ವೆಸ್ಕೊ ಕಂಪನಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಲೇಖನ ಸಾಮಗ್ರಿ ವಿತರಣೆ

KannadaprabhaNewsNetwork | Published : Jul 1, 2024 1:54 AM

ಸಾರಾಂಶ

೨೫ ವರ್ಷಗಳಿಂದ ವೆಸ್ಕೊ ಕಂಪನಿಗೆ ಸೇವೆ ಸಲ್ಲಿಸುತ್ತಾ ಬಂದಿದೆ.

ಸಂಡೂರು: ತಾಲೂಕಿನ ಜೈಸಿಂಗ್‌ಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೆಸ್ಕೊ ಕಂಪನಿ, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೆಸ್ಕೊ ಕಂಪನಿಯಿಂದ ಸಂಡೂರು ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿನ ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಫೀಜು, ಉಚಿತವಾಗಿ ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ವೆಸ್ಕೊ ಕಂಪನಿಯ ಅಧಿಕಾರಿ ಬಿ.ಎಸ್. ಬೊಮ್ಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ೨೫ ವರ್ಷಗಳಿಂದ ವೆಸ್ಕೊ ಕಂಪನಿಗೆ ಸೇವೆ ಸಲ್ಲಿಸುತ್ತಾ ಬಂದಿದೆ. ಕಂಪನಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಸಂಡೂರು ಮತ್ತು ಸುತ್ತಲಿನ ಹಲವು ಗ್ರಾಮಗಳಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲಾ- ಕಾಲೇಜುಗಳಲ್ಲಿನ ವಿದ್ಯಾರ್ಥಿಗಳಿಗೆ ಶಾಲಾ ಫೀಜು, ಶಾಲಾ ಬ್ಯಾಗ್, ಲೇಖನ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ. ೨೦೨೩-೨೪ನೇ ಸಾಲಿನಲ್ಲಿ ೪೩ ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿ ೫೩೮೬ ವಿದ್ಯಾರ್ಥಿಗಳಿಗೆ ₹೧೮,೯೭,೫೪೯ ಮೊತ್ತದ ಲೇಖನ ಸಾಮಗ್ರಿಗಳು ಹಾಗೂ ₹೨,೯೨,೪೪೦ ಫೀಜ್ ಸೇರಿ ಒಟ್ಟು ₹೨೧,೯೦,೮೮೯ ಮೊತ್ತದ ಲೇಖನ ಸಾಮಗ್ರಿ ಹಾಗೂ ಫೀಜನ್ನು ವಿತರಿಸಲಾಗಿದೆ. ಈ ವರ್ಷ ಇದರ ಅಂದಾಜು ಮೊತ್ತ ₹೨೩ ಲಕ್ಷವಾಗಲಿದೆ ಎಂದರು.

ಕಂಪನಿಯ ವ್ಯವಸ್ಥಾಪಕ ಕೆ.ಎಸ್. ಚನ್ನಬಸಪ್ಪ ವಿದ್ಯಾರ್ಥಿಗಳಿಗೆ ಬ್ಯಾಗ್ ಮತ್ತಿತರ ಲೇಖನ ಸಾಮಗ್ರಿಗಳನ್ನು ವಿತರಿಸಿ, ವಿದ್ಯಾರ್ಥಿಗಳು ಇಂತಹ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು, ಉತ್ತಮ ಶಿಕ್ಷಣ ಪಡೆದು ಮುಂದೆ ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.

ಕಂಪನಿ ಅಧಿಕಾರಿ ಮಂದಾಲ್ ಷಣ್ಮುಖಪ್ಪ ಮಾತನಾಡಿದರು. ಸಿಆರ್‌ಪಿ ಶೇಖರ್ ಪಾಟೀಲ್, ಗ್ರಾಮದ ಮುಖಂಡ ನಾಗರಾಜಪ್ಪ, ಗ್ರಾಪಂ ಸದಸ್ಯ ರವಿ, ಮುಖ್ಯ ಶಿಕ್ಷಕ ಜಂಬಣ್ಣ ವೆಸ್ಕೊ ಕಂಪನಿಯ ಸಹಾಯ ಶ್ಲಾಘಿಸಿದರು.

ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ, ಉಪಾಧ್ಯಕ್ಷೆ ಎಂ.ರೇಖಾ, ಶಿಕ್ಷಕರಾದ ರಾಜಣ್ಣ, ಕರುಣಾ, ಸಣ್ಣನಿಂಗಪ್ಪ, ಪುಷ್ಪಲತಾ, ಸೌಮ್ಯಾ, ಗ್ರಾಪಂ ಸದಸ್ಯ ಶ್ರೀಧರ, ಗ್ರಾಮ ಮುಖಂಡರಾದ ಪರಸಪ್ಪ, ಕುಮಾರಸ್ವಾಮಿ, ಭಜನಾ ಹುಲುಗಪ್ಪ, ಮ್ಯಾಗಳಮನೆ ನಾಗಪ್ಪ, ಮಲ್ಲಪ್ಪ, ವೆಂಕಟಗಿರಿಯ ಗಂಗಾಭವಾನಿ, ವಿದ್ಯಾರ್ಥಿಗಳು, ಕಂಪನಿಯ ಅಧಿಕಾರಿಗಳಾದ ಮಂದಾಲ್ ಶಶೀಧರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share this article