ಕನ್ನಡಪ್ರಭ ವಾರ್ತೆ ಸರಗೂರುರಾಜ್ಯದಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ಸರಗೂರಿನ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.ತಹಸೀಲ್ದಾರ್ ಮೂಲಕ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್ಸಿ) ಮನವಿ ಸಲ್ಲಿಸಿ, ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡಬಾರದು ಎಂದು ಮನವಿ ಪತ್ರವನ್ನು ತಹಸೀಲ್ದಾರ್ ಮೋಹನ್ ಕುಮಾರಿ ಅವರಿಗೆ ನೀಡಿ ಒತ್ತಾಯಿಸಲಾಯಿತು.ತಾಲೂಕು ರೈತ ಸಂಘದ ಅಧ್ಯಕ್ಷ ಸಿಂಗೇಗೌಡ ಮಾತನಾಡಿ, ಮೈಸೂರು ಅರಸರ ಕಾಲದಲ್ಲೇ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗಿ ಜನಕಲ್ಯಾಣಕ್ಕಾಗಿ ಬಳಸಲಾಗಿತ್ತು. ಇಂದು ಸಾರ್ವಜನಿಕರು ಸರ್ಕಾರ ನಿಗದಿಪಡಿಸಿರುವ ದರದಂತೆ ವಿದ್ಯುತ್ ಬಿಲ್ ಪಾವತಿಸುತ್ತಿರುವ ಸಂದರ್ಭದಲ್ಲಿ ವಿದ್ಯುತ್ ಸರಬರಾಜಿನ ಹೊಣೆಯನ್ನು ಖಾಸಗಿ ಕಂಪನಿಗಳಿಗೆ ವಹಿಸುವುದು ಜನವಿರೋಧಿ ಕ್ರಮವಾಗಿದೆ ಎಂದು ಆರೋಪಿಸಿದರು.ಹಿಂದೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ವಿಭಜಿಸಲಾಗಿತ್ತು. ಪ್ರಸ್ತುತ ಕೆಪಿಟಿಸಿಎಲ್ ಉತ್ತಮ ಲಾಭದಲ್ಲಿದ್ದು, ಇಂತಹ ಸಂದರ್ಭದಲ್ಲಿ ಖಾಸಗೀಕರಣಕ್ಕೆ ಮುಂದಾಗುವುದು ಸಮಂಜಸವಲ್ಲ ಎಂದು ಹೇಳಿದರು.ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಿದರೆ ರೈತರಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್, ಕೃಷಿ ಪಂಪ್ಸೆಟ್ ಸೌಲಭ್ಯ, ಗೃಹಜ್ಯೋತಿ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಹಾಗೂ ಗಂಗಾ ಕಲ್ಯಾಣ ಯೋಜನೆಗಳ ಮೇಲೆ ಪರಿಣಾಮ ಬೀರಲಿದ್ದು, ಇದರಿಂದ ರೈತರು ಹಾಗೂ ಸಾಮಾನ್ಯ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.ಅಧ್ಯಕ್ಷ ಸಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಚಿಕ್ಕಬರಗಿ ನಂದೀಶ್ವರಸ್ವಾಮಿ, ಉಪಾಧ್ಯಕ್ಷ ಗಣೇಶ್, ಕಾರ್ಯಾಧ್ಯಕ್ಷ ಸತೀಶ್, ಖಜಾಂಚಿ ಕುಮಾರೇಗೌಡ, ಯುವ ಘಟಕದ ಅಧ್ಯಕ್ಷ ನವೀನ್, ಬಸವರಾಜು, ನಾಗೇಗೌಡ, ನಾಗರಾಜು, ನಿಂಗಣ್ಣ, ಗುರುಸ್ವಾಮಿ, ಚಿಕ್ಕವೀರಪ್ಪ, ಸಿದ್ದಪ್ಪ, ಮಹೇಶ್, ಕಾರಯ್ಯ ಇದ್ದರು.