಸಂಪೂರ್ಣ ಕೇಸರಿಮಯವಾಗಿದ್ದು, ಬಂಟಿಂಗ್ಸ್, ಬ್ಯಾನರ್‌ಗಳು ರಾರಾಜಿಸುತ್ತಿವೆ.

*ಭಕ್ತರಿಗೆ ಊಟದ ವ್ಯವಸ್ಥೆ: ಗಣೇಶ ವಿಸರ್ಜನೆ ಮೆರವಣಿಗೆಯುದ್ದಕ್ಕೂ ಬರುವ ಭಕ್ತರಿಗೆ, ಕಾರ್ಯಕರ್ತರಿಗೆ ಊಟ-ಉಪಹಾರ, ಸಿಹಿ, ಪಾನಿಯಗಳ ವ್ಯವಸ್ಥೆಗಳು ಸಹ ವಿವಿಧ ಸಂಘ-ಸಂಸ್ಥೆಗಳು ಮಾಡುತ್ತಿವೆ.

*ನಗರದಾದ್ಯಂತ ತೀವ್ರ ಖಾಕಿ ಭದ್ರತೆ:

ಜಿಲ್ಲಾ ಪೊಲೀಸ್ ವತಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 4ಸಾವಿರಕ್ಕೂ ಹೆಚ್ಚು ಪೊಲೀಸರು ರಾಜ್ಯದ ವಿವಿಧೆಡೆಯಿಂದ ಆಗಮಿಸಲಿದ್ದಾರೆ. ಮೂರು ಆರ್‌ಪಿಎಫ್ ಬೆಟಾಲಿಯನ್ ಮತ್ತು ಕೆಎಸ್‌ಆರ್‌ಪಿ ತುಕುಡಿ, ಡಿಎಆರ್ ಪೊಲೀಸ್ ಆಗಮಿಸಿದ್ದು, ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನೂರಾರು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೋಪಿ ವೃತ್ತ ಸೇರಿದಂತೆ ಅನೇಕ ಪ್ರಮುಖ ವೃತ್ತಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದ್ದು, ಜನಪ್ರತಿನಿಧಿಗಳು ಕೂಡ ಈ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

*ಕೆ.ಎಸ್.ಈಶ್ವರಪ್ಪ ಆತಂಕ: ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊರಗಿನಿಂದ ಬರುವ ದುಷ್ಟ ಶಕ್ತಿಗಳು ಗಲಾಟೆ ಎಬ್ಬಿಸುವ ಸಾಧ್ಯತೆ ಎಂಬ ಅನುಮಾನವನ್ನು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವ್ಯಕ್ತಪಡಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಲ್ಲಾ ರೀತಿಯಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೊಲೀಸ್‌ ಅಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ವಾಹನ ಮಾರ್ಗ ಬದಲಾವಣೆಯ ತಾತ್ಕಲಿಕ ಅಧಿಸೂಚನೆ: ಶಿವಮೊಗ್ಗ ನಗರದ ಹಿಂದೂ ಮಹಾಸಭಾ ಗಣಪತಿಯನ್ನು ಸೆ.17ರಂದು ವಿಸರ್ಜನೆ ಮಾಡುವುದರಿಂದ ಮೆರವಣಿಗೆ ಸಂದರ್ಭದಲ್ಲಿ ಸಂಚಾರ ಸುಗಮಗೊಳಿಸುವ ಸಲುವಾಗಿ ಈ ಕೆಳಕಂಡಂತೆ ವಾಹನ ಸಂಚಾರ ನಿಷೇಧ, ನಿಲುಗಡೆ ಹಾಗೂ ವಾಹನಗಳ ಮಾರ್ಗ ಬದಲಾವಣೆ ಮಾಡಲು ತಾತ್ಕಾಲಿಕ ಅಧಿಸೂಚನೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೊರಡಿಸಿದ್ದಾರೆ.

