ಯುಕೆಪಿ ಸಂತ್ರಸ್ತರಿಗೆ ತ್ವರಿತವಾಗಿ ಹಕ್ಕುಪತ್ರ ವಿತರಿಸಿ: ಸಚಿವ ಕಾಶಪ್ಪನವರ

KannadaprabhaNewsNetwork |  
Published : Oct 28, 2026, 02:45 AM IST
(ಫೋಟೊಬಿಕೆಟಿ6, ಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.) | Kannada Prabha

ಸಾರಾಂಶ

ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಹಂತ-1 ಮತ್ತು 2ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಕಾರ್ಯ ತ್ವರಿತಗೊಳಿಸಿ, ಸಂತ್ರಸ್ತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಷ್ಣಾ ಮೇಲ್ದಂಡೆ ಯೋಜನೆಯಡಿ ಹಂತ-1 ಮತ್ತು 2ರಲ್ಲಿ ಮುಳುಗಡೆ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಸಂತ್ರಸ್ತರಿಗೆ ಹಕ್ಕುಪತ್ರ ವಿತರಣೆ ಕಾರ್ಯ ತ್ವರಿತಗೊಳಿಸಿ, ಸಂತ್ರಸ್ತರು ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನವನಗರದ ಯುಕೆಪಿಯ ಸಂಗಮ ಸಭಾಭವನದಲ್ಲಿ ಮಂಗಳವಾರ ನಡೆದ ಯುಕೆಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುಕೆಪಿಯ ಮೂರನೇ ಹಂತಕ್ಕೆ ಬಂದಿದ್ದೇವೆ. ಆದರೆ ಹಂತ-1 ಮತ್ತು 2ರ ಕೆಲಸಗಳೇ ಇನ್ನೂ ಸಂಪೂರ್ಣಗೊಂಡಿಲ್ಲ. ಸಭೆಗಳಲ್ಲಿ ಕೇವಲ ಹೇಳಿಕೆ ನೀಡುವುದರಿಂದ ಪ್ರಯೋಜನವಿಲ್ಲ. ಕೆಲಸಗಳು ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪುನರ್ವಸತಿ ಕೇಂದ್ರಗಳನ್ನು ಅಭಿವೃದ್ಧಿಪಡಿಸಿ ಹಸ್ತಾಂತರಕ್ಕೆ ವಿಧಾನ ಪರಿಷತ್ ಶಾಸಕ ಪಿ.ಎಚ್.ಪೂಜಾರ ಮತ್ತು ಹಣಮಂತ ನಿರಾಣಿ ಸಚಿವರಲ್ಲಿ ಮನವಿ ಮಾಡಿದರು.

84 ಗ್ರಾಮಗಳ ಪುನರ್ವಸತಿ ಕೇಂದ್ರಗಳನ್ನು ಸಂಪೂರ್ಣವಾಗಿ ಹಸ್ತಾಂತರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಪುನರ್ವಸತಿ ಕೇಂದ್ರಗಳಲ್ಲಿ ಸ್ಮಶಾನ, ಮಠ-ಮಂದಿರ ಹಾಗೂ ಮಸೀದಿಗಳಿಗೆ ಅಗತ್ಯ ಜಾಗವನ್ನು ಗುರುತಿಸಿ ಒದಗಿಸಬೇಕು. ಈ ಕಾರ್ಯಕ್ಕಾಗಿ ಅಧಿಕಾರಿಗಳ ತಂಡ ರಚಿಸಿ, ತ್ವರಿತವಾಗಿ ಸ್ಥಳ ಪರಿಶೀಲನೆ ನಡೆಸುವಂತೆ ಸಚಿವರು ಸೂಚಿಸಿದರು. ಪುನರ್ವಸತಿ ಕೇಂದ್ರಗಳಲ್ಲಿ ಅಗತ್ಯ ಮೂಲಭೂತ ಅಭಿವೃದ್ಧಿ ಕಾಮಗಾರಿಗಳನ್ನು ತುರ್ತಾಗಿ ಪೂರ್ಣಗೊಳಿಸಿ, ಪಂಚಾಯತಿಗಳಿಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಡುಗಡ್ಡೆ ಪ್ರದೇಶದ ಸಂತ್ರಸ್ತರ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಮುಳುಗಡೆ ಸಂತ್ರಸ್ತರ ಅಹವಾಲುಗಳನ್ನು ಸಹ ಸಚಿವರು ಆಲಿಸಿದರು.

