ಚಿಕ್ಕಪ್ಪನಹಳ್ಳಿ ಷಣ್ಮುಖ
ಬಸವ ಕೇಂದ್ರ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಉದ್ದೇಶಿಸಿದ್ದ ಬಸವ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಬಿಡುಗಡೆಯಾದ ಅನುದಾನ ಬಳಕೆ ವಿಚಾರದಲ್ಲಿ ಸಂಕಷ್ಟ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುವುದು ಬಹುತೇಕ ಖಚಿತವಾಗಿದೆ.
ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನೊಳಗೊಂಡ ಐವರ ಸಮಿತಿ ಮಂಗಳವಾರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಸಲ್ಲಿಸಿದ ಪರಿಶೀಲನಾ ವರದಿಯಲ್ಲಿ ದಾಖಲಾದ ವಿವರಗಳು ಅನುದಾನ ದುರ್ಬಳಕೆ, ಅಪವ್ಯಯದಂತಹ ಕ್ರಿಮಿನಲ್ ಸ್ವರೂಪದ ಅಪರಾಧದ ಸುಳಿವು ನೀಡಿದೆ.ಕಾಮಗಾರಿಯ ಭೌತಿಕ ಹಾಗೂ ತಾಂತ್ರಿಕ ಅಂಶಗಳ ಪರಿಗಣನೆ ಆಧಾರದಲ್ಲಿ ತನಿಖೆ ನಡೆಸುವ ಉಸಾಬರಿಗೆ ಹೋಗದ ಸಮಿತಿ ಅಚ್ಚುಕಟ್ಟಾಗಿ ಪರಿಶೀಲನೆ ನಡೆಸಿ ಮೇಲು ನೋಟಕ್ಕೆ ಕಂಡು ಬಂದ ಸಂಗತಿಗಳ ದಾಖಲು ಮಾಡಿದೆ. ಬಸವ ಪುತ್ಥಳಿಗೆ ಸಂಬಂಧಿಸಿದಂತೆ ಕನ್ನಡಪ್ರಭ ಈ ಹಿಂದೆ ಸರಣಿ ವರದಿಯಲ್ಲಿ ವ್ಯಕ್ತಪಡಿಸಿದ ಎಲ್ಲ ಶಂಕೆಗಳು ವರದಿಯಲ್ಲಿ ನಮೂದಾಗಿವೆ.
375 ಅಡಿ ಎತ್ತರದ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಬೇಕಾದ 280.20 ಕೋಟಿ ರು. ಅಂದಾಜು ವೆಚ್ಚಕ್ಕೆ ಸರ್ಕಾರ ನೀಡಿದ 35 ಕೋಟಿ ರು. ಹೊರತಾಗಿ ಬೇರೆ ಅನುದಾನ ಕ್ರೋಡೀಕರಣಕ್ಕೆ ಮುರುಘಾಮಠದ ಬಳಿ ಯೋಜನೆಗಳಿಲ್ಲ. ಪ್ರಯತ್ನ ಕೂಡಾ ಮಾಡಲಾಗಿಲ್ಲ. ಉಳಿಕೆ 240.20 ಕೋಟಿ ರು. ಅನುದಾನ ಲಭ್ಯತೆ ಮಠದ ಬಳಿ ಇಲ್ಲ. ಸರ್ಕಾರದ ಅನುದಾನ ಬ್ಯಾಕ್ ಎಂಡ್ ಪಾವತಿಗಾಗಿ ಕಾಯ್ದಿರಿಸದೆ ಆರಂಭಕ್ಕೆ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಾಗಿ ಸರ್ಕಾರದ ಅನುದಾನ (ಫಲಪ್ರದವಾಗದ) ಎಂದು ಪರಿಗಣಿಸಬಹುದಾಗಿದೆ ಎಂಬ ಅಂಶವ ವರದಿಯಲ್ಲಿ ಪ್ರಧಾನವಾಗಿ ಬಿಂಬಿಸಲಾಗಿದೆ.