ಸೆ.17 ರಂದು ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯು ಭೀಮೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ ಎಸ್‌ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯ ರಸ್ತೆ, ಎಸ್.ಎನ್.ವೃತ್ತ, ಬಿ.ಎಚ್.ರಸ್ತೆ, ಎ.ಎ.ವೃತ್ತ, ನೆಹರು ರಸ್ತೆ, ಗೋಪಿ ಸರ್ಕಲ್, ದುರ್ಗಿಗುಡಿ ಮಾರ್ಗವಾಗಿ ಮಹಾವೀರ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ ಮಾರ್ಗವಾಗಿ ಭೀಮೇಶ್ವರ ದೇವಸ್ಥಾನದ ಹತ್ತಿರ ತುಂಗಾ ನದಿಯಲ್ಲಿ ವಿಸರ್ಜನೆ ಮಾಡಲಾಗುವುದು.

ಬೆಂಗಳೂರು ಭದ್ರಾವತಿ, ಎನ್‌ಆರ್‌ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಮತ್ತು ಸಿಟಿ ಬಸ್‌ಗಳು, ಕಾರುಗಳು ಎಂಆರ್‌ಎಸ್ ವೃತ್ತದಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಚಿತ್ರದುರ್ಗ, ಹೊಳೆಹೊನ್ನೂರಿನಿಂದ ಬರುವ ಮತ್ತು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಬಸ್‌ಗಳು ಎಂಆರ್‌ಎಸ್ ವೃತ್ತ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಹೊನ್ನಾಳಿ, ಹರಿಹರ, ದಾವಣಗೆರೆಯಿಂದ ಬರುವ ಮತ್ತು ಹೋಗುವ ಎಲ್ಲಾ ಭಾರೀ ವಾಹನಗಳು ಮತ್ತು ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಶಂಕರಮಠ ಸರ್ಕಲ್, ಹೊಳೆಹೊನ್ನೂರು ಸರ್ಕಲ್, ವಿದ್ಯಾನಗರ, ಎಂಆರ್‌ಎಸ್ ವೃತ್ತ ಮಾರ್ಗವಾಗಿ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.

ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಹೊನ್ನಾಳಿ, ಶಿಕಾರಿಪುರ, ಸೊರಬ, ಹರಿಹರ, ದಾವಣಗೆರೆ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರೀ ಸರಕು ವಾಹನಗಳು ಸಾಗರ ರಸ್ತೆ ಮುಖಾಂತರವಾಗಿ ಹೆಲಿಪ್ಯಾಡ್ ಸರ್ಕಲ್, ಆಲ್ಕೊಳ ಸರ್ಕಲ್, ಪೊಲೀಸ್ ಚೌಕಿ, ರಾಜ್ ಕುಮಾರ್ ಸರ್ಕಲ್, ಬೊಮ್ಮನಕಟ್ಟೆ ಮುಖಾಂತರವಾಗಿ ಸವಳಂಗ ರಸ್ತೆಗೆ ಹೋಗುವುದು.

ಕೆಎಸ್ಆರ್‌ಟಿಸಿ ಮತ್ತು ಖಾಸಗಿ ಬಸ್ ನಿಲ್ದಾಣದಿಂದ ಬೆಂಗಳೂರು, ಭದ್ರಾವತಿ ಕಡೆಗೆ ಹೋಗುವ ಎಲ್ಲಾ ವಾಹನಗಳು ಬೈಪಾಸ್ ರಸ್ತೆಯ ಮುಖಾಂತರ ಎಂಆರ್‌ಎಸ್ ವೃತ್ತದ ಕಡೆಗೆ ಹೋಗುವುದು.

ಶಿಕಾರಿಪುರ, ಸೊರಬ, ಅನವಟ್ಟಿ ಕಡೆಯಿಂದ ಶಿವಮೊಗ್ಗಕ್ಕೆ ಬರುವ ಮತ್ತು ಹೊರ ಹೋಗುವ ಎಲ್ಲಾ ಬಸ್‌ಗಳು ಮತ್ತು ಭಾರಿ ವಾಹನಗಳು ಉಷಾ ನರ್ಸಿಂಗ್ ಹೋಂ ಸರ್ಕಲ್, ಲಕ್ಷ್ಮೀ ಟಾಕೀಸ್ ಸರ್ಕಲ್, ಪೋಲಿಸ್ ಚೌಕಿ, ಆಲ್ಕೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಯಲ್ಲಿ ಸಂಚರಿಸುವುದು.ವಾಹನಗಳ ಸಂಚಾರ, ನಿಲುಗಡೆ ನಿಷೇಧ ಮಾಡಲಾಗಿದೆ.