ಜಿಪಂ ಸಿಇಒ ಹಾಗೂ ಯುಕೆಪಿ ಮಹಾವ್ಯವಸ್ಥಾಪಕ ಗಜಾನನ ಬಾಲೆ ಮಾತನಾಡಿ, ಯುಕೆಪಿ ಹಂತ-3ರಡಿ ಆಲಮಟ್ಟಿ ಜಲಾಶಯದ ಸಂಗ್ರಹಣೆ ಮಟ್ಟವನ್ನು 519.60 ಮೀನಿಂದ 524.256 ಮೀಗೆ ಹೆಚ್ಚಿಸುವುದರಿಂದ ಜಲಾಶಯದ ಹಿನ್ನೀರಿನಲ್ಲಿ 184 ಗ್ರಾಮಗಳ ಮುಳುಗಡೆ ಪ್ರದೇಶದ ಜಮೀನುಗಳ ಭೂಸ್ವಾಧೀನ, 20 ಗ್ರಾಮಗಳ ಪುನರ್ವಸತಿ ಹಾಗೂ 9 ಉಪಯೋಜನೆಗಳ ಕಾಲುವೆ ಜಾಲಗಳ ನಿರ್ವಹಣೆಗಾಗಿ ಒಟ್ಟಾರೆ ₹1.34 ಲಕ್ಷ ಎಕರೆ ಜಮೀನನ್ನು ಭೂಸ್ವಾಧೀನ ಕಾಯ್ದೆಯಡಿ ಸ್ವಾಧೀನಪಡಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಮುಳುಗಡೆಯಾಗಲಿರುವ 75,563 ಎಕರೆ ಜಮೀನಿನ ಪೈಕಿ 5,275 ಎಕರೆ ಭೂಮಿಯನ್ನು ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ 70,288 ಎಕರೆ ಭೂಮಿ ಭೂಸ್ವಾಧೀನಕ್ಕೆ ಬಾಕಿ ಇದೆ. ಭೂಸ್ವಾಧೀನಗೊಂಡ 5,275 ಎಕರೆ ಜಮೀನಿಗೆ ಪರಿಹಾರ ನೀಡಲಾಗಿದೆ. ಉಳಿದ ಭೂಮಿಗೆ ಕಂಸ್ಟಂಟ್ ಅವಾರ್ಡ್‌ ಆದ ನಂತರ ಪರಿಹಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು. ಮುಳುಗಡೆಯಾಗಲಿರುವ 20 ಗ್ರಾಮಗಳಿಗೆ 24 ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಒಟ್ಟು 4,633 ಎಕರೆ ಜಮೀನು ಅಗತ್ಯವಿದ್ದು, ಈ ಪೈಕಿ 1,846 ಎಕರೆ ಭೂಮಿಯನ್ನು ಈಗಾಗಲೇ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಕೆಬಿಜೆಎನ್‌ಎಲ್‌ ಮಹಾವ್ಯವಸ್ಥಾಪಕರು ತಿಳಿಸಿದರು.

ಮುಳುಗಡೆಯಾಗಲಿರುವ ಬಾಗಲಕೋಟೆ ಪಟ್ಟಣದ 11 ವಾರ್ಡಗಳ ಪುನರ್ವಸತಿ ಕೇಂದ್ರಗಳಿಗಾಗಿ 1,834 ಎಕರೆ ಭೂಸ್ವಾಧಿನ ಅಗತ್ಯವಿದ್ದು, ಈ ಪೈಕಿ 1,546 ಎಕರೆ ಭೂಮಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಯುಕೆಪಿ ಯೋಜನೆಗೆ ಈಗಾಗಲೇ ನಿಗದಿಪಡಿಸಿರುವ ₹3,000 ಕೋಟಿ ಅನುದಾನದಲ್ಲಿ 1,023 ಕೋಟಿ ಬಿಡುಗಡೆಯಾಗಿದೆ ಎಂದವರು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಬಾಗಲಕೋಟೆ ಶಾಸಕ ಉಮೇಶ ಮೇಟಿ, ವಿಧಾನ ಪರಿಷತ್ ಶಾಸಕರಾದ ಪಿ.ಎಚ್.ಪೂಜಾರ, ಹಣಮಂತ ನಿರಾಣಿ, ಬಿಟಿಡಿಎ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಜಿಲ್ಲಾಧಿಕಾರಿ ಸಂಗಪ್ಪ, ಉಪ ಮಹಾವ್ಯವಸ್ಥಾಪಕ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಬಿಟಿಡಿಎ ಮುಖ್ಯ ಅಭಿಯಂತರ ಚಂದ್ರಹಾಸ ಬಂಡಿ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೋನ್‌ಇನ್‌ನಲ್ಲಿ ಕಸದ ಸಮ್ಯಸ್ಯೆಗಳದ್ದೇ ಸದ್ದು!
ಎಸ್‌ಐಆರ್‌ನಿಂದಾಗಿ ಬೆಂಗಳೂರಿನಲ್ಲಿ 46.88 ಲಕ್ಷ ಮತದಾರರ ಹೆಸರುಗಳು ಡಿಲೀಟ್ । ರಾಜಧಾನಿಯಲ್ಲಿ ಬರೀ 59 ಲಕ್ಷ ಮತದಾರರು