- ಬಸ್ತಿಮಠದಲ್ಲಿ ಶಾಲಾ ಮಕ್ಕಳಿಗೆ ತಾಲೂಕು ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನೆ
ಧರ್ಮಸ್ಥಳದ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ಕಳೆದ 31 ವರ್ಷದಿಂದ ನೈತಿಕ ಮೌಲ್ಯ ಇರುವ 22 ಲಕ್ಷ ಪುಸ್ತಕಗಳನ್ನು ಮಕ್ಕಳಿಗೆ ವಿತರಿಸಿದ್ದೇವೆ ಎಂದು ಧರ್ಮಸ್ಥಳದ ಶಾಂತಿ ವನ ಟ್ರಸ್ಟ್ ನಿರ್ದೇಶಕ ಡಾ.ಶಶಿಕಾಂತ್ ಜೈನ್ ತಿಳಿಸಿದರು.
ಮಂಗಳವಾರ ಸಿಂಹನ ಗದ್ದೆ ಬಸ್ತಿಮಠದಲ್ಲಿ ಧರ್ಮಸ್ಥಳದ ಶಾಂತಿ ವನದ ಟ್ರಸ್ಟ್ ಹಾಗೂ ಬಸ್ತಿಮಠದ ಶ್ರೀ 1008 ಚಂದ್ರ ಪ್ರಭ ಸ್ವಾಮಿ ಚಾರಿಟಬಲ್ ಟ್ರಸ್ಟ್ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ ತಾಲೂಕಿನ ಪ್ರಾಥಮಿಕ-ಪ್ರೌಢ ಶಾಲೆಗಳ ಮಕ್ಕಳಿಗೆ ಏರ್ಪಡಿಸಿದ್ದ ಪ್ರಬಂಧ, ಶ್ಲೋಕ ಕಂಠ ಪಾಠ, ಚಿತ್ರಕಲೆ ಹಾಗೂ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಈ ವರ್ಷ ಪ್ರೌಢ ಶಾಲೆ ಮಕ್ಕಳಿಗೆ ಜ್ಞಾನ ಪಥ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಜ್ಞಾನ ರಥ ಎಂಬ ಪುಸ್ತಕಗಳನ್ನು ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಸುಮಾರು 1 ಲಕ್ಷ ಮಕ್ಕಳಿಗೆ ನೀಡಲಾಗಿದೆ ಎಂದರು.ಅಲ್ಲದೆ 4500 ಶಿಕ್ಷಕರಿಗೆ ಯೋಗ ಮತ್ತು ಮೌಲ್ಯ ಶಿಕ್ಷಣದ ಬಗ್ಗೆ ತರಬೇತಿ, ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕು ಎಂಬ ಉದ್ದೇಶ ದಿಂದ ಪ್ರತಿ ವರ್ಷ ಉತ್ತಮ ಲೇಖಕರು ಬರೆದ ಮೌಲ್ಯಯುತ ಪುಸ್ತಕಗಳನ್ನು ಮೊದಲೇ ಶಾಲೆಗಳಿಗೆ ಕಳಿಸ ಲಾಗುತ್ತದೆ. ಮಕ್ಕಳು ಪುಸ್ತಕಗಳನ್ನು ಓದಬೇಕು. ಪ್ರತಿ ತಾಲೂಕಿನಲ್ಲೂ ಪ್ರಾಥಮಿಕ- ಪ್ರೌಢ ಶಾಲೆ ಮಕ್ಕಳಿಗೆ ಸ್ಪರ್ಧೆ ನಡೆಸುತ್ತೇವೆ. ಈ ನಾಲ್ಕು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುತ್ತದೆ. ಗೆದ್ದ ಮಕ್ಕಳನ್ನು ಜಿಲ್ಲಾ ಮಟ್ಟ, ರಾಜ್ಯ ಮಟ್ಟದ ಸ್ಪರ್ಧೆಗೆ ಕಳಿಸುತ್ತೇವೆ. ಡಿ.10 ರ ಬುಧವಾರ ಚಿಕ್ಕಮಗಳೂರಿನ ವಿಶ್ವ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆಗಳು ನಡೆಯಲಿದೆ ಎಂದರು.
ಅತಿಥಿಯಾಗಿದ್ದ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಮಂಜಪ್ಪ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣದ ಅವಶ್ಯಕತೆ ಇದೆ. ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯವರು ಈಗಾಗಲೇ ಶಾಲೆಗಳಿಗೆ ಜ್ಞಾನ ರಥ ಹಾಗೂ ಜ್ಞಾನ ಪಥ ಎಂಬ ಪುಸ್ತಕ ಕಳಿಸಿದ್ದು ಮಕ್ಕಳನ್ನು ಓದಿದ್ದಾರೆ. ಇಂತಹ ಮೌಲ್ಯಯುತ ಪುಸ್ತಕಗಳನ್ನು ಮಕ್ಕಳು ಓದಿದರೆ ಮುಂದೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬಹುದು ಎಂದರು.
ಜಾಹ್ನವಿ ಮತ್ತು ತಂಡದವರು ಪ್ರಾರ್ಥಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಆರ್.ನಾಗರಾಜ್, ಜ್ವಾಲಾಮಾಲಿನಿ ಬಾಲಿಕಾ ಪ್ರೌಢ ಶಾಲೆ ಶಿಕ್ಷಕ ಗುಣಪಾಲ್ ಜೈನ್ , ರಂಗಪ್ಪ ಇದ್ದರು.
ವಿವಿಧ ಸ್ಪರ್ಧೆಗಳ ವಿಜೇತರು
ಶ್ಲೋಕ ಕಂಠ ಪಾಠ: ಪ್ರಥಮ ಪ್ರಿಯಾಂಕ, ದ್ವಿತೀಯ ನಾಗಶ್ರೀ, ತೃತೀಯ ವರ್ಷಿತ.