ಈ ಎಲ್ಲಾ ಮಾರ್ಗ ಬದಲಾವಣೆಗಳು ಪೊಲೀಸ್ ವಾಹನಗಳು, ಅತಿಗಣ್ಯ ವ್ಯಕ್ತಿಗಳ ವಾಹನಗಳು, ಆಂಬುಲೆನ್ಸ್ ಹಾಗೂ ಮೂಲ ಭೂತ ಸೌಕರ್ಯ ಒದಗಿಸುವ ವಾಹನಗಳನ್ನು ಅನುಕೂಲಕ್ಕೆ ತಕ್ಕಂತೆ ಹೊರತುಪಡಿಸಲಾಗಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಸನ್ನನಾಥ ಶ್ರೀಗಳಿಂದ ಮೆರವಣಿಗೆಗೆ ಚಾಲನೆ

ಮಂಗಳವಾರ ಬೆಳಗ್ಗೆ 9.30ಕ್ಕೆ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆ ಭೀಮೇಶ್ವರ ದೇವಸ್ಥಾನದಿಂದ ಆರಂಭಗೊಳಲಿದೆ. ಕೋಟೆ ಮಾರಿಕಾಂಬಾ ವೃತ್ತದ ಬಳಿ, ಬೆಕ್ಕಿನ ಕಲ್ಮಠ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಪ್ರಸನ್ನನಾಥ ಶ್ರೀಗಳು ಗಣಪತಿಗೆ ಆರತಿ ಮಾಡುವುದರೊಂದಿಗೆ ಚಾಲನೆ ದೊರೆಯಲಿದೆ.

ಈಗಾಗಲೇ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್, ಮಹಾನಗರ ಪಾಲಿಕೆ ಮತ್ತು ಹಿಂದೂ ಮಹಾಮಂಡಳಿ ಸಕಲ ಸಿದ್ಧತೆ ಮಾಡಿದ್ದು, ಹಲವಾರು ಸಂಘ ಸಂಸ್ಥೆಗಳು ಗಣಪತಿಗೆ ಬೃಹತ್ ಹಾರಗಳನ್ನು ಅರ್ಪಿಸಲು ಸಿದ್ಧತೆ ನಡೆಸಿವೆ.

ಮೆರವಣಿಗೆ ಮಾರ್ಗದಲ್ಲಿ ವಾಹನ ನಿಲುಗಡೆ ನಷೇಧ

ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಮೆರವಣಿಗೆಯ ಮಾರ್ಗವಾದ ಭೀಮೇಶ್ವರ ದೇವಸ್ಥಾನದಿಂದ ಎಸ್‌ಪಿಎಂ ಮುಖ್ಯ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗಾಂಧಿ ಬಜಾರ್ ಮುಖ್ಯರಸ್ತೆ, ಎಸ್.ಎನ್ ವೃತ್ತ, ಬಿ.ಎಚ್ ರಸ್ತೆ, ಎ.ಎ.ಸರ್ಕಲ್, ನೆಹರು ರಸ್ತೆ, ಗೋಪಿ ವೃತ್ತ, ದುರ್ಗಿಗುಡಿ, ಮಹಾವೀರ್ ಸರ್ಕಲ್, ಡಿ.ವಿ.ಎಸ್ ಸರ್ಕಲ್, ಕಾನ್ವೆಂಟ್ ರಸ್ತೆ, ಕೋಟೆ ರಸ್ತೆ, ಭೀಮೇಶ್ವರ ದೇವಸ್ಥಾನವರೆಗಿನ ಮೆರವಣಿಗೆ ಮಾರ್ಗದಲ್ಲಿ ಮತ್ತು ಮಾರ್ಗದ ಸುತ್ತಮುತ್ತ 100 ಮೀಟರ್ ಅಂತರದಲ್ಲಿ ಎಲ್ಲಾ ವಾಹನಗಳ ಸಂಚಾರ ಮತ್ತು ವಾಹನ ನಿಲುಗಡೆ ನಿಷೇಧಿಸಲಾಗಿದೆ.

Share this article